

ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವುದೇ ಪ್ರತಿಯೊಬ್ಬ ಕ್ರೀಡಾಪಟುವಿನ ಕನಸು. ಒಲಿಂಪಿಕ್ಸ್ ಪದಕ ಗೆಲುವಿಗೆ ಕಠಿಣ ಅಭ್ಯಾಸ ನಡೆಸಿ ವೃತ್ತಿಜೀವನದುದ್ದಕ್ಕೂ ಅವರು ಶ್ರಮಿಸುತ್ತಾರೆ. ಪ್ರತಿ 4 ವರ್ಷಕ್ಕೊಮ್ಮೆ ಬರುವ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿ ವೃತ್ತಿಜೀವನವನ್ನು ಮುಗಿಸುವ ಯೋಜನೆಯನ್ನೂ ಹಲವು ಹಿರಿಯ ಕ್ರೀಡಾಪಟುಗಳು ಹೊಂದಿರುತ್ತಾರೆ. ಆದರೆ ಈ ಬಾರಿ ಕರೊನಾ ಮಹಾಮಾರಿಯಿಂದಾಗಿ ಟೋಕಿಯೊ ಒಲಿಂಪಿಕ್ಸ್ ಒಂದು ವರ್ಷ ಮುಂದೂಡಿಕೆಯಾಗಿರುವುದರಿಂದ ಈ ಅನುಭವಿ, ದಿಗ್ಗಜ ಕ್ರೀಡಾಪಟುಗಳು ವಿದಾಯಕ್ಕಾಗಿ ಇನ್ನೊಂದು ಹೆಚ್ಚುವರಿ ವರ್ಷ ಕಾಯುವಂತಾಗಿದೆ. ಕೆಲ ದಿಗ್ಗಜ, ಸ್ಟಾರ್ ಕ್ರೀಡಾಪಟುಗಳಿದ್ದರೆ ಕ್ರೀಡಾಕೂಟಕ್ಕೂ ಒಂದು ವಿಶೇಷ ಹಿರಿಮೆ. ಹೀಗಾಗಿ ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್ವರೆಗೆ ವೃತ್ತಿಜೀವನ ಮುಂದುವರಿಸುವ ಹಂಬಲದಲ್ಲಿರುವ ಹಿರಿಯ ಕ್ರೀಡಾಪಟುಗಳ ಸಂಕ್ಷಿಪ್ತ ವಿವರ ಇಲ್ಲಿದೆ.
ಅಸಾಫ ಪೊವೆಲ್ (ಅಥ್ಲೆಟಿಕ್ಸ್)
ಉಸೇನ್ ಬೋಲ್ಟ್ ಎಂಟ್ರಿಗೂ ಮುನ್ನವೇ ವಿಶ್ವದಾಖಲೆ ಹೊಂದಿದ್ದರೂ ಜಮೈಕಾದ ಅಸಾಫ ಪೊವೆಲ್ ಇದುವರೆಗೆ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ಷಿಪ್ನಲ್ಲಿ ಸ್ವರ್ಣ ಜಯಿಸಲು ಸಾಧ್ಯವಾಗಿಲ್ಲ. ಬೋಲ್ಟ್ ಅನುಪಸ್ಥಿತಿಯಲ್ಲಿ 2020ರ ಒಲಿಂಪಿಕ್ಸ್ನ 100 ಮೀ. ಓಟದಲ್ಲಿ ಸ್ವರ್ಣದ ಕನಸು ಕಾಣುತ್ತಿದ್ದ ಪೊವೆಲ್ಗೆ ಒಲಿಂಪಿಕ್ಸ್ ಮುಂದೂಡಿಕೆಯಿಂದ ಸವಾಲು ಎದುರಾಗಿದೆ. 2021ರ ಒಲಿಂಪಿಕ್ಸ್ನಲ್ಲೂ ಸ್ಪರ್ಧಿಸುವ ಕುರಿತು ಪೊವೆಲ್ ಗುಟ್ಟುಬಿಟ್ಟುಕೊಟ್ಟಿಲ್ಲ. ಮುಂದಿನ ನವೆಂಬರ್ ತಿಂಗಳಿಗೆ 39ನೇ ವರ್ಷಕ್ಕೆ ಕಾಲಿಡುತ್ತಿರುವ ಪೊವೆಲ್ ವೃತ್ತಿಜೀವನ ಅಡಕತ್ತರಿಯಲ್ಲಿ ಸಿಲುಕಿದೆ. ಪೊವೆಲ್ 2007ರಲ್ಲಿ 9.74 ಸೆಕೆಂಡ್ಗಳಲ್ಲಿ 100 ಮೀಟರ್ ಕ್ರಮಿಸುವ ಮೂಲಕ ವಿಶ್ವದಾಖಲೆ ಬರೆದಿದ್ದರು. ಆದರೆ, ಮರು ವರ್ಷ ಜಮೈಕಾದವರೇ ಆದ ಉಸೇನ್ ಬೋಲ್ಟ್ (9.58) ವಿಶ್ವದಾಖಲೆಯನ್ನು ಮುರಿದಿದ್ದರು.
