

Rohit Sharma : ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಅವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ರೋಹಿತ್ ಅವರನ್ನು ದಡೂತಿ ಹಾಗೂ ಓರ್ವ ಸಾಧಾರಣ ನಾಯಕ ಎಂದು ಕರೆಯುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಶಮಾ ಮೊಹಮ್ಮದ್, ರೋಹಿತ್ ಶರ್ಮಾ ಓರ್ವ ದಡೂತಿ ಕ್ರೀಡಾಪಟು. ಆತ ತೂಕ ಇಳಿಸಿಕೊಳ್ಳಬೇಕು. ಅಲ್ಲದೆ, ರೋಹಿತ್ ಭಾರತ ಕಂಡ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ ಎಂದು ಟೀಕಿಸಿದ್ದಾರೆ.
ಶಮಾ ಮೊಹಮ್ಮದ್ ಅವರ ಈ ಹೇಳಿಕೆಗಳು ವಿಶೇಷವಾಗಿ ಬಿಜೆಪಿ ನಾಯಕರು ಮತ್ತು ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ರೋಹಿತ್ ಶರ್ಮ ಓರ್ವ "ವಿಶ್ವ ದರ್ಜೆಯ ಆಟಗಾರ" ಎಂದು ಕಾಮೆಂಟ್ ಮಾಡಿದ ನೆಟ್ಟಿಗನಿಗೆ ಪ್ರತಿಕ್ರಿಯೆ ನೀಡಿರುವ ಶಮಾ ಮೊಹಮ್ಮದ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ಕಪಿಲ್ ದೇವ್ ಅವರಂತಹ ಭಾರತೀಯ ಕ್ರಿಕೆಟ್ ದಿಗ್ಗಜರಿಗೆ ಹೋಲಿಸಿದಾಗ ರೋಹಿತ್ರಲ್ಲಿ ವಿಶ್ವ ದರ್ಜೆ ಅನ್ನುವಂಥದ್ದು ಏನಿದೆ? ಭಾರತದ ನಾಯಕನಾಗುವ ಅದೃಷ್ಟ ಪಡೆದ ಸಾಧಾರಣ ಆಟಗಾರ ಎನ್ನುವ ಮೂಲಕ ಉರಿಯುವ ಬೆಂಕಿಗೆ ಶಮಾ ಮತ್ತಷ್ಟು ತುಪ್ಪ ಸುರಿದಿದ್ದಾರೆ.
ಶಮಾ ಮೊಹಮ್ಮದ್ ಅವರ ಹೇಳಿಕೆಗಳನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಕಾಂಗ್ರೆಸ್, ಬಾಡಿ ಶೇಮಿಂಗ್ ಮಾಡಿರುವುದಲ್ಲದೆ, ವಿಶ್ವಕಪ್ ವಿಜೇತರನ್ನು ಅಗೌರವಿಸಿದೆ ಎಂದು ಆರೋಪಿಸಿದೆ. ಕಾಂಗ್ರೆಸ್ ಜೊತೆಗಿನ ಸಂಬಂಧವನ್ನು ಮುರಿದುಕೊಂಡು ಬಿಜೆಪಿ ಸೇರಿರುವ ರಾಧಿಕಾ ಖೇರಾ ಮಾತನಾಡಿ, ತಮ್ಮ ಹಿಂದಿನ ಪಕ್ಷವು ದಶಕಗಳಿಂದ ಕ್ರೀಡಾಪಟುಗಳನ್ನು ಅವಮಾನಿಸುತ್ತಾ ಬಂದಿದೆ ಎಂದು ಆರೋಪಿಸಿದರು.
ದಶಕಗಳ ಕಾಲ ಕ್ರೀಡಾಪಟುಗಳನ್ನು ಅವಮಾನಿಸಿದ್ದ ಮತ್ತು ಆಟಗಾರರಿಗೆ ಮಾನ್ಯತೆ ನಿರಾಕರಿಸಿದ್ದ ಅದೇ ಕಾಂಗ್ರೆಸ್, ಇಂದು ಕ್ರಿಕೆಟ್ ದಂತಕಥೆಯನ್ನು ಅಣಕಿಸಲು ಧೈರ್ಯ ಮಾಡಿದೆಯೇ? ಸ್ವಜನಪಕ್ಷಪಾತದ ಮೇಲೆ ಅಭಿವೃದ್ಧಿ ಹೊಂದುತ್ತಿರುವ ಪಕ್ಷವು ಸ್ವಯಂ ನಿರ್ಮಿತ ಚಾಂಪಿಯನ್‌ಗೆ ಉಪನ್ಯಾಸ ನೀಡುತ್ತಿದೆಯೇ? ಎಂದು ಖೇರಾ ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರನ್ನು ಅಣಕಿಸಿದ ಖೇರಾ, ರೋಹಿತ್ ಶರ್ಮ ಭಾರತವನ್ನು ವಿಶ್ವಕಪ್ ಗೆಲುವಿನತ್ತ ಮುನ್ನಡೆಸಿದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಪಕ್ಷವನ್ನು ಗೊಂದಲಕ್ಕೆ ದೂಡದೆ ನಿರ್ವಹಿಸಲು ಹೆಣಗಾಡಿದರು ಎಂದರು. ಭಾರತಕ್ಕೆ ಕೀರ್ತಿ ತಂದ ಕ್ರಿಕೆಟಿಗನನ್ನು ಗುರಿಯಾಗಿಸಿಕೊಳ್ಳುವ ಬದಲು ಕಾಂಗ್ರೆಸ್ ಪಕ್ಷದ ಕ್ಷೀಣಿಸುತ್ತಿರುವ ಪ್ರಸ್ತುತತೆ, ವಿಶ್ವಾಸಾರ್ಹತೆ ಮತ್ತು ಚುನಾವಣಾ ಸ್ಥಾನಮಾನದ ಮೇಲೆ ಗಮನಹರಿಸುವಂತೆ ಜೈರಾಮ್ ರಮೇಶ್ ಅವರನ್ನು ಖೇರಾ ಒತ್ತಾಯಿಸಿದರು.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಪ್ರಸ್ತುತ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಗ್ರೂಪ್ ಹಂತದ ಪಂದ್ಯ ನಿನ್ನೆ (ಮಾ.02) ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 44 ರನ್‌ಗಳ ಭರ್ಜರಿ ಜಯ ಸಾಧಿಸಿತು. ನಾಯಕ ರೋಹಿತ್ ಶರ್ಮ ಆರಂಭದಲ್ಲಿಯೇ ಪತನ ಕಂಡರೂ, ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 249 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಗಳಿಸಿತು. ವರುಣ್ ಚಕ್ರವರ್ತಿ ನೇತೃತ್ವದ ಬೌಲಿಂಗ್ ದಾಳಿಯು ಅದ್ಭುತ ಪ್ರದರ್ಶನ ನೀಡಿ, ಕಿವೀಸ್ ಬ್ಯಾಟಿಂಗ್ ತಂಡವನ್ನು 205 ರನ್‌ಗಳಿಗೆ ಆಲೌಟ್ ಮಾಡಿತು. (ಏಜೆನ್ಸೀಸ್)