

ನವದೆಹಲಿ: ಐಪಿಎಲ್ ಇತಿಹಾಸದಲ್ಲಿ ಒಂದು ಬಾರಿಯೂ ಕಪ್ ಗೆಲ್ಲದ ಹಾಗೂ ಹೀನಾಯ ಸೋಲುಗಳನ್ನು ಕಂಡಿರುವ ಫ್ರಾಂಚೈಸಿ ಎಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಫೈನಲ್ ಹಣಾಹಣಿಗೆ ಬಂದು ಚಾಂಪಿಯನ್ಸ್ ಪಟ್ಟ ಪಡೆಯದೇ ಇದ್ದರೂ ಸಹ ಸೋಲಿನ ಮೂಲಕವೇ ಇಂದು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಂತರಾಳದಿಂದ ಸಂಪಾದಿಸಿದ ತಂಡ ಎಂಬ ಹೆಗ್ಗಳಿಕೆ ಇರುವುದು ಆರ್ಸಿಬಿಗೆ ಮಾತ್ರ. ಐಪಿಎಲ್ನಲ್ಲಿ ಅತ್ಯಂತ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಫ್ರಾಂಚೈಸಿ ಯಾವುದಾದರೂ ಇದ್ದರೆ ಅದು ಆರ್ಸಿಬಿ ಎಂಬುದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ಗೊತ್ತಿರುವ ಸಂಗತಿ. ಸೋಲೇ ಇರಲಿ, ಗೆಲುವೇ ಇರಲಿ, ತಂಡವನ್ನು ಪ್ರತಿ ಹಂತದಲ್ಲೂ ಹುಚ್ಚೆದ್ದು ಪ್ರೋತ್ಸಾಹಿಸುವುದು ಈ ಟೀಮ್ನ ಅಭಿಮಾನಿಗಳ ಹುಟ್ಟುಗುಣ ಎಂದರೆ ಖಂಡಿತ ತಪ್ಪಾಗಲಾರದು. ಇಷ್ಟರ ಮಟ್ಟಿಗೆ ಪ್ರೀತಿ ಇಟ್ಟುಕೊಂಡಿರುವ ಫ್ಯಾನ್ಸ್, ಮತ್ತೊಮ್ಮೆ ವಿರಾಟ್ ಕೊಹ್ಲಿ ಹೆಸರನ್ನು (RCB Captain) ಮುನ್ನೆಲೆಗೆ ತಂದಿದ್ದಾರೆ.
ಇನ್ನು ಇಂದು ನಡೆದ ಐಪಿಎಲ್ ರಿಟೆನ್ಶನ್ ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮುಖವಾಣಿ ಆಗಿರುವ ವಿರಾಟ್ ಕೊಹ್ಲಿಯನ್ನು ಫ್ರಾಂಚೈಸಿ ಎಂದಿನಂತೆ ಉಳಿಸಿಕೊಂಡಿದೆ. ಈ ಬಾರಿ 21 ಕೋಟಿ ರೂ.ಗೆ ಕೊಹ್ಲಿರನ್ನು ತಮ್ಮ ತಂಡದಲ್ಲಿ ಇರಿಸಿಕೊಂಡಿದೆ. ಇದು ಆರ್ಸಿಬಿ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದ್ದು, ಕ್ಯಾಪ್ಟನ್ ಆಗಿ 'ರನ್ಮಷಿನ್'ಅವರನ್ನೇ ಆಯ್ಕೆ ಮಾಡಿಕೊಳ್ಳಿ ಎಂದು ಜಾಲತಾಣಗಳ ಮುಖೇನ ಫ್ಯಾನ್ಸ್ ಒತ್ತಾಯ ಮಾಡಿದ್ದಾರೆ. ಆದ್ರೆ, ಈ ವಿಷಯದಲ್ಲಿ ಫ್ರಾಂಚೈಸಿಗೆ ಗೊಂದಲ ಇರುವುದು ಖಚಿತ. ಅದಕ್ಕೆ ಬಲವಾದ ಕಾರಣವೂ ಇದೆ.
