

ಟೋಕಿಯೊ: ಕರೊನಾ ವೈರಸ್ ಹಾವಳಿಯ ನಡುವೆಯೂ ಜುಲೈ 23ರಿಂದ ಟೋಕಿಯೊ ಒಲಿಂಪಿಕ್ಸ್ ಜಾಗತಿಕ ಕ್ರೀಡಾಕೂಟವನ್ನು ಆಯೋಜಿಸಲು ಆತಿಥೇಯ ಜಪಾನ್ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಕ್ರೀಡಾಕೂಟದಲ್ಲಿ 11 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದು, ಅವರೆಲ್ಲರಿಗೂ ತಲಾ 14ರಂತೆ ಒಟ್ಟಾರೆ 1.60 ಲಕ್ಷ ಕಾಂಡೋಮ್ಗಳನ್ನು ಸಂಘಟಕರು ವಿತರಿಸಲಿದ್ದಾರೆ. ಜತೆಗೆ ಈ ಕಾಂಡೋಮ್ಗಳನ್ನು ಬಳಸದಿರಲು ಸಾಧ್ಯವಾದಷ್ಟು ಪ್ರಯತ್ನಿಸಿರಿ ಎಂಬ ಸಲಹೆಯನ್ನೂ ಆತಿಥೇಯರು ನೀಡಿದ್ದಾರೆ. ಯಾಕೆ ಗೊತ್ತೇ?
ಕರೊನಾ ವೈರಸ್ ಕಾಲದಲ್ಲಿ ನಡೆಯುತ್ತಿರುವ ಈ ಮಹಾ ಕ್ರೀಡಾಕೂಟದ ವೇಳೆ ಕೆಲವು ಹೊಸ ನಿಯಮಗಳನ್ನು ಪರಿಚಯಿಸಲಾಗುತ್ತಿದೆ. ಹೀಗಾಗಿ ಕಾಂಡೋಮ್ಗಳನ್ನು ವಿತರಿಸಿದರೂ ಅದನ್ನು ಬಳಸದಿರುವಂತೆ ಸಂಘಟಕರು ಸೂಚಿಸಲಿದ್ದಾರೆ. ಅಂದರೆ ಒಲಿಂಪಿಕ್ಸ್ ವೇಳೆ ಕ್ರೀಡಾಪಟುಗಳು ಸೆಕ್ಸ್ನಲ್ಲಿ ಪಾಲ್ಗೊಳ್ಳಬಾರದು ಎಂದು ಪರೋಕ್ಷವಾಗಿ ಸೂಚಿಸಿದೆ. ಇದಕ್ಕೆ ಬದಲಾಗಿ ಈ ಕಾಂಡೋಮ್ಗಳನ್ನು ಸ್ಮರಣಿಕೆಗಳ ರೀತಿಯಲ್ಲಿ ತವರಿಗೆ ಕೊಂಡೊಯ್ಯಿರಿ ಎಂದೂ ಜಪಾನ್ ಸಂಘಟಕರು ಸಲಹೆ ನೀಡಿದ್ದಾರೆ.
1988ರ ಸಿಯೋಲ್ ಒಲಿಂಪಿಕ್ಸ್ನಿಂದ ಏಡ್ಸ್ ರೋಗದ ಭೀತಿಯಿಂದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಪ್ರತಿ ಒಲಿಂಪಿಕ್ಸ್ ವೇಳೆ ತಾನೇ ಕಾಂಡೋಮ್ಗಳನ್ನು ಉಚಿತವಾಗಿ ವಿತರಿಸುತ್ತ ಬಂದಿದೆ. ಅದರಂತೆ ಈ ಬಾರಿ ಕಾಂಡೋಮ್ಗಳನ್ನು ವಿತರಿಸಿದರೂ, ಕ್ರೀಡಾಪಟುಗಳು ಅದನ್ನು ಒಲಿಂಪಿಕ್ಸ್ ಗ್ರಾಮದಲ್ಲಿ ಬಳಸಬಾರದು. ಬದಲಾಗಿ ತಮ್ಮ ದೇಶಕ್ಕೆ ಅದನ್ನು ತೆಗೆದುಕೊಂಡು ಹೋಗಿ ಜಾಗೃತಿ ಮೂಡಿಸಲು ನೆರವಾಗಬೇಕು ಎಂದು ಐಒಸಿ ಹೇಳಿದೆ.
ಈ ವರ್ಷ ಐಒಸಿ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಗಳ ಪ್ರಕಾರ, ಒಲಿಂಪಿಕ್ಸ್ ವೇಳೆ ಕ್ರೀಡಾಪಟುಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಪ್ರತಿಯೊಬ್ಬರ ನಡುವೆ 2 ಮೀಟರ್ಗಳ ಅಂತರವಿರಬೇಕೆಂದು ಸೂಚಿಸಲಾಗಿದೆ. ಒಲಿಂಪಿಕ್ ಗ್ರಾಮದಲ್ಲೂ ಕ್ರೀಡಾಪಟುಗಳ ನಡುವೆ ದೈಹಿಕ ಸ್ಪರ್ಶ ಇರಬಾರದು. ಕನಿಷ್ಠ ಹ್ಯಾಂಡ್ ಶೇಕ್ ಮತ್ತು ಅಪ್ಪುಗೆಯನ್ನೂ ಮಾಡಬಾರದು ಎಂದು ಹೇಳಿರುವ ಐಒಸಿ, ಈ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರಿ ದಂಡವನ್ನೂ ವಿಧಿಸಲಾಗುವುದು ಎಂದು ಎಚ್ಚರಿಸಿದೆ.