

ನ್ಯೂಯಾರ್ಕ್: ಕರೊನಾ ಹಾವಳಿಯ ನಡುವೆ ನಡೆಯುತ್ತಿರುವ ಮೊದಲ ಗ್ರಾಂಡ್ ಸ್ಲಾಂ ಯುಎಸ್ ಓಪನ್‌ನಲ್ಲಿ ಅಮ್ಮಂದಿರ ಮೇಲುಗೈ ಮುಂದುವರಿದಿದ್ದು, ಕ್ವಾರ್ಟರ್ಫೈನಲ್ಗೇರಿರುವ 8 ಆಟಗಾರ್ತಿಯರ ಪೈಕಿ ಮೂವರು ಅಮ್ಮಂದಿರಾಗಿದ್ದಾರೆ. ಅವರೆಂದರೆ ದಾಖಲೆಯ 24ನೇ ಗ್ರಾಂಡ್ ಸ್ಲಾಂ ಗೆಲುವಿನ ಹಂಬಲದಲ್ಲಿರುವ ಆತಿಥೇಯ ತಾರೆ ಸೆರೇನಾ ವಿಲಿಯಮ್ಸ್, 2 ಗ್ರಾಂಡ್ ಸ್ಲಾಂಗಳ ಒಡತಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಮತ್ತು ತಾಯ್ತನದ ಬಿಡುವಿನ ಬಳಿಕ ಇತ್ತೀಚೆಗಷ್ಟೇ ಮರಳಿ ಕಣಕ್ಕಿಳಿದಿರುವ ಬಲ್ಗೇರಿಯಾದ ಸ್ವೆಟನಾ ಪಿರೊಂಕೋವಾ. ಈ ಪೈಕಿ ಸೆರೇನಾ-ಪಿರೊಂಕೋವಾ ಅಂತಿಮ 8ರ ಘಟ್ಟದಲ್ಲಿ ಮುಖಾಮುಖಿಯೂ ಆಗಲಿರುವುದರಿಂದ ಓರ್ವ ‘ಅಮ್ಮ’ ಸೆಮಿಫೈನಲ್‌ಗೇರುವುದು ಕೂಡ ಖಚಿತಗೊಂಡಿದೆ.
3ನೇ ಶ್ರೇಯಾಂಕಿತೆ ಸೆರೇನಾ ಸೋಮವಾರ ನಡೆದ 4ನೇ ಸುತ್ತಿನ ಪಂದ್ಯದಲ್ಲಿ ಗ್ರೀಸ್‌ನ ಮರಿಯಾ ಸಕ್ಕರಿ ಎದುರು 6-3, 6-7, 6-3ರಿಂದ ಗೆಲುವು ದಾಖಲಿಸಿದರು. ಈ ಮೂಲಕ ಯುಎಸ್ ಓಪನ್‌ನಲ್ಲಿ ಸತತ 12ನೇ ಬಾರಿ ಕ್ವಾರ್ಟರ್ಫೈನಲ್ಗೇರಿದ ಸಾಧನೆ ಮಾಡಿದರು. ತವರು ಪ್ರೇಕ್ಷಕರ ಗೈರಿನಲ್ಲಿ 39 ವರ್ಷದ ಸೆರೇನಾ ಜೋರಾಗಿ ಚೀರಾಡುತ್ತ ತಮಗೆ ತಾವೇ ಸ್ಫೂರ್ತಿ ತುಂಬುತ್ತಿದ್ದರು. ಕಳೆದ ವಾರವಷ್ಟೇ ವೆಸ್ಟರ್ನ್-ಸದರ್ನ್ ಓಪನ್‌ನಲ್ಲಿ ಸಕ್ಕರಿ ವಿರುದ್ಧ ಅನುಭವಿಸಿದ್ದ ಸೋಲಿಗೂ ಸೆರೇನಾ ಸೇಡು ತೀರಿಸಿಕೊಂಡರು.
