ಯುಎಸ್ ಓಪನ್ ಗ್ರಾಂಡ್ ಸ್ಲಾಂ; ಎಂಟರಘಟ್ಟಕ್ಕೇರಿದ ಅಲ್ಕರಾಜ್, ಮೆಡ್ವೆಡೇವ್, ರುಬ್ಲೆವ್

New Project (26)
Published on

ನ್ಯೂಯಾರ್ಕ್: ಹಾಲಿ ಚಾಂಪಿಯನ್ ಹಾಗೂ ವಿಶ್ವ ನಂ.1 ಕಾಲೋಸ್ ಅಲ್ಕರಾಜ್, 3ನೇ ಶ್ರೇಯಾಂಕಿತ ಡೆನಿಲ್ ಮೆಡ್ವೆಡೇವ್, 8ನೇ ಶ್ರೇಯಾಂಕಿತ ಆಂಡ್ರೆ ರುಬ್ಲೆವ್, 12ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೇವ್, ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ 2ನೇ ಶ್ರೇಯಾಂಕಿತೆ ಅರಿನಾ ಸಬಲೆಂಕಾ, ಕಿನ್ವೆನ್ ಝೆಂಗ್, 17 ಶ್ರೇಯಾಂಕಿತೆ ಮ್ಯಾಡಿಸನ್ ಕೀಯ್ಸ, ವಿಂಬಲ್ಡನ್ ಚಾಂಪಿಯನ್ ಮಾರ್ಕೆಟಾ ವೊಂಡ್ರೊಸೊವಾ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. 3ನೇ ಶ್ರೇಯಾಂಕಿತೆ ಜೆಸ್ಸಿಕಾ ಪೆಗುಲಾ, 5ನೇ ಶ್ರೇಯಾಂಕಿತೆ ಒನ್ಸ್ ಜಬೇರ್ ಸವಾಲು 4ನೇ ಸುತ್ತಿನಲ್ಲಿ ಅಂತ್ಯಗೊಂಡಿದೆ.

ಸ್ಪೇನ್‌ನ ಯುವ ತಾರೆ ಅಲ್ಕರಾಜ್ ಸೊಮವಾರ ರಾತ್ರಿ ನಡೆದ ಪ್ರಿ ಕ್ವಾರ್ಟರ್‌ೈನಲ್‌ನಲ್ಲಿ 6-3, 6-3, 6-4 ನೇರ ಸೆಟ್‌ಗಳಿಂದ ಇಟಲಿಯ ಮ್ಯಾಟಿಯೊ ಅರ್ನಾಲ್ಡಿ ಎದುರು 1 ಗಂಟೆ 57 ನಿಮಿಷದ ಹೋರಾಟದಲ್ಲಿ ಸುಲಭ ಗೆಲುವು ದಾಖಲಿಸಿ ಸತತ ಮೂರನೇ ಬಾರಿಗೆ ಉಪಾಂತ್ಯಕ್ಕೆ ಲಗ್ಗೆಯಿಟ್ಟರು. ರಷ್ಯಾ ಆಟಗಾರ ಮೆಡ್ವೆಡೇವ್ 2-6, 6-4, 6-1, 6-2 ರಿಂದ 13ನೇ ಶ್ರೇಯಾಂಕಿತ ಅಲೆಕ್ಸೃ್ ಡಿ ಮಿನಾರ್ ಎದುರು ಗೆಲುವು ದಾಖಲಿಸಿದರು. ಇದರೊಂದಿಗೆ ಐದು ವರ್ಷಗಳಲ್ಲಿ 4ನೇ ಬಾರಿಗೆ 8ರ ಘಟ್ಟಕ್ಕೇರಿದರು. ಮುಂದಿನ ಸುತ್ತಿನಲ್ಲಿ ದೇಶ ಬಾಂಧವ ಆಂಡ್ರೆ ರುಬ್ಲೆವ್ ಸವಾಲು ಎದುರಿಸಲಿದ್ದಾರೆ.

ಜರ್ಮನಿಯ 26 ವರ್ಷದ ಅಲೆಕ್ಸಾಂಡರ್ ಜ್ವೆರೇವ್ 6-4, 3-6, 6-2, 4-6,6-3 ರಿಂದ ಇಟಲಿನ ಜನ್ನಿಕ್ ಸಿನ್ನರ್ ವಿರುದ್ಧ 5 ಸೆಟ್‌ಗಳ ಮ್ಯಾರಥಾನ್ ಪಂದ್ಯದಲ್ಲಿ ಜಯದ ಸಂಭ್ರಮ ಕಂಡರು. 4 ಗಂಟೆ 41 ನಿಮಿಷಗಳ ಜಿದ್ದಾಜಿದ್ದಿನ ಪಂದ್ಯ ರಾತ್ರಿ 1.39ಕ್ಕೆ ಮುಕ್ತಾಯಗೊಂಡಿತು. 8ರ ಘಟ್ಟದಲ್ಲಿ 20 ವರ್ಷದ ಕಾರ್ಲೋಸ್ ಅಲ್ಕರಾಜ್ ಅವರನ್ನು ಎದುರಿಸಲಿದ್ದಾರೆ. ರಷ್ಯಾದ ಆಂಡ್ರೆ ರುಬ್ಲೆವ್ 6-3, 3-6,6-3, 6-4 ರಿಂದ ಇಂಗ್ಲೆಂಡ್‌ನ ಜಾಕ್ ಡಾರ್ಪರ್ ವಿರುದ್ದ ಜಯ ಸಾಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net