ಜಸ್ಟಿನ್ ಗ್ಯಾಟ್ಲಿನ್ (ಅಥ್ಲೆಟಿಕ್ಸ್)
2004ರ ಒಲಿಂಪಿಕ್ ಚಾಂಪಿಯನ್ ಜಸ್ಟಿನ್ ಗ್ಯಾಟ್ಲಿನ್ ಮತ್ತೊಮ್ಮೆ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವಷ್ಟು ಸಾಮರ್ಥ್ಯ ಉಳಿಸಿಕೊಂಡಿದ್ದಾರೆ. ಉಸೇನ್ ಬೋಲ್ಟ್ ಸ್ಪ್ರಿಂಟಿಂಗ್ ಲೋಕಕ್ಕೆ ಆಗಮನದಿಂದಾಗಿ ಉತ್ತಮ ನಿರ್ವಹಣೆ ನಡುವೆಯೂ ಗ್ಯಾಟ್ಲಿನ್ ಹೆಸರು ರನ್ನರ್ಅಪ್ ಸ್ಥಾನದಲ್ಲೇ ಉಳಿಯಿತು. 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ 100 ಮೀಟರ್ ಸ್ಪ್ರಿಂಟಿಂಗ್ ವಿಭಾಗದಲ್ಲಿ ಪದಕ ಜಯಿಸಿದ ಅತಿಹಿರಿಯ ಅಥ್ಲೀಟ್ ಎಂಬ ಗೌರವವನ್ನು ಹೊಂದಿದ್ದಾರೆ. ಒಲಿಂಪಿಕ್ ಮುಂದೂಡಿಕೆಯಿಂದ 38 ವರ್ಷದ ಜಸ್ಟಿನ್ ಗ್ಯಾಟ್ಲಿನ್ ಲಭ್ಯತೆಯ ಪ್ರಶ್ನೆ ಎದ್ದಿದೆ.