2010ರ ವಿಂಬಲ್ಡನ್ ಸೆಮಿಫೈನಲಿಸ್ಟ್ ಪಿರೊಂಕೋವಾ ಫ್ರಾನ್ಸ್‌ನ ಅಲಿಜ್ ಕಾರ್ನೆಟ್ ವಿರುದ್ಧ 6-4, 6-7, 6-3ರಿಂದ ಗೆದ್ದು 8ರ ಘಟ್ಟಕ್ಕೇರಿದರು. ಭರ್ಜರಿ ಲಯದಲ್ಲಿರುವ ಅಜರೆಂಕಾ ಜೆಕ್ ಗಣರಾಜ್ಯದ ಕ್ಯಾರೊಲಿನಾ ಮುಚೋವಾ ವಿರುದ್ಧ 5-7, 6-1, 6-4ರಿಂದ ಗೆದ್ದರು. ಇದು ಅವರಿಗೆ ಕರೊನಾ ಕಾಲದಲ್ಲಿ ಸತತ 9ನೇ ಗೆಲುವಾಗಿದೆ. ಕಳೆದ ವಾರವಷ್ಟೇ ಅವರು ವೆಸ್ಟರ್ನ್-ಸದರ್ನ್ ಓಪನ್ ಜಯಿಸಿದ್ದರು. 31 ವರ್ಷದ ಅಜರೆಂಕಾಗೆ ತಾಯಿಯಾದ ಬಳಿಕ ಮೊದಲ ಗ್ರಾಂಡ್ ಸ್ಲಾಂ ಕ್ವಾರ್ಟರ್ಫೈನಲ್ ಪ್ರವೇಶ ಇದಾಗಿದೆ.
ಕೆನಿನ್‌ಗೆ ಶಾಕ್
ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಜಯಿಸಿ ಅಚ್ಚರಿ ಮೂಡಿಸಿದ್ದ ಅಮೆರಿಕದ ಯುವ ಆಟಗಾರ್ತಿ ಸೋಫಿಯಾ ಕೆನಿನ್ 3-6, 3-6 ನೇರಸೆಟ್‌ಗಳಿಂದ ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ವಿರುದ್ಧ ಆಘಾತ ಎದುರಿಸಿದರು. 2ನೇ ಶ್ರೇಯಾಂಕಿತೆ ಕೆನಿನ್ ಸತತ 2 ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ಅವಕಾಶದಿಂದ ವಂಚಿತರಾದರು.
ಕ್ವಾರ್ಟರ್ಫೈನಲ್ಗೇರಿದ ಥೀಮ್
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬಿಗ್3 ಖ್ಯಾತಿಯ ದಿಗ್ಗಜರಾದ ಫೆಡರರ್, ನಡಾಲ್, ಜೋಕೊವಿಕ್ ಅವರಿಲ್ಲದೆ, 2004ರ ಫ್ರೆಂಚ್ ಓಪನ್ ಬಳಿಕ ಮೊದಲ ಕ್ವಾರ್ಟರ್ಫೈನಲ್ ಹಂತದ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಯಾರೇ ಗೆದ್ದರೂ ಚೊಚ್ಚಲ ಗ್ರಾಂಡ್ ಸ್ಲಾಂ ಒಲಿಸಿಕೊಳ್ಳುವ ಅವಕಾಶ ಹೊಂದಿರುವ ಆಟಗಾರರ ಪೈಕಿ ಫೇವರಿಟ್ ಎನಿಸಿರುವ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಸುಲಭ ಗೆಲುವಿನೊಂದಿಗೆ ಎಂಟರ ಘಟ್ಟಕ್ಕೇರಿದರು. 2ನೇ ಶ್ರೇಯಾಂಕಿತ ಥೀಮ್ ಕೆನಡದ ಆಗೆರ್ ಅಲಿಸಿಮ್ ವಿರುದ್ಧ 7-6, 6-1, 6-1 ನೇರಸೆಟ್‌ಗಳಿಂದ ಜಯಿಸಿದರು. 3ನೇ ಶ್ರೇಯಾಂಕಿತ ರಷ್ಯಾದ ಡೆನಿಲ್ ಮೆಡ್ವೆಡೇವ್, ಆಂಡ್ರೆ ರುಬ್ಲೆವ್ ಮತ್ತು ಆಸ್ಟ್ರೇಲಿಯಾದ ಯುವ ಆಟಗಾರ ಅಲೆಕ್ಸ್ ಡಿ ಮಿನೌರ್ ಕ್ವಾರ್ಟರ್ಫೈನಲ್ಗೇರಿದರು. 2010ರ ಬಳಿಕ 30 ವರ್ಷ ಮೇಲ್ಪಟ್ಟ ಆಟಗಾರರಿಲ್ಲದೆ ಯುಎಸ್ ಓಪನ್‌ನಲ್ಲಿ ಮೊದಲ ಕ್ವಾರ್ಟರ್ಫೈನಲ್ ಕಾದಾಟ ಇದಾಗಿದೆ.
