

ಬೆಂಗಳೂರು: ಈ ಸಲದ ಐಪಿಎಲ್ ಟೂರ್ನಿಯ ವೇಳಾಪಟ್ಟಿಯಲ್ಲಿ ಕೆಲ ಎಡವಟ್ಟಾಗಿರುವುದು ಸ್ಪಷ್ಟವಾಗಿದೆ. ಇದರಿಂದಾಗಿ ಬಿಸಿಸಿಐ, ಐಪಿಎಲ್ ಟೂರ್ನಿಯ ನಡುವೆ ಮುಂಬೈ, ಸನ್ರೈಸರ್ಸ್, ಸಿಎಸ್ಕೆ ನಡುವೆ "ತ್ರಿಕೋನ ಸರಣಿ' ಮತ್ತು ಆರ್ಸಿಬಿ-ಪಂಜಾಬ್ ನಡುವೆ "ದ್ವಿಪಕ್ಷೀಯ ಸರಣಿ'ಯೊಂದನ್ನು ಆಯೋಜಿಸಿದಂತೆ ಕಾಣಿಸುತ್ತಿದೆ ಎಂದು ಕ್ರಿಕೆಟ್ ಫ್ಯಾನ್ಸ್ ಕಾಲೆಳೆದಿದ್ದಾರೆ.
ಆರ್ಸಿಬಿ ತಂಡ ಇನ್ನು ಪಂಜಾಬ್ ಎದುರು 3 ದಿನಗಳ ಅಂತರದಲ್ಲಿ 2 ಪಂದ್ಯಗಳನ್ನು ಆಡಲಿದೆ. ಏ.18ಕ್ಕೆ ತವರಿನಲ್ಲಿ ಪಂಜಾಬ್ ವಿರುದ್ಧ ಆಡಲಿರುವ ಆರ್ಸಿಬಿ 2 ದಿನಗಳ ಬಳಿಕ ಅಂದರೆ ಏ.20ರಂದು ಮುಲ್ಲನ್ಪುರದಲ್ಲಿ ಮತ್ತೆ ಪಂಜಾಬ್ ತಂಡವನ್ನೇ ಎದುರಿಸಲಿದೆ.
ಮತ್ತೊಂದೆಡೆ ಮುಂಬೈ ತನ್ನ ಮುಂದಿನ 3 ಪಂದ್ಯಗಳನ್ನು ಸನ್ರೈಸರ್ಸ್ (ಏ.17), ಸಿಎಸ್ಕೆ (ಏ.20), ಸನ್ರೈಸರ್ಸ್ (ಏ.23) ವಿರುದ್ಧ ಆಡಲಿದ್ದರೆ, ಸನ್ರೈಸರ್ಸ್ ಮುಂದಿನ ಸತತ 2 ಪಂದ್ಯಗಳನ್ನು ಮುಂಬೈ ವಿರುದ್ಧವೇ ಏ.17 ಮತ್ತು 23ರಂದು ಆಡಲಿದೆ. ಸಿಎಸ್ಕೆ ತಂಡ ತನ್ನ ಮುಂದಿನ 2 ಪಂದ್ಯಗಳನ್ನು ಮುಂಬೈ (ಏ.20), ಸನ್ರೈಸರ್ಸ್ (ಏ.25) ವಿರುದ್ಧ ಆಡಲಿದೆ. ಇದರಿಂದ ಮುಂದಿನ 9 ದಿನಗಳ ಅಂತರದಲ್ಲಿ ಈ 3 ತಂಡಗಳೇ ಪರಸ್ಪರ ಎದುರಾಗಲಿವೆ.