ಭಾರತದ ಇಬ್ಬರು, ಬಾಂಗ್ಲಾದ ಮೂವರು ಆಟಗಾರರಿಗೆ ಅಮಾನತು ಅಂಕದ ಶಿಕ್ಷೆ

Bangla 11 Feb 20
Published on

ದುಬೈ: 19 ವಯೋಮಿತಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಜಗಳವಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಂಪಿಯನ್ ಬಾಂಗ್ಲಾದೇಶದ ಮೂವರು ಆಟಗಾರರಿಗೆ ಮತ್ತು ರನ್ನರ್​ಅಪ್ ಭಾರತ ತಂಡದ ಇಬ್ಬರು ಪ್ರಮುಖ ಆಟಗಾರರಾದ ರವಿ ಬಿಷ್ಣೋಯಿ ಮತ್ತು ಆಕಾಶ್ ಸಿಂಗ್​ಗೆ ಅಮಾನತು ಅಂಕದ ಶಿಕ್ಷೆಯನ್ನು ಐಸಿಸಿ ನೀಡಿದೆ. ಇದರಿಂದ, ಮುಂದಿನ ದಿನಗಳಲ್ಲಿ ಸೀನಿಯರ್ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಲಿರುವ ಯುವ ಆಟಗಾರರ ವೃತ್ತಿಜೀವನಕ್ಕೆ ಹಿನ್ನಡೆಯಾಗಿದೆ.

ಐಸಿಸಿ ನೀತಿಸಂಹಿತೆ ಉಲ್ಲಂಘನೆಗಾಗಿ ಐವರು ಆಟಗಾರರಿಗೆ ಭಿನ್ನ ರೀತಿಯಲ್ಲಿ ಅಮಾನತು ಅಂಕ ನೀಡಲಾಗಿದೆ. ಪ್ರತಿ ಒಂದು ಅಮಾನತು ಅಂಕಕ್ಕೆ ಆಟಗಾರನೊಬ್ಬ ಒಂದು ಏಕದಿನ, ಟಿ20, 19 ವಯೋಮಿತಿ ಪಂದ್ಯ ಅಥವಾ ಎ ತಂಡದ ಅಂತಾರಾಷ್ಟ್ರೀಯ ಪಂದ್ಯ ನಿಷೇಧ ಎದುರಿಸಬೇಕಾಗುತ್ತದೆ. ಈ ಅಂಕ ಅವರಿಗೆ ಮುಂದಿನ 2 ವರ್ಷಗಳ ಅವಧಿಗೆ ಅನ್ವಯಿಸಲಿದೆ. ಎಡಗೈ ಮಧ್ಯಮವೇಗಿ ಆಕಾಶ್ ಸಿಂಗ್ 8 ಅಮಾನತು ಅಂಕಕ್ಕೆ ಗುರಿಯಾಗಿದ್ದಾರೆ. ಇದು 6 ಡಿಮೆರಿಟ್ ಅಂಕಕ್ಕೆ ಸಮನಾಗಿದೆ. ಸ್ಪಿನ್ನರ್ ರವಿ ಬಿಷ್ಣೋಯಿ 5 ಅಮಾನತು ಅಂಕ ಪಡೆದಿದ್ದು, ಇದು 5 ಡಿಮೆರಿಟ್ ಅಂಕ್ಕೆ ಸಮನಾಗಿದೆ. ರವಿ ಬಿಷ್ಣೋಯಿ ಫೈನಲ್ ಪಂದ್ಯದ ನಡುವೆಯೂ ವಿಕೆಟ್ ಕಬಳಿಸಿದ ಬಳಿಕ ತೋರಿದ ದುರ್ವರ್ತನೆಗಾಗಿ 2 ಡಿಮೆರಿಟ್ ಅಂಕ ಪಡೆದಿದ್ದು, ಅವರ ಒಟ್ಟು ಡಿಮೆರಿಟ್ ಅಂಕ 7ಕ್ಕೆ ಏರಿಕೆಯಾಗಿದೆ.

ಫೈನಲ್ ಬಳಿಕ ಅಸಭ್ಯ ವರ್ತನೆ ತೋರಿದ ಬಾಂಗ್ಲಾ ಆಟಗಾರರ ಪೈಕಿ ತೌಹಿದ್ ಹೃದಯ್ಗೆ 10 ಅಮಾನತು ಅಂಕ ನೀಡಲಾಗಿದ್ದು, ಇದು 6 ಡಿಮೆರಿಟ್ ಅಂಕಕ್ಕೆ ಸಮನಾಗಿದೆ. ಶಮೀಮ್ ಹುಸೇನ್​ಗೆ 8 ಅಮಾನತು ಅಂಕ ನೀಡಲಾಗಿದ್ದು, ಇದು 6 ಡಿಮೆರಿಟ್ ಅಂಕಕ್ಕೆ ಸಮನಾಗಿದೆ. ರಕಿಬುಲ್ ಹಸನ್​ಗೆ 4 ಅಮಾನತು ಅಂಕ ನೀಡಲಾಗಿದ್ದು, ಇದು 5 ಡಿಮೆರಿಟ್ ಅಂಕಕ್ಕೆ ಸಮನಾಗಿದೆ. ಆದರೆ ಪಂದ್ಯದುದ್ದಕ್ಕೂ ಭಾರತೀಯರನ್ನು ನಿಂದಿಸುತ್ತಿದ್ದ ಬಾಂಗ್ಲಾ ವೇಗಿ ಶರೀಫುಲ್ ಇಸ್ಲಾಂ ಯಾವುದೇ ಶಿಕ್ಷೆಗೆ ಗುರಿಯಾಗದಿರುವುದು ಅಚ್ಚರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net