ಕ್ವಾರ್ಟರ್ಫೈನಲ್ಸ್:
ಮಹಿಳಾ ವಿಭಾಗ: ಅಜರೆಂಕಾ-ಮೆರ್ಟೆನ್ಸ್, ಸೆರೇನಾ-ಪಿರೊಂಕೋವಾ, ಒಸಾಕಾ-ರೋಜರ್ಸ್, ಬ್ರಾಡಿ-ಪುಟಿನ್‌ಸೆವಾ.
ಪುರುಷರ ವಿಭಾಗ: ಥೀಮ್-ಮಿನೌರ್, ರುಬ್ಲೆವ್-ಮೆಡ್ವೆಡೇವ್, ಜ್ವೆರೇವ್-ಕೋರಿಕ್, ಶಪೊವಲೋವ್-ಬುಸ್ಟಾ.
ಭಾರತದ ಸವಾಲು ಅಂತ್ಯ
ಕನ್ನಡಿಗ ರೋಹನ್ ಬೋಪಣ್ಣ ಮತ್ತು ಕೆನಡದ ಡೆನಿಸ್ ಶಪೊವಲೋವ್ ಜೋಡಿ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ಫೈನಲ್ನಲ್ಲಿ ಸೋಲು ಕಂಡಿದೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಬೋಪಣ್ಣ-ಶಪೊವಲೋವ್ ಜೋಡಿ ಸೋಮವಾರ ನಡೆದ 8ರ ಘಟ್ಟದ ಕಾದಾಟದಲ್ಲಿ ನೆದರ್ಲೆಂಡ್‌ನ ಜೀನ್ ಜೂಲಿಯನ್ ರೋಜರ್ ಮತ್ತು ರೊಮೇನಿಯಾದ ಹೊರಿಯ ಟೆಕಾವು ಜೋಡಿಗೆ 5-7, 5-7ರಿಂದ ಶರಣಾಯಿತು. 2018ರ ಯುಎಸ್ ಓಪನ್‌ನಲ್ಲಿ ಕ್ವಾರ್ಟರ್ಫೈನಲ್ಗೇರಿದ್ದ ಬಳಿಕ ಗ್ರಾಂಡ್ ಸ್ಲಾಂನಲ್ಲಿ ಬೋಪಣ್ಣ ಅವರ ಅತ್ಯುತ್ತಮ ನಿರ್ವಹಣೆ ಇದಾಗಿದೆ. ಟೂರ್ನಿಯ ಕಣದಲ್ಲಿದ್ದ ಇತರ ಭಾರತೀಯರಾದ ಸುಮಿತ್ ನಗಾಲ್ ಮತ್ತು ದಿವಿಜ್ ಶರಣ್ ಈ ಮುನ್ನ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಕ್ರಮವಾಗಿ 2 ಮತ್ತು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.