ಟೋಕಿಯೊ ಒಲಿಂಪಿಕ್ಸ್ ಜ್ಯೋತಿ ಉತ್ಸವ ಸರಳ

sports mar 20
Published on

ಟೋಕಿಯೊ: ಕರೊನಾ ವೈರಸ್ ಭೀತಿಯಿಂದಾಗಿ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಜ್ಯೋತಿ ಉತ್ಸವ ಮತ್ತು ರಿಲೇಯನ್ನು ಅತ್ಯಂತ ಸರಳವಾಗಿ ನಡೆಸಲು ಆತಿಥೇಯ ಜಪಾನ್ ನಿರ್ಧರಿಸಿದೆ. ಮಾರ್ಚ್ 20ರಂದು ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಜ್ಯೋತಿ ಸ್ವಾಗತ ಸಮಾರಂಭಕ್ಕೆ ಪ್ರೇಕ್ಷಕರಿಗೆ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದೆ. ಆದರೆ ಬಳಿಕ ಜ್ಯೋತಿ ರಿಲೇ ಸಾಗುವ ಹಾದಿಯಲ್ಲಿ ಜನರು ಸೇರಲು ಅವಕಾಶ ಕಲ್ಪಿಸಲಾಗಿದೆ.

ಫುಕುಶಿಮಾ ಪ್ರಾಂತ್ಯದಲ್ಲಿ ಜ್ಯೋತಿ ರಿಲೇ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಯೋಜಿಸಿದ್ದ ಸಂಘಟಕರು ಇದೀಗ ಯಾವುದೇ ಪ್ರೇಕ್ಷಕರಿಲ್ಲದೆ ಸರಳವಾಗಿ ಸಮಾರಂಭ ನಡೆಸಲು ನಿರ್ಧರಿಸಿದ್ದಾರೆ. ಈ ಬೆಳವಣಿಗೆಗಳಿಂದಾಗಿ ಜುಲೈ 24ರಂದು ಒಲಿಂಪಿಕ್ಸ್ ಕ್ರೀಡಾಕೂಟ ನಿಗದಿಯಂತೆಯೇ ನಡೆಯುವುದೇ ಎಂಬ ಅನುಮಾನಗಳು ಹೆಚ್ಚಾಗಿವೆ. ಪ್ರಯಾಣ ನಿರ್ಬಂಧಗಳಿಂದಾಗಿ ಎಲ್ಲ ಒಲಿಂಪಿಕ್ಸ್ ಅರ್ಹತಾ ಕೂಟಗಳು ಸದ್ಯಕ್ಕೆ ಸ್ಥಗಿತಗೊಂಡಿವೆ. ಗ್ರೀಸ್​ನ ಒಲಿಂಪಿಯಾದಲ್ಲಿ ಈಗಾಗಲೆ ಸಾಂಪ್ರದಾಯಿಕ ರೀತಿಯಲ್ಲಿ ಜ್ಯೋತಿ ಬೆಳಗುವ ಸಮಾರಂಭವನ್ನು ಸರಳವಾಗಿ ನಡೆಸಲಾಗಿದ್ದು, ಅಲ್ಲಿ ಒಂದು ವಾರ ನಡೆಯಬೇಕಾಗಿದ್ದ ಜ್ಯೋತಿ ರಿಲೇ ಕಾರ್ಯಕ್ರಮವನ್ನೂ ರದ್ದುಗೊಳಿಸಲಾಗಿದೆ. ಇನ್ನು ಆತಿಥೇಯ ಜಪಾನ್​ಗೆ ಜ್ಯೋತಿ ಹಸ್ತಾಂತರ ಕಾರ್ಯಕ್ರಮವನ್ನೂ ಅತ್ಯಂತ ಸರಳವಾಗಿ ನಡೆಸಲಾಗುತ್ತದೆ. ಜಪಾನ್​ನಲ್ಲಿ ಇದುವರೆಗೆ 824 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, 28 ಮಂದಿ ಮೃತಪಟ್ಟಿದ್ದಾರೆ.

ಒಲಿಂಪಿಕ್ಸ್ ಸಮಿತಿ ಸದಸ್ಯರಿಗೂ ಸೋಂಕು!

ಜಪಾನ್ ಒಲಿಂಪಿಕ್ ಸಮಿತಿ ಉಪಾಧ್ಯಕ್ಷ ಕೊಜೊ ಟಶಿಮಾ, ತಮಗೆ ಕರೊನಾ ಸೋಂಕು ಬಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ‘ನನಗೆ ಸಣ್ಣದಾಗಿ ಜ್ವರ ಇತ್ತು. ಬಳಿಕ ನ್ಯೂಮೋನಿಯಾ ಲಕ್ಷಣಗಳು ಕಂಡುಬಂದಿತ್ತು. ಇಂದು ನನ್ನ ಪರೀಕ್ಷೆಯ ವರದಿ ಬಂದಿದ್ದು, ಕರೊನಾ ಇರುವುದು ದೃಢಪಟ್ಟಿದೆ. ವೈದ್ಯರ ಸಲಹೆಯಂತೆ ನಾನೀಗ ನನ್ನ ಚಿಕಿತ್ಸೆಯ ಮೇಲೆ ಗಮನಹರಿಸಿದ್ದೇನೆ’ ಎಂದು ಜಪಾನ್ ಫುಟ್​ಬಾಲ್ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ಟಶಿಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟಶಿಮಾ ಯುರೋಪ್​ನ ವಿವಿಧ ದೇಶಗಳಿಗೆ ಕಾರ್ಯನಿಮಿತ್ತ ಭೇಟಿ ನೀಡಿ ಇತ್ತೀಚೆಗಷ್ಟೇ ತವರಿಗೆ ಮರಳಿದ್ದರು. 2023ರ ಮಹಿಳೆಯರ ಫಿಫಾ ವಿಶ್ವಕಪ್​ಗೆ ಜಪಾನ್​ನ ಬಿಡ್ ಸಲ್ಲಿಸುವ ಕೆಲಸದಲ್ಲೂ ಅವರು ವ್ಯಸ್ತರಾಗಿದ್ದರು. ತವರಿಗೆ ಮರಳಿದ ಬಳಿಕ ಟಶಿಮಾ, ಜಪಾನ್​ನ ಫುಟ್​ಬಾಲ್ ಸಂಸ್ಥೆ ಕಚೇರಿಗೂ ಭೇಟಿ ನೀಡಿದ್ದರು. ಹೀಗಾಗಿ ಸದ್ಯ ಇಲ್ಲಿನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ. ತವರಿಗೆ ಮರಳುವ ಮುನ್ನ ಅವರು ಅಮೆರಿಕಕ್ಕೂ ಭೇಟಿ ನೀಡಿದ್ದಾರೆ. ಆದರೆ ತಮಗೆ ಎಲ್ಲಿ ಕರೊನಾ ಅಂಟಿಕೊಂಡಿತು ಎಂಬ ಬಗ್ಗೆ ಅವರಿಗೆ ಗೊತ್ತಿಲ್ಲ. ಹೀಗಾಗಿ ಅವರ ಸಂಪರ್ಕಕ್ಕೆ ಬಂದ ಎಲ್ಲರೂ ಭೀತಿಗೆ ಒಳಗಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net