ಟೋಕಿಯೊ ಒಲಿಂಪಿಕ್ಸ್​ಗೂ ಕರೊನಾ ಭೀತಿ: ಆತಿಥೇಯ ಜಪಾನ್ ಕಳವಳ, ಕ್ರೀಡಾಕೂಟ ರದ್ದುಗೊಳಿಸುವ ಯೋಚನೆ ಇಲ್ಲ

Tokiyo
Published on

ಟೋಕಿಯೊ: ಆರು ತಿಂಗಳ ನಂತರ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್​ಗೆ ಶೀಘ್ರವಾಗಿ ಹರಡುತ್ತಿರುವ ಚೀನಾದ ಮಾರಕ ಕರೊನಾ ಸೋಂಕಿನ ಭೀತಿ ಆವರಿಸಿದೆ. ಕರೊನಾ ವೈರಸ್ ಕೂಟವನ್ನು ಕಾಡುವ ಬಗ್ಗೆ ಸಂಘಟಕರು ಬುಧವಾರ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ನಾಲ್ಕು ವರ್ಷಕ್ಕೊಮ್ಮೆನಡೆಯುವ ಜಾಗತಿಕ ಕ್ರೀಡಾಕೂಟವನ್ನು ರದ್ದುಗೊಳಿಸುವ ಯಾವುದೇ ಯೋಚನೆ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

‘ಕರೊನಾ ಸೋಂಕು ಹರಡುತ್ತಿರುವ ಬಗ್ಗೆ ನಾನು ತೀವ್ರ ಕಳವಳಗೊಂಡಿದ್ದೇನೆ. ಇದು ಕ್ರೀಡಾಕೂಟಕ್ಕೆ ತೊಂದರೆ ಉಂಟುಮಾಡಬಹುದು. ಶೀಘ್ರವಾದಷ್ಟು ಬೇಗನೆ ಈ ಸೋಂಕು ನಿವಾರಿಸುವ ಅಗತ್ಯವಿದೆ’ ಎಂದು ಟೋಕಿಯೊ ಒಲಿಂಪಿಕ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟೊಶಿರೊ ಮುಟೊ ಹೇಳಿದ್ದಾರೆ. ಒಲಿಂಪಿಕ್ಸ್ ಜುಲೈ 24ರಿಂದ ಆಗಸ್ಟ್ 9ರವರೆಗೆ ನಡೆಯಲಿದೆ.

ಕ್ರೀಡಾಕೂಟದ ವೇಳೆ ಸುಮಾರು 11 ಸಾವಿರ ಕ್ರೀಡಾಪಟುಗಳು ಉಳಿದುಕೊಳ್ಳಲಿರುವ ಕ್ರೀಡಾಗ್ರಾಮದ ಮೇಯರ್ ಸಬುರೊ ಖವಾಬುಚಿ ಕೂಡ ಸೋಂಕಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ‘ಸೋಂಕು ಶೀಘ್ರ ನಿವಾರಣೆಯಾಗಿ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಸರಾಗವಾಗಿ ನಡೆಯುವಂತಾಗಬೇಕು. ಇಲ್ಲದಿದ್ದರೆ ಕ್ರೀಡಾಪಟುಗಳಿಗೆ ಕ್ರೀಡೆಯ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತದೆ’ ಎಂದಿದ್ದಾರೆ.

ಕರೊನಾ ಭೀತಿಯಿಂದಾಗಿ ಚೀನಾದಲ್ಲಿ ನಿಗದಿಯಾಗಿದ್ದ ಹಲವು ಒಲಿಂಪಿಕ್ಸ್ ಅರ್ಹತಾ ಕೂಟಗಳು ಮುಂದೂಡಲ್ಪಟ್ಟಿವೆ ಅಥವಾ ಸ್ಥಳಾಂತರಗೊಂಡಿವೆ. ಕರೊನಾ ಭೀತಿಯಿಂದಾಗಿ ಜಪಾನ್​ಗೆ ಒಲಿಂಪಿಕ್ಸ್ ವೇಳೆ ಬರುವ ಕ್ರೀಡಾಪ್ರೇಮಿಗಳ ಸಂಖ್ಯೆಯೂ ಕುಸಿತವಾಗುವ ಭೀತಿ ಇದೆ. ಜಪಾನ್​ನಲ್ಲಿ ಇದುವರೆಗೆ ಕರೊನಾ ಸೋಂಕಿನ 10 ಪ್ರಕರಣ ಕಂಡುಬಂದಿದ್ದರೂ, ಯಾವುದೇ ಸಾವು ಸಂಭವಿಸಿಲ್ಲ. -ಪಿಟಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net