

ಪುಣೆ: ಅಲ್ಟಿಮೇಟ್ ಟೇಬಲ್ ಟೆನಿಸ್ ಟೂರ್ನಿಯ 4ನೇ ಆವೃತ್ತಿಯು ಪುಣೆಯ ಬಾಳೆವಾಡಿಯ ಶಿವ ಛತ್ರಪತಿ ಸ್ಪೊರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ಆರಂಭವಾಗಲಿದ್ದು, ಬೆಂಗಳೂರು ಸ್ಮಾಷರ್ಸ್, ಚೆನ್ನೆ ಲಯನ್ಸ್, ದಬಾಂಗ್ ಡೆಲ್ಲಿ ಟಿಟಿಸಿ, ಗೋವಾ ಚಾಲೆಂಜರ್ಸ್, ಪುಣೇರಿ ಪಲ್ಟನ್ ಮತ್ತು ಯು ಮುಂಬಾ ಟಿಟಿ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಭಾರತದ ಸ್ಟಾರ್ ಆಟಗಾರ್ತಿ ಮಣಿಕಾ ಬಾತ್ರಾ ಸೀಸನ್ 4ರ ಪ್ರಮುಖ ಆಕರ್ಷಣೆಯಾಗಿದ್ದು, ಬೆಂಗಳೂರು ಸ್ಮಾಷರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಈ ಆವೃತ್ತಿಯಲ್ಲಿ 12 ಅಂತಾರಾಷ್ಟ್ರೀಯ ಆಟಗಾರರು ಸೇರಿ ಒಟ್ಟು 36 ಆಟಗಾರರು ಆಡಲಿದ್ದು, ಇದರಲ್ಲಿ 14 ಆಟಗಾರರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರೆ, ಇನ್ನೂ 9 ಆಟಗಾರರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.
ಹಾಲಿ ಚಾಂಪಿಯನ್ ಎನಿಸಿರುವ ಚೆನ್ನೆ ಲಯನ್ಸ್ ತನ್ನ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಚೆನ್ನೆ ಲಯನ್ಸ್ ತಂಡವನ್ನು ಭಾರತದ ಅನುಭವಿ ಟೇಬಲ್ ಟೆನಿಸ್ ಪಟು ಅಚಂತಾ ಶರತ್ ಕಮಲ್ ಮುನ್ನಡೆಸಲಿದ್ದಾರೆ. ಟೇಬಲ್ ಟೆನಿಸ್ ಆಟವನ್ನು ನಿಜವಾಗಿಯೂ ರೋಮಾಂಚನಗೊಳಿಸುವುದರಿಂದ ನಾವೆಲ್ಲರೂ ಕೆಲವು ಉನ್ನತ ಟೇಬಲ್ ಟೆನಿಸ್ ಕ್ರಮವನ್ನು ನೋಡಲು ಸಿದ್ಧರಿದ್ದೆವೆ. ಬಹಳಷ್ಟು ಯುವ ಆಟಗಾರರು ಸಹ ಇದರ ಭಾಗವಾಗುತ್ತಾರೆ, ಇದು ಭಾರತೀಯ ಟೇಬಲ್ ಟೆನಿಸ್‌ಗೆ ನಿಜವಾಗಿಯೂ ದೊಡ್ಡ ವಿಷಯ ಎಂದು ಶರತ್ ಕಮಲ್ ತಿಳಿಸಿದ್ದಾರೆ.
ಸೀಸನ್ 4ರಲ್ಲಿ ಸಾಕಷ್ಟು ಹೊಸ ಮುಖಗಳಿವೆ ಮತ್ತು ಅವರೆಲ್ಲರೂ ನಿಜವಾಗಿಯೂ ಪ್ರತಿಭಾವಂತರಾಗಿರುವುದರಿಂದ ಅವರೊಂದಿಗೆ ಆಡುವುದು ರೋಮಾಂಚನಕಾರಿ ಅನುಭವ ನೀಡಲಿದೆ ಎಂದು ಬಾತ್ರಾ ಸಂತಸ ಹಂಚಿಕೊಂಡಿದ್ದಾರೆ.
ಟೇಬಲ್ ಟೆನಿಸ್ ಫೆಡರೇಷನ್ ಆಫ್ ಇಂಡಿಯಾ (ಟಿಟಿಎಫ್‌ಐ) ಆಶ್ರಯದಲ್ಲಿ ನೀರಜ್ ಬಜಾಜ್ ಮತ್ತು ವಿಟಾ ದಾನಿ ಅವರು 2017ರಲ್ಲಿ ಮೊದಲ ಬಾರಿಗೆ ಫ್ರಾಂಚೈಸಿ ಆಧಾರಿತ ಲೀಗ್ ಅನ್ನು ಆರಂಭಿಸಿದರು. ಮೂರು ಆವೃತ್ತಿಯಲ್ಲಿ ಟೂರ್ನಿ ಯಶಸ್ಸು ಕಂಡಿದೆ.
ಎಲ್ಲ ಪಂದ್ಯಗಳು ಸಂಜೆ 7.30 ಕ್ಕೆ ಸ್ಪೊರ್ಟ್ಸ್ 18 ಹಾಗೂ ಜಿಯೋ ಸಿನಿಮಾದಲ್ಲಿ ನೇರ ಪ್ರಸಾರ ಕಾಣಲಿವೆ.