ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಇಂದು ಯಾರ ಮೇಲಿದೆ ಪದಕ ನಿರೀಕ್ಷೆ?

oly web
Published on

ಟೋಕಿಯೊ: ಭಾರತದ ಕ್ರೀಡಾಪಟುಗಳು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬುಧವಾರ ಇನ್ನಷ್ಟು ಪದಕಗಳನ್ನು ಗೆದ್ದುಕೊಡುವ ನಿರೀಕ್ಷೆಗಳಿವೆ. ಪ್ರಮುಖವಾಗಿ ಮಹಿಳಾ ಹಾಕಿ ತಂಡ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸೆಣಸಲಿದ್ದು, ಗೆದ್ದರೆ ಕನಿಷ್ಠ ಬೆಳ್ಳಿ ಪದಕ ಖಚಿತವಾಗಲಿದೆ. ಸೋತರೆ ಮತ್ತೆ ಕಂಚಿನ ಪದಕಕ್ಕೆ ಹೋರಾಡಬೇಕಾಗುತ್ತದೆ. ಇನ್ನು ಬಾಕ್ಸಿಂಗ್‌ನಲ್ಲಿ ಈಗಾಗಲೆ ಪದಕ ಖಚಿತಪಡಿಸಿರುವ ಲವ್ಲಿನಾ ಬೋರ್ಗೋಹೈನ್, ಸೆಮಿಫೈನಲ್‌ನಲ್ಲಿ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ಧ ಸೆಣಸಲಿದ್ದು, ಗೆದ್ದರೆ ಚಿನ್ನದ ಪದಕದ ನಿರೀಕ್ಷೆ ಮೂಡಿಸಲಿದ್ದಾರೆ. ಸೋತರೆ ಅವರು ಕಂಚಿನ ಪದಕಕ್ಕೆ ತೃಪ್ತಿಪಡಲಿದ್ದಾರೆ. ಕುಸ್ತಿಸ್ಪರ್ಧೆಯಲ್ಲಿ ಭಾರತದ ಮೂವರು ಪೈಲ್ವಾನರು ಕಣಕ್ಕಿಳಿಯಲಿದ್ದರೂ, ಅವರ ಪದಕದ ಖಾತ್ರಿಗೆ ಗುರುವಾರದವರೆಗೆ ಕಾಯಬೇಕಾಗುತ್ತದೆ.

ಮಹಿಳೆಯರಿಗೆ ಇಂದು ಅರ್ಜೆಂಟೀನಾ ಸವಾಲು

ಮೊಟ್ಟಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸುವ ಮೂಲಕ ಈಗಾಗಲೆ ಇತಿಹಾಸ ರಚಿಸಿರುವ ಭಾರತದ ಮಹಿಳಾ ಹಾಕಿ ತಂಡ ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುವ ತವಕದಲ್ಲಿದೆ. ಬುಧವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಮುಖಾಮುಖಿ ಆಗಲಿದೆ. ಸತತ 5 ಜಯದೊಂದಿಗೆ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದ 3 ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನೇ ಮಣಿಸಿರುವುದರಿಂದ, ಆ ಗುಂಪಿನಲ್ಲಿ 3ನೇ ಸ್ಥಾನ ಪಡೆದಿದ್ದ ಅರ್ಜೆಂಟೀನಾ ತಂಡವನ್ನು ರಾಣಿ ರಾಂಪಾಲ್ ಪಡೆ ಆತ್ಮವಿಶ್ವಾಸದಿಂದಲೇ ಎದುರಿಸಲಿದೆ.

