ಯುಎಸ್​ ಓಪನ್​ನಿಂದ ಹಿಂದೆ ಸರಿದ ವಿಶ್ವ ನಂ. 1 ಆಟಗಾರ್ತಿ ಆಶ್ಲೆಗ್​ ಬಾರ್ಟಿ

Ash Barty2
Published on

ಬ್ರಿಸ್ಬೇನ್​: ವಿಶ್ವ ನಂ. 1 ಆಟಗಾರ್ತಿ ಆಶ್ಲೆಗ್​ ಬಾರ್ಟಿ ಮುಂಬರುವ ಯುಎಸ್​ ಓಪನ್​ ಗ್ರಾಂಡ್​ ಸ್ಲಾಂ ಟೆನಿಸ್​ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಕರೊನಾ ವೈರಸ್​ ಹಾವಳಿಯ ಈ ಸಮಯದಲ್ಲಿ ಪ್ರಯಾಣ ಮಾಡುವುದರಿಂದ ತಮ್ಮನ್ನು ಅಪಾಯಕ್ಕೆ ಸಿಲುಕಿಕೊಳ್ಳಲು ಇಷ್ಟಪಡದ ಕಾರಣ ಅವರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಆಸ್ಟ್ರೇಲಿಯಾದ 24 ವರ್ಷದ ಆಟಗಾರ್ತಿ ಬಾರ್ಟಿ, ಆಗಸ್ಟ್​ 31ರಿಂದ ಸೆಪ್ಟೆಂಬರ್​ 13ರವರೆಗೆ ನ್ಯೂಯಾರ್ಕ್​ನಲ್ಲಿ ನಿಗದಿಯಾಗಿರುವ ಗ್ರಾಂಡ್​ ಸ್ಲಾಂ ಕೂಟದಿಂದ ಇದುವರೆಗೆ ಅಧಿಕೃತವಾಗಿ ಹಿಂದೆ ಸರಿದಿರುವ ಅತ್ಯಂತ ಪ್ರಮುಖ ತಾರೆಯಾಗಿದ್ದಾರೆ. 'ನನ್ನ ತಂಡ ಮತ್ತು ನಾನು ಈ ವರ್ಷ ವೆಸ್ಟರ್ನ್-ಸದರ್ನ್​ ಓಪನ್​ ಮತ್ತು ಯುಎಸ್​ ಓಪನ್​ಗೆ ಪ್ರಯಾಣಿಸದಿರಲು ನಿರ್ಧರಿಸಿದ್ದೇವೆ' ಎಂದು ಬಾರ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಮೆರಿಕದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಕರೊನಾಗೆ ಬಲಿಯಾಗಿದ್ದು, ಈಗಾಗಲೆ ಕೆಲ ಆಟಗಾರರು ಯುಎಸ್​ ಓಪನ್​ನಲ್ಲಿ ಆಡುವ ಬಗ್ಗೆ ಕಳವಳ ಹಂಚಿಕೊಂಡಿದ್ದಾರೆ.

'ನಾನು ಇವೆರಡೂ ಟೂರ್ನಿಗಳನ್ನು ಇಷ್ಟಪಡುತ್ತೇನೆ. ಹೀಗಾಗಿ ಇದೊಂದು ಕಠಿಣ ನಿರ್ಧಾರವಾಗಿದೆ. ಕೋವಿಡ್​-19ರಿಂದ ಈಗಲೂ ಸಾಕಷ್ಟು ಅಪಾಯಗಳಿವೆ. ನಾನು ಮತ್ತು ನನ್ನ ತಂಡ ಈ ಪರಿಸ್ಥಿತಿಯಲ್ಲಿ ರಿಸ್ಕ್​​ ತೆಗೆದುಕೊಳ್ಳುವುದು ಸರಿಯಲ್ಲವೆನಿಸಿತು. ಯುಎಸ್​ ಓಪನ್​ ಟೂರ್ನಿಗೆ ನಾನು ಶುಭಹಾರೈಸುತ್ತೇನೆ. ಮುಂದಿನ ವರ್ಷ ಮತ್ತೆ ಯುಎಸ್​ ಓಪನ್​ಗೆ ಮರಳುವುದನ್ನು ಎದುರುನೋಡುತ್ತಿದ್ದೇನೆ' ಎಂದು ಬಾರ್ಟಿ ತಿಳಿಸಿದ್ದಾರೆ.

