

ನವದೆಹಲಿ: ಕರೊನಾ ಭಯ ನಿವಾರಿಸಿ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿದ್ದ ಕ್ರಿಕೆಟಿಗರಿಗೆ ಈಗ ಗಾಯದ ಸಮಸ್ಯೆ ಎದುರಾಗಿದೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೇಸನ್ ರಾಯ್ ಮತ್ತು ವೇಗಿ ಹ್ಯಾರಿ ಗುರ್ನಿ ಗಾಯದಿಂದಾಗಿ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಬೇಕಾಗಿದ್ದ ಜೇಸನ್ ರಾಯ್ ಸ್ಥಾನವನ್ನು ಆಸ್ಟ್ರೇಲಿಯಾದ ಎಡಗೈ ವೇಗಿ ಡೇನಿಯಲ್ ಸ್ಯಾಮ್ಸ್ ತುಂಬಲಿದ್ದಾರೆ. ಸ್ಯಾಮ್ಸ್ ಸದ್ಯ ಆಸೀಸ್ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ.
ಇದನ್ನೂ ಓದಿ: ಪೇಪರ್ ಹಾಕುತ್ತಿದ್ದ ಹುಡುಗನಿಗೆ ಈಗ ಖೇಲ್ರತ್ನ ಗೌರವ
ಕೋಲ್ಕತ ನೈಟ್‌ರೈಡರ್ಸ್ ಪರ ಆಡಬೇಕಾಗಿದ್ದ ಹ್ಯಾರಿ ಗುರ್ನಿ, ಭುಜದ ನೋವಿಗೆ ಮುಂದಿನ ತಿಂಗಳು ಶಸಚಿಕಿತ್ಸೆಗೆ ಒಳಗಾಗಲಿದ್ದಾರೆ. ಇದರಿಂದ ಟೂರ್ನಿ ಆರಂಭಕ್ಕೂ ಮುನ್ನವೇ ಕೆಕೆಆರ್ ತಂಡ ಹಿನ್ನಡೆ ಅನುಭವಿಸಿದೆ. ಕಳೆದ ವರ್ಷ ಕೆಕೆಆರ್ ತಂಡದ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಇಂಗ್ಲೆಂಡ್ ವೇಗಿ ಆಡಿದ 8 ಪಂದ್ಯಗಳಿಂದ 7 ವಿಕೆಟ್ ಕಬಳಿಸಿದ್ದರು. ಗುರ್ನಿಗೆ ಬದಲಿ ಆಟಗಾರನನ್ನು ಕೆಕೆಆರ್ ಇನ್ನಷ್ಟೇ ಪ್ರಕಟಿಸಬೇಕಿದೆ.
ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಟಾಲಿಟಿ ಬ್ಲಾಸ್ಟ್ ಟಿ20 ಟೂರ್ನಿಯಿಂದಲೂ ಗುರ್ನಿ ಹೊರಗುಳಿಯಲಿದ್ದಾರೆ. ಈ ಟೂರ್ನಿಯಲ್ಲಿ ಕಳೆದ 3 ವರ್ಷಗಳಿಂದ 63 ವಿಕೆಟ್ ಕಬಳಿಸಿದ್ದರು. ಇಂಗ್ಲೆಂಡ್ ತಂಡದ ಪರ 10 ಏಕದಿನ ಹಾಗೂ 6 ಟಿ20 ಪಂದ್ಯಗಳಿಂದ 11 ಹಾಗೂ 3 ವಿಕೆಟ್ ಕಬಳಿಸಿದ್ದರು.