ಕೂಟದಲ್ಲಿ ಆರಂಭಿಕ 3 ಪಂದ್ಯಗಳಲ್ಲಿ ಸೋತ ಬಳಿಕ ಪುಟಿದೆದ್ದಿರುವ ಭಾರತ, ಆಕ್ರಮಣ ಮತ್ತು ರಕ್ಷಣಾ ವಿಭಾಗದಲ್ಲಿ ಈಗ ಕೆಚ್ಚಿನ ನಿರ್ವಹಣೆ ತೋರುತ್ತಿದೆ. 1980ರಲ್ಲಿ 4ನೇ ಸ್ಥಾನ ಪಡೆದಿದ್ದೇ ಅತ್ಯುತ್ತಮ ನಿರ್ವಹಣೆ ಎಂಬ ಇತಿಹಾಸವನ್ನು ಬದಲಾಯಿಸಿ ಮೊಟ್ಟಮೊದಲ ಪದಕ ಒಲಿಸಿಕೊಳ್ಳಲು ಮಹಿಳೆಯರಿಗೆ ಇನ್ನೊಂದು ಗೆಲುವು ಅಗತ್ಯವಾಗಿದೆ. ಆಸೀಸ್ ತಂಡಕ್ಕೆ ಸೋಲುಣಿಸಿದ ಸಾಧನೆಯಿಂದ ವಿಶ್ವ ರ‌್ಯಾಂಕಿಂಗ್‌ನಲ್ಲಿ ಸರ್ವೋತ್ತಮ 7ನೇ ಸ್ಥಾನಕ್ಕೇರಿರುವ ಭಾರತಕ್ಕೆ ವಿಶ್ವ ನಂ. 2 ಅರ್ಜೆಂಟೀನಾದಿಂದ ಒರಟು ಆಟದ ಸವಾಲು ಎದುರಾಗುವ ಸಾಧ್ಯತೆ ಇದೆ. ಆಸೀಸ್ ವಿರುದ್ಧ 22ನೇ ನಿಮಿಷದಲ್ಲಿ ಗೋಲು ಬಾರಿಸಿದ ಬಳಿಕ ಪಂದ್ಯದ ಉಳಿದ ಸಮಯದಲ್ಲಿ ಭದ್ರ ತಡೆಗೋಡೆ ನಿರ್ಮಿಸಿದ್ದ ಗೋಲು ಕೀಪರ್ ಸವಿತಾ ಮತ್ತೊಮ್ಮೆ ಮಹತ್ವದ ಪಾತ್ರ ನಿರ್ವಹಿಸಬೇಕಾಗಿದೆ.

2000 ಮತ್ತು 2012ರಲ್ಲಿ ರಜತ ಜಯಿಸಿದ್ದ ಅರ್ಜೆಂಟೀನಾಕ್ಕೂ ಚಿನ್ನದ ಪದಕದ ಆಸೆ ಇದೆ. ಕ್ವಾರ್ಟರ್​ಫೈನಲ್‌ನಲ್ಲಿ ರಿಯೊ ಒಲಿಂಪಿಕ್ಸ್ ಕಂಚು ವಿಜೇತ ಜರ್ಮನಿಗೆ ಸೋಲುಣಿಸಿರುವ ಅರ್ಜೆಂಟೀನಾ ವಿರುದ್ಧದ ಭಾರತದ ಇತ್ತೀಚೆಗಿನ ದಾಖಲೆ ಉತ್ತಮವಾಗಿಲ್ಲ. ಒಲಿಂಪಿಕ್ಸ್‌ಗೆ ಮುನ್ನ ಅರ್ಜೆಂಟೀನಾ ಪ್ರವಾಸದಲ್ಲಿ ಭಾರತ 2 ಪಂದ್ಯ ಸೋತು, 1ರಲ್ಲಿ ಡ್ರಾ ಕಂಡಿತ್ತು.

ಇಂದು ಭಾರತದ ಕ್ರೀಡಾಸ್ಪರ್ಧೆಗಳು;

ಅಥ್ಲೆಟಿಕ್ಸ್: ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತು: ಬೆಳಗ್ಗೆ 5.35: ಗ್ರೂಪ್ ಎ: ನೀರಜ್ ಚೋಪ್ರಾ, ಬೆಳಗ್ಗೆ 7.05: ಗ್ರೂಪ್ ಬಿ: ಶಿವಪಾಲ್ ಸಿಂಗ್.