17ನೇ ಆವೃತ್ತಿಯಲ್ಲಿ ಫಾಫ್ ಡು ಪ್ಲೆಸಿಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕ್ಯಾಪ್ಟನ್ ಆಗಿ ಮುನ್ನಡೆಸಿದ್ದೇ ಆದರೂ ಉತ್ತಮ ಫಲಿತಾಂಶ ದೊರಕಲಿಲ್ಲ. ಆದರೆ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ ಮುಂದುವರಿದರೆ, ಫಲಿತಾಂಶದ ಜತೆಗೆ ಆಟಕ್ಕೆ ಇನ್ನಷ್ಟು ಕಳೆ ಬರಲಿದೆ ಎಂಬುದು ಅಭಿಮಾನಿಗಳ ಅನಿಸಿಕೆ, ಅಭಿಪ್ರಾಯ. ಹೀಗಾಗಿ ಆರ್ಸಿಬಿಗೆ ಮತ್ತೊಮ್ಮೆ ವಿರಾಟ್ ಅವರೇ ಕ್ಯಾಪ್ಟನ್ ಆಗಲಿ ಎಂಬುದು ಫ್ಯಾನ್ಸ್ಗಳ ಆಶಯ. ಇದು ಒಂದೆಡೆಯಾದರೆ, ಆಕ್ಷನ್ಗೆ ಬಂದಿರುವ ಕನ್ನಡಿಗ ಕೆ.ಎಲ್. ರಾಹುಲ್ ಮೇಲೆ ಫ್ರಾಂಚೈಸಿ ಕಣ್ಣಿಟ್ಟಿರುವುದು ಮತ್ತೊಂದೆಡೆ.
ಆರ್ಸಿಬಿಗೆ ನೂತನ ನಾಯಕನ ಅವಶ್ಯಕತೆ ಹೆಚ್ಚಾಗಿದ್ದು, ಈ ಸಾಲಿನಲ್ಲಿ ವಿರಾಟ್ ಹಾಗೂ ರಾಹುಲ್ ಹೆಸರು ಮೊದಲಿಗಿದೆ. ಕೊಹ್ಲಿ ಅವರ ಉಪಸ್ಥಿತಿ ಈಗಾಗಲೇ ತಂಡದಲ್ಲಿದೆ. ಆದರೆ, ಕೆ.ಎಲ್. ರಾಹುಲ್ ಇನ್ನು ತಂಡದಲ್ಲಿ ಸ್ಥಾನ ಪಡೆದಿಲ್ಲ. ಅದಕ್ಕೆ, ಹರಾಜು ಪ್ರಕ್ರಿಯೆ ನಡೆಯಬೇಕು, ಅಲ್ಲಿ ಮ್ಯಾನೇಜ್ಮೆಂಟ್ ಕನ್ನಡಿಗನಿಗೆ ಮಣೆ ಹಾಕಲಿದೆಯಾ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಆಕ್ಷನ್ನಲ್ಲಿ ಏನಾದರೂ ರಾಹುಲ್ರನ್ನು ಆರ್ಸಿಬಿ ಕರೆದುಕೊಂಡರೆ, ಖಂಡಿತವಾಗಿ ತಂಡದ ಹೊಸ ಕ್ಯಾಪ್ಟನ್ ಆಗಿ ಕೆ.ಎಲ್. ರಾಹುಲ್ ಬರುವುದು ಬಹುತೇಕ ಗ್ಯಾರಂಟಿ ಎಂದೇ ವರದಿಗಳು ಉಲ್ಲೇಖಿಸಿವೆ. ಈ ಎಲ್ಲಾ ಗೊಂದಲಗಳಿಗೆ ಹರಾಜು ಪ್ರಕ್ರಿಕೆಯಲ್ಲಿ ಸ್ಪಷ್ಟ ಉತ್ತರ ಸಿಗುವ ನಿರೀಕ್ಷೆಯಿದೆ,(ಏಜೆನ್ಸೀಸ್).