

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತಷ್ಟು ಪದಕಗಳನ್ನು ಗೆದ್ದುಕೊಡಲು ಕುಸ್ತಿಪಟುಗಳು ಸಜ್ಜಾಗಿದ್ದಾರೆ. 7 ಪೈಲ್ವಾನರ ಭಾರತ ತಂಡದಲ್ಲಿ ಭಜರಂಗ್ ಪೂನಿಯಾ ಮತ್ತು ವಿನೇಶ್ ಪೋಗಟ್ ಮೇಲೆ ಸ್ವರ್ಣ ಪದಕದ ನಿರೀಕ್ಷೆಗಳಿದ್ದು, ಮಂಗಳವಾರ ಸೋನಂ ಮಲಿಕ್ ಭಾರತದ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಕುಸ್ತಿಸ್ಪರ್ಧೆಯಲ್ಲಿ ಭಾರತಕ್ಕೆ ಈ ಬಾರಿ ಕನಿಷ್ಠ 3 ಪದಕದಾಸೆ ಇದೆ. ಭಜರಂಗ್ ಮತ್ತು ವಿನೇಶ್ ಜತೆಗೆ ರವಿ ದಹಿಯಾ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ. ರಿಪಷಾಸ್ ಸುತ್ತಿನ ಹೋರಾಟಗಳಿಂದಾಗಿ ಕುಸ್ತಿಯಲ್ಲಿ ಮೊದಲ ಸುತ್ತಿನಲ್ಲಿ ಸೋತವರ ಮೇಲೂ ಪದಕದ ನಿರೀಕ್ಷೆ ಇಡಬಹುದು. ಆದರೆ ಆಗ ಅವರ ವಿರುದ್ಧ ಗೆದ್ದವರು ಫೈನಲ್‌ಗೇರಬೇಕಾಗುತ್ತದೆ.
19 ವರ್ಷದ ಸೋನಮ್ ಮಲಿಕ್ ಮಹಿಳೆಯರ 62 ಕೆಜಿ ವಿಭಾಗದಲ್ಲಿ ಮಂಗೋಲಿಯಾದ ಬೊಲೊರ್ತುಯಾ ಖುರೆಲ್ಖು ವಿರುದ್ಧ ಮೊದಲ ಪಂದ್ಯವಾಡಲಿದ್ದಾರೆ. ಕಳೆದ ರಿಯೋ ಒಲಿಂಪಿಕ್ಸ್ ಕಂಚು ವಿಜೇತೆ ಸಾಕ್ಷಿ ಮಲಿಕ್‌ರನ್ನು ಹಿಮ್ಮೆಟ್ಟಿಸಿ ಟೋಕಿಯೊಗೆ ಬಂದಿರುವ ಸೋನಮ್‌ಗೆ 2ನೇ ಸುತ್ತಿನಲ್ಲಿ 2018ರ ವಿಶ್ವ ಚಾಂಪಿಯನ್ ಬಲ್ಗೇರಿಯಾದ ಮುಸ್ತಾ ಯುಸೇನ್ ಎದುರಾಗುವ ಸಾಧ್ಯತೆ ಇದೆ.
ಈ ಬಾರಿ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಗಳು ಸ್ವಲ್ಪ ಭಿನ್ನವಾಗಿದ್ದು, ಒಂದೇ ದಿನದಲ್ಲಿ ಪದಕ ನಿರ್ಧಾರವಾಗುವುದಿಲ್ಲ. ಚಿನ್ನ, ಕಂಚಿನ ಪದಕದ ಹೋರಾಟಗಳು ಮರುದಿನ ನಡೆಯುತ್ತವೆ.
ಭಾರತೀಯರ ಕುಸ್ತಿಸ್ಪರ್ಧೆಗಳು
ಇಂದು: ಸೋನಮ್ ಮಲಿಕ್ (62 ಕೆಜಿ ವಿಭಾಗ)
ನಾಳೆ: ರವಿ ದಹಿಯಾ (57 ಕೆಜಿ), ದೀಪಕ್ ಪೂನಿಯಾ (86 ಕೆಜಿ), ಅಂಶು ಮಲಿಕ್ (57 ಕೆಜಿ).
ಗುರುವಾರ: ವಿನೇಶ್ ಪೋಗಟ್ (53 ಕೆಜಿ).
ಶುಕ್ರವಾರ: ಭಜರಂಗ್ ಪೂನಿಯಾ (65 ಕೆಜಿ), ಸೀಮಾ ಬಿಸ್ಲಾ (50 ಕೆಜಿ).