ಅಲಿಸನ್ ಫೆಲಿಕ್ಸ್ (ಅಥ್ಲೆಟಿಕ್ಸ್)
ಒಲಿಂಪಿಕ್ಸ್ ಇತಿಹಾಸದಲ್ಲಿ 6 ಸ್ವರ್ಣ ಪದಕ ಜಯಿಸಿದ ವಿಶ್ವದ ಏಕೈಕ ಟ್ರಾ್ಯಕ್ ಮತ್ತು ಫೀಲ್ಡ್ನ ಮಹಿಳಾ ಅಥ್ಲೀಟ್ ಅಲಿಸನ್ ಫೆಲಿಕ್ಸ್. ಕಳೆದ ಎರಡು ವರ್ಷಗಳಿಂದ ಟೋಕಿಯೊ ಒಲಿಂಪಿಕ್ಸ್ಗೆ ಸಿದ್ಧಗೊಳ್ಳುತ್ತಿರುವ ಅಲಿಸನ್, 2021ರ ಒಲಿಂಪಿಕ್ಸ್ ವೇಳೆಗೆ 35ನೇ ವರ್ಷ ಪೂರೈಸಲಿದ್ದಾರೆ. ಸತತ 5ನೇ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವ ವಿಶ್ವಾಸದಲ್ಲಿರುವ ಸ್ವರ್ಣ ಪದಕದೊಂದಿಗೆ ವೃತ್ತಿಜೀವನಕ್ಕೆ ವಿದಾಯ ಹೇಳುವ ಕನಸಿನಲ್ಲಿದ್ದಾರೆ. ಆದರೆ, ಒಲಿಂಪಿಕ್ಸ್ ಮುಂದೂಡಿಕೆ ಹೋಗಿರುವುದರಿಂದ ಅಲಿಸನ್ ಮತ್ತೊಂದು ವರ್ಷ ತರಬೇತಿ ಮುಂದುವರಿಸ ಬೇಕು, ಫಿಟ್ನೆಸ್ ಕಾಯ್ದು ಕೊಳ್ಳುವುದರ ಮೇಲೆ ಅವರ ಒಲಿಂಪಿಕ್ಸ್ ಭವಿಷ್ಯ ಅಡಗಿದೆ.
ಸೆರೇನಾ ವಿಲಿಯಮ್್ಸ (ಟೆನಿಸ್)
ಅಮೆರಿಕದ ದಿಗ್ಗಜ ಆಟಗಾರ್ತಿ ಸೆರೇನಾ ವಿಲಿಯಮ್್ಸ 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಾಣಿಸಿಕೊಳ್ಳುವ ವಿಶ್ವಾಸದಲ್ಲಿದ್ದರು. ಈಗಾಗಲೇ 4 ಒಲಿಂಪಿಕ್ ಸ್ವರ್ಣ ಗೆದ್ದಿರುವ ಸೆರೇನಾ ಮುಂದಿನ ವರ್ಷದ ಸೆಪ್ಟೆಂಬರ್ ವೇಳೆಗೆ 40ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಸಿಂಗಲ್ಸ್ ವಿಭಾಗದಲ್ಲಿ 23 ಗ್ರಾಂಡ್ ಸ್ಲಾಂ ಗೆದ್ದಿರುವ ಸೆರೇನಾ, 2016 ಹೊರಪಡಿಸಿ ಹಿಂದಿನ 4 ಒಲಿಂಪಿಕ್ಸ್ ಗಳಲ್ಲಿ ಅಕ್ಕ ವೀನಸ್ ಜತೆಗೂಡಿ 3 ಹಾಗೂ ಒಮ್ಮೆ ಸಿಂಗಲ್ಸ್ ವಿಭಾಗದಲ್ಲಿ ಸ್ವರ್ಣ ಗೆದ್ದುಕೊಟ್ಟಿದ್ದಾರೆ. 2017ರಲ್ಲಿ ತಾಯ್ತನ ರಜೆ ಮೇಲೆ ತೆರಳಿದ್ದ ಸೆರೇನಾ 2018ರ ಫ್ರೆಂಚ್ ಓಪನ್ ಮೂಲಕ ವಾಪಸಾಗಿದ್ದರು.
