ಟೀಮ್ ಇಂಡಿಯಾದ ಮುಂದಿನ ಕೋಚ್ ಆಗುವತ್ತ ಆಸೀಸ್ ಮಾಜಿ ಆಲ್ರೌಂಡರ್ ಆಸಕ್ತಿ!

team web
Published on

ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಟಾಮ್ ಮೂಡಿ ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಅವರು ಈ ಹಿಂದೆ 3 ಬಾರಿ ಅರ್ಜಿ ಸಲ್ಲಿಸಿ ನಿರಾಸೆ ಅನುಭವಿಸಿದ್ದರು. ಸದ್ಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಮತ್ತು ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ 56 ವರ್ಷದ ಟಾಮ್ ಮೂಡಿ, ಕ್ರಿಕೆಟ್ ನಿರ್ದೇಶಕರಾಗಿದ್ದಾರೆ.

ಮುಂಬರುವ ಟಿ20 ವಿಶ್ವಕಪ್ ಬಳಿಕ ಭಾರತ ತಂಡದ ಹಾಲಿ ಕೋಚ್ ರವಿಶಾಸ್ತ್ರಿ ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ಮುಂದಿನ ಕೋಚ್ ಹುದ್ದೆಗೆ ಬಿಸಿಸಿಐ ಶೀಘ್ರದಲ್ಲೇ ಅರ್ಜಿ ಆಹ್ವಾನಿಸುವ ನಿರೀಕ್ಷೆ ಇದೆ. 2016ರಲ್ಲಿ ಸನ್‌ರೈಸರ್ಸ್‌ ತಂಡ ಐಪಿಎಲ್ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೂಡಿ ಈ ಮುನ್ನ ಶ್ರೀಲಂಕಾ ತಂಡಕ್ಕೂ ಕೋಚ್ ಆಗಿದ್ದರು.

2017 ಮತ್ತು 2019ರಲ್ಲಿ ಮೂಡಿ ಅರ್ಜಿ ಸಲ್ಲಿಸಿದಾಗ ಕ್ರಿಕೆಟ್ ಸಲಹಾ ಸಮಿತಿ ಅವರನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಆಗ ಸ್ವದೇಶಿ ಕೋಚ್‌ಗಳತ್ತ ಹೆಚ್ಚಿನ ಗಮನ ಹರಿಸಿದ್ದ ಬಿಸಿಸಿಐ, ಈ ಬಾರಿ ವಿದೇಶಿ ಕೋಚ್ ಬಯಸಿದರೆ ಮೂಡಿಗೆ ಹುದ್ದೆ ಒಲಿಯುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net