

ಬೆಂಗಳೂರು: ದಿಗ್ಗಜ ಬ್ಯಾಟ್ಸ್ಮನ್ ಸಚಿನ್ ತೆಂಡುಲ್ಕರ್ ಕ್ರಿಕೆಟ್ ಜಗತ್ತಿನ ಬಹುತೇಕ ಬ್ಯಾಟಿಂಗ್ ದಾಖಲೆಗಳ ಒಡೆಯರು. 2 ದಶಕಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕವನ್ನು ಆಳಿದ ಸಚಿನ್ ಯಶಸ್ಸಿನಲ್ಲಿ ಮೂವರು ಗುರುಗಳು ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ಗುರುಪೂರ್ಣಿಮೆಯ ದಿನವಾದ ಭಾನುವಾರದಂದು ಸಚಿನ್ ತೆಂಡುಲ್ಕರ್ ಈ ಮೂವರು ಗುರುಗಳನ್ನು ವಿಶೇಷವಾಗಿ ನೆನೆಸಿಕೊಂಡಿದ್ದಾರೆ. ಹಾಗಾದರೆ ಆ ಮೂವರು ಯಾರು ಗೊತ್ತೇ?
'ನಾನು ಬ್ಯಾಟ್ ಕೈಗೆತ್ತಿಕೊಂಡಾಗಲೆಲ್ಲಾ ಮೂವರು ವ್ಯಕ್ತಿಗಳನ್ನು ನೆನಪಿಸಿಕೊಳ್ಳುತ್ತೇನೆ. ಈ ಮೂವರೂ ನನ್ನ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದವರು. ನಾನಿಂದು ಏನಾಗಿದ್ದೇನೋ ಅದೆಲ್ಲವೂ ಅವರಿಂದಲೇ ಆಗಿದ್ದು. ನನ್ನ ಅಣ್ಣ ಅಜಿತ್ ಕೋಚ್ ರಮಾಕಾಂತ್ ಆಚ್ರೇಕರ್ ಬಳಿಗೆ ನನ್ನನ್ನು ಕರೆದುಕೊಂಡು ಹೋಗಿ ಕ್ರಿಕೆಟ್ ತರಬೇತಿಗೆ ಸೇರಿಸಲು ನಿರ್ಧರಿಸಿದವರು. ನಾನು ಮೈದಾನಕ್ಕೆ ಬ್ಯಾಟಿಂಗ್ಗೆ ಇಳಿದಾಗಲೆಲ್ಲ ನನ್ನ ಅಣ್ಣ ನನ್ನೊಂದಿಗೆ ದೈಹಿಕವಾಗಿ ಇರದೆ ಇರಬಹುದು. ಆದರೆ, ಮಾನಸಿಕವಾಗಿ ಯಾವಾಗಲೂ ನನ್ನೊಂದಿಗೆ ಇರುತ್ತಿದ್ದರು. ನಾನು ಬ್ಯಾಟಿಂಗ್ ಇಳಿಯುತ್ತಿದ್ದಾಗಲೆಲ್ಲ ನನ್ನ ಅಣ್ಣನೂ ನನ್ನೊಂದಿಗೆ ಬ್ಯಾಟಿಂಗ್ಗೆ ಬರುತ್ತಿದ್ದ ಎಂಬುದು ನನ್ನ ನಂಬಿಕೆಯಾಗಿತ್ತು' ಎಂದು ಸಚಿನ್ ತೆಂಡುಲ್ಕರ್ ಟ್ವಿಟರ್ನಲ್ಲಿ ಪ್ರಕಟಿಸಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: VIDEO: ರೋಜರ್ ಫೆಡರರ್ರಿಂದ ಮುಂಗೈ ಹೊಡೆತದ ಬಗ್ಗೆ ಟಿಪ್ಸ್ ಕೇಳಿದ ಸಚಿನ್ ತೆಂಡುಲ್ಕರ್