ಈ ವರ್ಷ ಯುಎಸ್​ ಓಪನ್​ ಟೂರ್ನಿಯ ಬಳಿಕ ಸೆಪ್ಟೆಂಬರ್​ 27ರಿಂದ ನಡೆಯಲಿರುವ ಫ್ರೆಂಚ್​ ಓಪನ್​ ಕ್ಲೇ-ಕೋರ್ಟ್​ ಗ್ರಾಂಡ್​ ಸ್ಲಾಂ ಟೂರ್ನಿಯಲ್ಲಿ ಆಡುವ ಬಗ್ಗೆ ಬಾರ್ಟಿ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಕಳೆದ ವರ್ಷ ಅವರು ಪ್ಯಾರಿಸ್​ನ ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು. ಹಿಂದಿನ ವೇಳಾಪಟ್ಟಿಯ ಪ್ರಕಾರ ಮೇ-ಜೂನ್​ನಲ್ಲಿ ನಡೆಯಬೇಕಾಗಿದ್ದ ಈ ಟೂರ್ನಿ ಕರೊನಾ ಭೀತಿಯಿಂದಾಗಿ ಮುಂದೂಡಲ್ಪಟ್ಟಿತ್ತು.

ಆಸ್ಟ್ರೇಲಿಯಾದಲ್ಲಿ ಅಂತಾರಾಷ್ಟ್ರೀಯ ಗಡಿಗಳನ್ನು ಬಂದ್​ ಮಾಡಲಾಗಿದ್ದು, ಬಾರ್ಟಿಗೆ ಪ್ರಯಾಣ ಕಷ್ಟಕರವೆನಿಸಿದೆ. ಸರ್ಕಾರದಿಂದ ವಿಶೇಷ ಅನುಮತಿ ಪಡೆದು ಪ್ರಯಾಣಿಸುವ ಅವಕಾಶ ಅವರ ಮುಂದಿದ್ದರೂ, ಲಭ್ಯ ವಿಶೇಷ ವಿಮಾನಗಳ ಸಂಖ್ಯೆಯೂ ವಿರಳವಾಗಿದೆ. ಅವರು ಯುಎಸ್​ ಓಪನ್​ಗೆ ತೆರಳಿದರೂ, ಆಸ್ಟ್ರೇಲಿಯಾಕ್ಕೆ ಮರಳಿದ ಬಳಿಕ 2 ವಾರಗಳ ಕ್ವಾರಂಟೈನ್​ನಲ್ಲಿರುವುದು ಕಡ್ಡಾಯವೆನಿಸುತ್ತಿತ್ತು.

ಕಳೆದ ಮಾರ್ಚ್​ನಿಂದ ವೃತ್ತಿಪರ ಟೆನಿಸ್​ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಆಗಸ್ಟ್​ 3ರಿಂದ ಪುನರಾರಂಭಗೊಳ್ಳುವ ನಿರೀಕ್ಷೆ ಇದೆ. ಇಟಲಿಯ ಪಲೆರ್ಮೋ ಓಪನ್​ ಮಹಿಳಾ ಟೆನಿಸ್​ ಟೂರ್ನಿಯ ಮೂಲಕ ಟೆನಿಸ್​ ಚಟುವಟಿಕೆ ಪುನರಾರಂಭಗೊಳ್ಳಲಿದೆ. ಯುಎಸ್​ ಓಪನ್​ಗೆ ಪೂರ್ವಭಾವಿಯಾಗಿ ವೆಸ್ಟರ್ನ್​-ಸದರ್ನ್​ ಓಪನ್ ಟೂರ್ನಿ ಆಗಸ್ಟ್​ 20ರಿಂದ 28ರವರೆಗೆ ನಡೆಯಲಿದೆ. ಸಿನ್ಸಿನಾಟಿಯಲ್ಲಿ ನಡೆಯಬೇಕಾಗಿದ್ದ ಈ ಟೂರ್ನಿಯನ್ನು, ಯುಎಸ್​ ಓಪನ್​ ನಡೆಯಲಿರುವ ಫ್ಲಷಿಂಗ್​ ಮೆಡೋಸ್​ನ ಬಿಲ್ಲಿ ಜೀನ್​ ಕಿಂಗ್​ ರಾಷ್ಟ್ರೀಯ ಟೆನಿಸ್​ ಸೆಂಟರ್​ಗೆ ಸ್ಥಳಾಂತರಿಸಲಾಗಿದೆ. ಸೆರೇನಾ ವಿಲಿಯಮ್ಸ್, ಕೋಕೋ ಗೌಫ್​, ನೊವಾಕ್​ ಜೋಕೊವಿಕ್​, ರಾಫೆಲ್​ ನಡಾಲ್​ ಮತ್ತು ಜಪಾನ್​ನ ನವೊಮಿ ಒಸಾಕಾ ಈಗಾಗಲೆ ಈ ಟೂರ್ನಿಯಲ್ಲಿ ಆಡಲಿರುವುದನ್ನು ಖಚಿತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net