

ಬೆಂಗಳೂರು: ಐಪಿಎಲ್ 13ನೇ ಆವೃತ್ತಿಯಲ್ಲಿ ಸತತ 2 ಸೋಲುಗಳನ್ನು ಕಂಡ ಬೆನ್ನಲ್ಲಿಯೇ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಅಭಿಮಾನಿಗಳೆಲ್ಲ ತತ್ತರಿಸಿ ಹೋದಂತಿದೆ. ಇದರಿಂದಾಗಿ ಟ್ವಿಟರ್‌ನಲ್ಲಿ ‘ಕಂಬ್ಯಾಕ್ ರೈನಾ’ ಹ್ಯಾಷ್‌ಟ್ಯಾಗ್ ಮೂಲಕ ಟ್ರೆಂಡಿಂಗ್ ಶುರುವಾಗಿದೆ.
ಚೆನ್ನೈ ಸೂಪರ್‌ಕಿಂಗ್ಸ್ ತಂಡ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದರೂ, ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನಂಥ ಯುವ ಆಟಗಾರರ ತಂಡದ ಎದುರು ಸೋಲು ಕಂಡಿದೆ. ಇದರಿಂದಾಗಿ ಎಂಎಸ್ ಧೋನಿ ಪಾಳಯದಲ್ಲಿ ಆತಂಕ ಶುರುವಾಗಿದೆ. ಇದರಿಂದಾಗಿ ಚಿನ್ನ ತಲಾ ಸುರೇಶ್ ರೈನಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವ ಅಭಿಮಾನಿಗಳು ಅವರು, ಐಪಿಎಲ್ ಟೂರ್ನಿಗೆ ವಾಪಸ್ ಆಗಬೇಕೆಂಬ ಬೇಡಿಕೆ ಮಂಡಿಸುತ್ತಿದ್ದಾರೆ.
ಚೆನ್ನೈ ಸೂಪರ್‌ಕಿಂಗ್ಸ್ ತಂಡಕ್ಕೆ ಸ್ಪಿನ್ನರ್‌ಗಳ ವೈಫಲ್ಯದ ಜತೆಗೆ ಬ್ಯಾಟಿಂಗ್ ವಿಭಾಗದ ನೀರಸ ನಿರ್ವಹಣೆಯೂ ಹಿನ್ನಡೆ ತಂದಿದೆ. ಫಾಫ್ ಡು ಪ್ಲೆಸಿಸ್ ಹೊರತಾಗಿ ತಂಡದಲ್ಲಿ ಸ್ಫೋಟಕ ಆಟದ ಕೊರತೆ ಇದೆ. ಇನ್ನು ಅಂಬಟಿ ರಾಯುಡು ಮೊದಲ ಪಂದ್ಯದಲ್ಲಿ ಮಿಂಚಿದರೂ ಬಳಿಕ ಗಾಯದಿಂದಾಗಿ ಹೊರಗುಳಿದಿದ್ದಾರೆ. ನಾಯಕ ಎಂಎಸ್ ಧೋನಿ ಅಭ್ಯಾಸದ ಕೊರತೆಯಿಂದಾಗಿ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಇದರಿಂದಾಗಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಅಭಿಮಾನಿಗಳು, ಉಪನಾಯಕ ಸುರೇಶ್ ರೈನಾ ಅವರ ಸೇವೆಯನ್ನು ಮಿಸ್ ಮಾಡಿಕೊಳ್ಳಲಾರಂಭಿಸಿದ್ದಾರೆ.
ಐಪಿಎಲ್ ಟೂರ್ನಿಗಾಗಿ ಸುರೇಶ್ ರೈನಾ ಯುಎಇಗೆ ತೆರಳಿದ್ದರೂ, ಬಳಿಕ ವೈಯಕ್ತಿಕ ಕಾರಣ ನೀಡಿ ತವರಿಗೆ ವಾಪಸ್ ಆಗಿದ್ದಾರೆ. ಹೋಟೆಲ್ ಕೋಣೆ ವಿಚಾರದಲ್ಲಿ ತಂಡದ ಮ್ಯಾನೇಜ್‌ಮೆಂಟ್ ಜತೆ ರೈನಾ ಜಗಳವಾಡಿದ್ದಾರೆ ಎನ್ನಲಾಗಿತ್ತು. ಆದರೆ ಇದನ್ನು ರೈನಾ ಮತ್ತು ಟೀಮ್ ಮ್ಯಾನೇಜ್‌ಮೆಂಟ್ ಇಬ್ಬರೂ ನಿರಾಕರಿಸಿದ್ದಾರೆ. ಈ ನಡುವೆ ಸಿಎಸ್‌ಕೆ ತಂಡ ಇನ್ನೂ ಸುರೇಶ್ ರೈನಾ ಬದಲಿಗೆ ಬೇರೆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ. ಹೀಗಾಗಿ ಸುರೇಶ್ ರೈನಾ ಅವರನ್ನೇ ತಂಡಕ್ಕೆ ಮರಳಿ ಸೇರಿಸಿಕೊಳ್ಳಬೇಕೆಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದು, ಅವರ ಪುನರಾಗಮನಕ್ಕಾಗಿ ‘ಕಂಬ್ಯಾಕ್ ರೈನಾ’ ಟ್ರೆಂಡಿಂಗ್ ಆರಂಭಿಸಿದ್ದಾರೆ.