ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ರೋಹಿತ್​ ಶರ್ಮಾ

rohit sharma
Published on

ಚೆನ್ನೈ: ಪ್ರಸಕ್ತ ಸಾಲಿನ ಐಪಿಎಲ್​ನಲ್ಲಿ ರನ್​ಗಳ ಸುರಿಮಳೆಯೇ ಸುರಿದಿದೆ. ಆದರೆ ಕಳಪೆ ಫಾರ್ಮ್​ನಲ್ಲಿ ಹಲವಾರು ಬ್ಯಾಟ್ಸ್​ಮನ್​ಗಳು ರನ್​ ಬರವನ್ನು ಎದುರಿಸುತ್ತಿದ್ದು, ಈ ಪಟ್ಟಿಯಲ್ಲಿ ರೋಹಿತ್​ ಶರ್ಮಾ ಇದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿಯೂ ಅವರ ಕಳಪೆ ಫಾರ್ಮ್ ಮುಂದುವರಿದಿದೆ. ಟಿ20 ಹಾಗೂ ಏಕದಿನ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್​ ಮಾಡುತ್ತಿದ್ದ ಶರ್ಮಾರಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಸಕ್ತ ಐಪಿಎಲ್​ನಲ್ಲಿ ರನ್​ಗಳು ಹರಿದು ಬಂದಿಲ್ಲ.

ಮುಂಬೈ ತಂಡದ ಆರಂಭಿಕನಾಗಿ ಬ್ಯಾಟ್ಸ್​ಮನ್​ ಆಗಿರುವ ರೋಹಿತ್, ಚೆನ್ನೈ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದಿದ್ದರು. ಆದರೆ ಧೋನಿಯ ಚಾಣಾಕ್ಷತನದ ಮುಂದೆ ರೋಹಿತ್​ ಆಟ ನಡೆಯಲಿಲ್ಲ. ದೀಪಕ್​ ಚಾಹರ್​ ಎಸೆತದಲ್ಲಿ ಕೆಟ್ಟ ಹೊಡೆತಕ್ಕೆ ಮುಂದಾದ ರೋಹಿತ್,​ ಜಡೇಜಾಗೆ ಕ್ಯಾಚ್​ ನೀಡಿ ಪೆವಿಲಿಯನ್​ಗೆ ಹಿಂದಿರುಗಿದರು. ಖಾತೆ ತೆರೆಯುವಲ್ಲಿ ವಿಫಲರಾದ ರೋಹಿತ್​ ಈ ಮೂಲಕ ಐಪಿಎಲ್​ ಇತಿಹಾಸದಲ್ಲಿ 16ನೇ ಬಾರಿ ಶೂನ್ಯಕ್ಕೆ ಔಟಾದ ಕೆಟ್ಟ ದಾಖಲೆಗೆ ಪಾತ್ರರಾದರು.

15ನೇ ಬಾರಿ ಶೂನ್ಯಕ್ಕೆ ಔಟಾದ ದಿನೇಶ್​ ಕಾರ್ತಿಕ್​, ಮನದೀಪ್​ ಸಿಂಗ್ ಹಾಗೂ ಸುನೀಲ್​ ನರೇನ್​​ ಹೆಚ್ಚು ಡಕೌಟ್​ ಆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಅಂಬಟಿ ರಾಯಡು 14 ಬಾರಿ ಔಟಾಗಿ ಮೂರನೇ ಸ್ಥಾನದಲ್ಲಿದ್ದಾರೆ. ರೋಹಿತ್​ ಶರ್ಮಾ ಕಳಪೆ ಫಾರ್ಮ್​ನಲ್ಲಿರುವುದು ಮುಂಬೈ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದೆ.

ಒಂದು ಶತಕ ಹಾಗೂ 41 ಅರ್ಧಶತಕಗಳನ್ನು ಹೊಂದಿರುವ ರೋಹಿತ್​ ಐಪಿಎಲ್​ನಲ್ಲಿ ಈವರೆಗೆ ಒಟ್ಟು 6063 ರನ್​ಗಳನ್ನು ಬಾರಿಸಿದ್ದಾರೆ. ಈವರೆಗೆ ರೋಹಿತ್​ ನಾಯಕತ್ವದಲ್ಲಿ ಮುಂಬೈ 5 ಕಪ್​ಗಳನ್ನು ಗೆದ್ದಿದ್ದು, ಐಪಿಎಲ್​ನಲ್ಲಿ ತಮ್ಮದೇ ಆದ ಹಲವು ದಾಖಲೆಯನ್ನು ಹೊಂದಿದ್ದಾರೆ.(ಏಜೆನ್ಸೀಸ್​) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net