ಟ್ರಾನ್ಸ್-ಟಾಸ್ಮನ್ ಟ್ರೋಫಿ| ಕ್ಲೀನ್​ಸ್ವೀಪ್ ಸಾಧಿಸಿದ ಆಸೀಸ್

trans tasman trophy 6 JAN 20
Published on

ಸಿಡ್ನಿ: ನಾಥನ್ ಲ್ಯಾನ್ (50ಕ್ಕೆ 5, ಪಂದ್ಯದಲ್ಲಿ 10 ವಿಕೆಟ್) ಮಾರಕ ದಾಳಿ ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ ತಂಡ ಟ್ರಾನ್ಸ್-ಟಾಸ್ಮನ್ ಟ್ರೋಫಿ ಟೆಸ್ಟ್ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ 279 ರನ್​ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿತು. ಇದರಿಂದ 3 ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ 3-0ಯಿಂದ ವಶಪಡಿಸಿಕೊಂಡಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ, ಐಸಿಸಿ ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ 296 ಅಂಕಗಳೊಂದಿಗೆ 2ನೇ ಸ್ಥಾನ ಕಾಯ್ದುಕೊಂಡಿತು. ಭಾರತ ತಂಡ 360 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 40 ರನ್​ಗಳಿಂದ 4ನೇ ದಿನದಾಟ ಆರಂಭಿಸಿದ ಆಸೀಸ್ ತಂಡ, ಆರಂಭಿಕ ಡೇವಿಡ್ ವಾರ್ನರ್ (111 ರನ್, 159 ಎಸೆತ, 9 ಬೌಂಡರಿ) ಹಾಗೂ ಮಾರ್ನಸ್ ಲಬುಶೇನ್ (59ರನ್, 74 ಎಸೆತ, 3ಬೌಂಡರಿ) ಜೋಡಿಯ ಭರ್ಜರಿ ಬ್ಯಾಟಿಂಗ್ ನೆರವಿನಿಂದ 2 ವಿಕೆಟ್​ಗೆ 217 ರನ್​ಗಳಿಸಿ 2ನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ನಡುವೆ ವಾರ್ನರ್-ಲಬುಶೇನ್ ಪಿಚ್ ಮೇಲೆ ಓಡಿದ್ದರಿಂದ 5 ಪೆನಾಲ್ಟಿ ರನ್ ನೀಡಿದ ಅಂಪೈರ್, ಅದನ್ನು ಕಿವೀಸ್ ಮೊದಲ ಇನಿಂಗ್ಸ್​ಗೆ ಸೇರಿಸಿದ್ದರು. ಇದರಿಂದ 416 ರನ್ ಗುರಿ ಪಡೆದ ನ್ಯೂಜಿಲೆಂಡ್, 47.5 ಓವರ್​ಗಳಲ್ಲಿ ಕೇವಲ 136 ರನ್​ಗಳಿಗೆ ಸರ್ವಪತನ ಕಂಡು ಇನ್ನೊಂದು ದಿನ ಬಾಕಿ ಇರುವಂತೆಯೇ ಶರಣಾಯಿತು. ಆಸ್ಟ್ರೇಲಿಯಾ ತಂಡ ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 296 ರನ್​ಗಳಿಂದ ಜಯಿಸಿದರೆ, ಮೆಲ್ಬೋರ್ನ್​ನಲ್ಲಿ ನಡೆದ 2ನೇ ಪಂದ್ಯವನ್ನು 247 ರನ್​ಗಳಿಂದ ಗೆಲುವು ದಾಖಲಿಸಿತ್ತು.

ಆಸ್ಟ್ರೇಲಿಯಾ: 454 ಮತ್ತು 2 ವಿಕೆಟ್​ಗೆ 217 ಡಿಕ್ಲೇರ್ (ವಾರ್ನರ್ 111*, ಬರ್ನ್ಸ್ 40, ಲಬುಶೇನ್ 59), ನ್ಯೂಜಿಲೆಂಡ್: 256 ಮತ್ತು 136 (ಗ್ರಾಂಡ್​ಹೋಮ್ 52, ರಾಸ್ ಟೇಲರ್ 22, ನಾಥನ್ ಲ್ಯಾನ್ 50ಕ್ಕೆ 5, ಮಿಚೆಲ್ ಸ್ಟಾರ್ಕ್ 25ಕ್ಕೆ 3).

2ನೇ ಸ್ಥಾನಕ್ಕೇರಿದ ಆಸೀಸ್: ಕ್ಲೀನ್​ಸ್ವೀಪ್ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ 108 ಅಂಕದೊಂದಿಗೆ 5ರಿಂದ 2ನೇ ಸ್ಥಾನಕ್ಕೇರಿದರೆ, ನ್ಯೂಜಿಲೆಂಡ್ ತಂಡ 105 ಅಂಕದೊಂದಿಗೆ 2ರಿಂದ 3ನೇ ಸ್ಥಾನಕ್ಕೆ ಕುಸಿತ ಕಂಡಿತು. ಭಾರತ 120 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ 102 ಅಂಕದೊಂದಿಗೆ 4ನೇ ಸ್ಥಾನಕ್ಕಿಳಿಯಿತು.

ರಾಸ್ ಟೇಲರ್ ದಾಖಲೆ: ನ್ಯೂಜಿಲೆಂಡ್ ತಂಡದ ಅನುಭವಿ ಬ್ಯಾಟ್ಸ್​ಮನ್ ರಾಸ್ ಟೇಲರ್ 22 ರನ್​ಗಳಿಸಿ ಔಟಾದರೂ ದಾಖಲೆ ಬರೆದರು. ಟೆಸ್ಟ್ ಕ್ರಿಕೆಟ್​ನಲ್ಲಿ ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆ ಅವರದಾಯಿತು. 99ನೇ ಟೆಸ್ಟ್ ಪಂದ್ಯವಾಡಿದ 35 ವರ್ಷದ ಟೇಲರ್ 19 ಶತಕ ಸೇರಿದಂತೆ 7,174 ರನ್ ಬಾರಿಸಿದ್ದಾರೆ. ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ (111 ಟೆಸ್ಟ್, 7,172 ರನ್) ದಾಖಲೆ ಹಿಂದಿಕ್ಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net