ರೋಜರ್ ಫೆಡರರ್ (ಟೆನಿಸ್)
20 ಗ್ರಾಂಡ್ ಸ್ಲಾಂ ಚಾಂಪಿಯನ್ ರೋಜರ್ ಫೆಡರರ್ಗೆ ಮುಂದಿನ ವರ್ಷದ ಆಗಸ್ಟ್ ವೇಳೆಗೆ 40ರ ಪ್ರಾಯ. 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಸ್ಟಾ್ಯನಿಸ್ಲಾಸ್ ವಾವ್ರಿಂಕಾ ಜತೆಗೂಡಿ ಡಬಲ್ಸ್ ವಿಭಾಗದಲ್ಲಿ ಸ್ವರ್ಣ ಗೆದ್ದಿದ್ದರು. 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರೆ, ಗಾಯದ ಸಮಸ್ಯೆಯಿಂದ 2016ರ ರಿಯೋ ಒಲಿಂಪಿಕ್ಸ್ನಿಂದ ಹೊರಗುಳಿದಿದ್ದರು. 2018ರ ಆಸ್ಟ್ರೇಲಿಯನ್ ಓಪನ್ ಬಳಿಕ ಯಾವುದೇ ಗ್ರಾಂಡ್ ಸ್ಲಾಂ ಗೆಲ್ಲದಿದ್ದರೂ ಕನಿಷ್ಠ ಎಂಟರ ಘಟ್ಟಕ್ಕೇರಿದ್ದಾರೆ. 40ರ ಹರೆಯದ ಫೆಡರರ್ ವಯಸ್ಸೆಂಬ ಅಂಕಿ ಲೆಕ್ಕಿಸದಿದ್ದರೆ ಮುಂದಿನ ಒಲಿಂಪಿಕ್ಸ್ನಲ್ಲಿ ಆಡಬಹುದು.
ಮೇರಿ ಕೋಮ್ (ಬಾಕ್ಸಿಂಗ್)
6 ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಎಂಸಿ ಮೇರಿ ಕೋಮ್ ಈಗಾಗಲೇ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡು ಸಿದ್ಧತೆಯಲ್ಲಿ ತೊಡಗಿದ್ದರು. 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚು ಜಯಿಸುವ ಮೂಲಕ ಭಾರತೀಯ ಮಹಿಳೆಯರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. 2016ರಲ್ಲಿ ನಿರಾಸೆ ಅನುಭವಿಸಿದ್ದರೂ 2018ರಲ್ಲಿ 6ನೇ ಬಾರಿಗೆ ವಿಶ್ವ ಚಾಂಪಿಯನ್ಆಗುವ ಮೂಲಕ ಮತ್ತೊಮ್ಮೆ ಪ್ರವರ್ಧಮಾನಕ್ಕೆ ಮರಳಿದರು. ಹಲವು ಸವಾಲುಗಳ ನಡುವೆಯೂ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದ 37 ವರ್ಷದ ಮೇರಿ ಕೋಮ್ ಒಲಿಂಪಿಕ್ಸ್ ಮುಂದೂಡಿಕೆಯಿಂದಾಗಿ ಕೊಂಚ ಹಿನ್ನಡೆ ಅನುಭವಿಸಿದ್ದಾರೆ. ಹಾಲಿ ರಾಜ್ಯಸಭಾ ಸದಸ್ಯೆಯಾಗಿರುವ ಮೂರು ಮಕ್ಕಳು ತಾಯಿ ಮೇರಿ ಕೋಮ್ೆ ಫಿಟ್ನೆಸ್ ದೊಡ್ಡ ಸಮಸ್ಯೆಯಾಗಿದೆ. ಒಂದು ವೇಳೆ ಫಿಟ್ನೆಸ್ ಕಾಯ್ದುಕೊಂಡರೆ 2021ರ ಒಲಿಂಪಿಕ್ಸ್ ನಲ್ಲಿ ಮೇರಿ ಕೋಮ್ ನಿರ್ವಹಣೆ ನೋಡಬಹುದು.