*ಬಾಕ್ಸಿಂಗ್: ಬೆಳಗ್ಗೆ 11: ಮಹಿಳೆಯರ ವೆಲ್ಟರ್‌ವೇಟ್ ವಿಭಾಗದ ಸೆಮಿಫೈನಲ್: ಲವ್ಲಿನಾ ಬೋರ್ಗೋಹೈನ್‌ಗೆ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ಎದುರಾಳಿ.

ಗಾಲ್ಫ್: ಬೆಳಗ್ಗೆ 4: ಮಹಿಳೆಯರ ವಿಭಾಗದ ರೌಂಡ್-1: ಅದಿತಿ ಅಶೋಕ್, ದೀಕ್ಷಾ ಡಾಗರ್ ಕಣಕ್ಕೆ.

*ಹಾಕಿ: ಮಧ್ಯಾಹ್ನ 3.30: ಮಹಿಳೆಯರ ವಿಭಾಗದ ಸೆಮಿಫೈನಲ್: ಭಾರತಕ್ಕೆ ಅರ್ಜೆಂಟೀನಾ ಎದುರಾಳಿ.

ಫ್ರೀಸ್ಟೈಲ್ ಕುಸ್ತಿ: ಬೆಳಗ್ಗೆ 8.21: ಪುರುಷರ 57 ಕೆಜಿ ವಿಭಾಗ: ರವಿ ದಹಿಯಾಗೆ ಮೊದಲ ಸುತ್ತಿನಲ್ಲಿ ಕೊಲಂಬಿಯಾದ ಆಸ್ಕರ್ ಟೈಗ್ರೆರೋಸ್ ಎದುರಾಳಿ; ಬೆಳಗ್ಗೆ 8.28: ಮಹಿಳೆಯರ 57 ಕೆಜಿ ವಿಭಾಗ: ಅಂಶು ಮಲಿಕ್‌ಗೆ ಮೊದಲ ಸುತ್ತಿನಲ್ಲಿ ಬೆಲಾರಸ್‌ನ ಇರಿನಾ ಕುರಚ್ಕಿನಾ ಎದುರಾಳಿ; ಬೆಳಗ್ಗೆ 8.49: ಪುರುಷರ 86 ಕೆಜಿ ವಿಭಾಗ: ದೀಪಕ್ ಪೂನಿಯಾಗೆ ಮೊದಲ ಸುತ್ತಿನಲ್ಲಿ ನೈಜೀರಿಯಾದ ಎಕೆರೆಕೆಮ್ ಆಗಿಯೊಮೋರ್ ಎದುರಾಳಿ.

*ಪದಕ ನಿರ್ಧಾರವಾಗುವ ಸ್ಪರ್ಧೆ.

ನೇರಪ್ರಸಾರ: ಸೋನಿ ಟೆನ್ 1, 2, 3, ಡಿಡಿ ಸ್ಪೋರ್ಟ್ಸ್.

17: ಕ್ರೀಡಾಸ್ಪರ್ಧೆಯ 12ನೇ ದಿನವಾದ ಬುಧವಾರ ಒಟ್ಟು 17 ಸ್ವರ್ಣ ಪದಕಗಳು ಪಣಕ್ಕಿವೆ. ಅಥ್ಲೆಟಿಕ್ಸ್‌ನಲ್ಲಿ 5, ಕುಸ್ತಿಯಲ್ಲಿ 3, ಸೈಲಿಂಗ್‌ನಲ್ಲಿ 2, ಟ್ರ್ಯಾಕ್ ಸೈಕ್ಲಿಂಗ್, ಬಾಕ್ಸಿಂಗ್, ಈಕ್ವೆಸ್ಟ್ರಿಯನ್, ಮ್ಯಾರಥಾನ್ ಈಜು, ಕಲಾತ್ಮಕ ಈಜು, ಸ್ಕೇಟ್ ಬೋರ್ಡಿಂಗ್, ವೇಟ್‌ಲಿಫ್ಟಿಂಗ್‌ನಲ್ಲಿ ತಲಾ 1 ಚಿನ್ನದ ಪದಕ ನಿರ್ಧಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net