ಇನ್ನು ಕೋಚ್ ರಮಾಕಾಂತ್ ಆಚ್ರೇಕರ್ ತುಂಟ ಬಾಲಕ ಸಚಿನ್ ತೆಂಡುಲ್ಕರ್ರ ಬ್ಯಾಟಿಂಗ್ ಲೋಪದೋಷಗಳನ್ನು ತಿದ್ದಿ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಆಗಿ ರೂಪಿಸಿದವರು. 'ಆಚ್ರೇಕರ್ ಸರ್ ಬಗ್ಗೆ ನಾನೇನು ಹೇಳಲಿ. ಬಾಲ್ಯದಲ್ಲಿ ಅವರೊಂದಿಗೆ ಸಾಕಷ್ಟು ಸಮಯವನ್ನು ಕಳೆದಿದ್ದೇನೆ. ಬ್ಯಾಟಿಂಗ್ ಲೋಪದೋಷಗಳನ್ನೆಲ್ಲ ಅವರು ನನ್ನ ಗಮನಕ್ಕೆ ತರುತ್ತಿದ್ದರು. ಪಂದ್ಯವಿರಲಿ ಅಥವಾ ಅಭ್ಯಾಸದ ಸಮಯವೇ ಇರಲಿ ಅವರು ನನ್ನೆಲ್ಲ ಬ್ಯಾಟಿಂಗ್ನ ತಪ್ಪುಗಳನ್ನು ನೋಟ್ ಮಾಡಿಟ್ಟುಕೊಳ್ಳುತ್ತಿದ್ದರು ಮತ್ತು ನಾನೆಲ್ಲಿ ಉತ್ತಮ ಪಡಿಸಿಕೊಳ್ಳಬಹುದೆಂದು ತಿಳಿಸುತ್ತಿದ್ದರು. ಕ್ರಿಕೆಟ್ ಬಗ್ಗೆ ಅವರೊಂದಿಗೆ ಗಂಟೆಗಟ್ಟಲೆ ಚರ್ಚಿಸುತ್ತಿದ್ದೆ' ಎಂದು ಸಚಿನ್ ವಿವರಿಸಿದ್ದಾರೆ. ಈ ಹಿಂದೆಲ್ಲ ಸಚಿನ್ ಕ್ರಿಕೆಟ್ ಪಂದ್ಯಗಳಿಲ್ಲದ ಪ್ರತಿ ಗುರುಪೂರ್ಣಿಮೆಯಂದು ಆಚ್ರೇಕರ್ ಮನೆಗೆ ಭೇಟಿ ನೀಡಿ ಆರ್ಶೀವಾದ ಪಡೆದುಕೊಳ್ಳುತ್ತಿದ್ದರು. ಆದರೆ 2019ರ ಜನವರಿಯಲ್ಲಿ ಆಚ್ರೇಕರ್ ನಿಧನ ಹೊಂದಿದ ಬಳಿಕ ಸಚಿನ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಸಚಿನ್ ತಮ್ಮ ಅಂತಿಮ ಮತ್ತು ಅತ್ಯಂತ ಪ್ರಮುಖವಾದ ಮತ್ತೋರ್ವ ಗುರು ಎಂದು ತಂದೆ ರಮೇಶ್ ತೆಂಡುಲ್ಕರ್ ಅವರನ್ನು ನೆನೆಸಿಕೊಂಡಿದ್ದಾರೆ. 'ಯಶಸ್ಸಿಗೆ ಅಡ್ಡದಾರಿಗಳನ್ನು ಹಿಡಿಯಬೇಡ ಎಂದು ತಂದೆ ಯಾವಾಗಲೂ ಹೇಳುತ್ತಿದ್ದರು. ಸವಾಲುಗಳನ್ನು ಎದುರಿಸಲು ನೀನೇ ಸ್ವತಃ ಸಮರ್ಥವಾಗಿ ಸಿದ್ಧತೆ ನಡೆಸು ಎನ್ನುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಎಂದೂ ನಿನ್ನ ಮೌಲ್ಯಗಳನ್ನು ಕಡಿಮೆಗೊಳಿಸಬೇಡ ಎನ್ನುತ್ತಿದ್ದರು. ಈ ಮೂವರ ಬಗ್ಗೆ ನಾನು ಎಷ್ಟು ಮಾತನಾಡಿದರೂ ಅದು ಕೊನೆಗೊಳ್ಳುವುದಿಲ್ಲ' ಎಂದು ಸಚಿನ್ ಹೇಳಿದ್ದಾರೆ. ಸಚಿನ್ ತೆಂಡುಲ್ಕರ್ 1999ರ ವಿಶ್ವಕಪ್ ಸಮಯದಲ್ಲಿ ತಂದೆಯನ್ನು ಕಳೆದುಕೊಂಡಿದ್ದರು.