ಲಿಯಾಂಡರ್ ಪೇಸ್ (ಟೆನಿಸ್)
2020ರ ಒಲಿಂಪಿಕ್ಸ್ ಬಳಿಕ ಸುದೀರ್ಘ ವೃತ್ತಿಜೀವನಕ್ಕೆ ಗುಡ್ಬಾಯ್ ಹೇಳುವ ನಿರೀಕ್ಷೆಯಲ್ಲಿದ್ದ ಲಿಯಾಂಡರ್ ಪೇಸ್ ಕೂಡ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಕಣಕ್ಕಿಳಿಯುವ ಇರಾದೆಯಲ್ಲಿದ್ದಾರೆ. ಭಾರತದಲ್ಲಿ ಹೋದ ಕಡೆಯಲ್ಲ ಬೀಳ್ಕೊಡುಗೆ ಪಡೆದಿರುವ ಪೇಸ್ ಮುಂದಿನ ಹಾದಿಯೂ ಅನಿಶ್ಚಿತತೆಯಿಂದ ಕೂಡಿದೆ. 46 ವರ್ಷದ ಪೇಸ್ 8ನೇ ಒಲಿಂಪಿಕ್ಸ್ನಲ್ಲಿ ಸಂಪೂರ್ಣ ಸಜ್ಜಾಗಿದ್ದರು. 1996ರ ಅಟ್ಲಾಂಟ ಒಲಿಂಪಿಕ್ಸ್ನಲ್ಲಿ ಕಂಚು ಜಯಿಸುವ ಮೂಲಕ ಭಾರತದಲ್ಲಿ ಮನೆಮಾತಾದ ಪೇಸ್, ವಯಸ್ಸು ಕೇವಲ ಅಂಕಿ ಎಂದು ನಿರೂಪಿಸಿದ ವ್ಯಕ್ತಿ. ಸದ್ಯ ಸ್ವತಃ ಪೇಸ್ ಕೂಡ ಏನು ಹೇಳುವ ಸ್ಥಿತಿಯಲ್ಲಿಲ್ಲ. ಫಿಟ್ನೆಸ್ ಆಧಾರದ ಮೇಲೆ 18 ಗ್ರಾಂಡ್ ಸ್ಲಾಂ ಒಡೆಯ ತಮ್ಮ ಭವಿಷ್ಯ ನಿರ್ಧ ರಿಸಲಿದ್ದಾರೆ. ಪೇಸ್ ಮುಂದಿನ ವರ್ಷವೂ ಕಣಕ್ಕಿಳಿದರೆ ಅಚ್ಚರಿಯಿಲ್ಲ.
ಟೈಗರ್ ವುಡ್ಸ್ (ಗಾಲ್ಪ್)
ಅಂತಾರಾಷ್ಟ್ರೀಯ ಮಟ್ಟದ 15 ಪ್ರಶಸ್ತಿ ಜಯಿಸಿರುವ ಟೈಗರ್ ವುಡ್ಸ್ ಅಮೆರಿಕ ಕ್ರೀಡಾಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಗಾಲ್ಪ್ ಆಟಗಾರ. ಗಾಯದ ಸಮಸ್ಯೆಯಿಂದ 2016ರ ರಿಯೋ ಒಲಿಂಪಿಕ್ಸ್ನಿಂದ ಹೊರಗುಳಿದಿದ್ದ ವುಡ್ಸ್ಗೆ ಸ್ವತಃ ಆಯೋಜಕರೇ ಟೋಕಿಯೊದಲ್ಲಿ ಕಾಣಿಸಿಕೊಳ್ಳುವಂತೆ ಬಯಸಿದ್ದರು. ಮುಂದಿನ ಡಿಸೆಂಬರ್ಗೆ 40ನೇ ವರ್ಷಕ್ಕೆ ಕಾಲಿಡಲಿರುವ ವುಡ್ಸ್ಗೆ ಇತ್ತೀಚೆಗೆ ಬೆನ್ನು ನೋವು ತೀವ್ರವಾಗಿ ಕಾಡುತ್ತಿದೆ. ಸದ್ಯ 6ನೇ ರ‍್ಯಾಂಕಿಂಗ್ ಹೊಂದಿರುವ ವುಡ್ಸ್ ಮುಂದಿನ ವರ್ಷದ ವೇಳೆಗೆ ರ್ಯಾಂಕಿಂಗ್ನಲ್ಲಿ ಸುಧಾರಣೆ ಕಂಡರಷ್ಟೇ ಅಮೆರಿಕ ತಂಡದಲ್ಲಿ ಸ್ಥಾನಗಿಟ್ಟಿಸಲು ಸಾಧ್ಯ. ಏಕೆಂದರೆ, ಅಗ್ರ ನಾಲ್ವರಿಗಷ್ಟೇ ಅಮೆರಿಕ ತಂಡದಲ್ಲಿ ಸ್ಥಾನ ನೀಡಲಾಗುತ್ತಿದೆ.