ಇಂದು ರಾಜಸ್ಥಾನ-ಸನ್​ರೈಸರ್ಸ್​ ಕಾದಾಟ, ಅಂಕಪಟ್ಟಿಯಲ್ಲಿ ಕೊನೇ 2 ಸ್ಥಾನದಲ್ಲಿರುವ ತಂಡಗಳ ಮುಖಾಮುಖಿ

rr vs srh web
Published on

ನವದೆಹಲಿ: ಐಪಿಎಲ್​ 14ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಕೊನೇ 2 ಸ್ಥಾನದಲ್ಲಿರುವ ತಂಡಗಳಾದ ರಾಜಸ್ಥಾನ ರಾಯಲ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ಮುಖಾಮುಖಿ ಆಗಲಿವೆ. ಕಳೆದ ಪಂದ್ಯದಲ್ಲಿ ಮುಂಬೈ, ಚೆನ್ನೈ ತಂಡಗಳೆದುರು ಸೋಲು ಕಂಡಿರುವ ಉಭಯ ತಂಡಗಳು ಗೆಲುವಿನ ಹಾದಿಗೆ ಮರಳಲು ಹೋರಾಡಲಿವೆ. ಡೇವಿಡ್​ ವಾರ್ನರ್​ರನ್ನು ನಾಯಕತ್ವದಿಂದ ಕೈಬಿಟ್ಟು ಕೇನ್​ ವಿಲಿಯಮ್ಸನ್​ಗೆ ಈ ಜವಾಬ್ದಾರಿ ಒಪ್ಪಿಸುವ ಮೂಲಕ ಸನ್​ರೈಸರ್ಸ್​ ತಂಡವನ್ನು ಗೆಲುವಿನ ಲಯಕ್ಕೆ ತರುವ ಪ್ರಯತ್ನ ಮಾಡಲಾಗಿದೆ. ಸಂಜು ಸ್ಯಾಮ್ಸನ್​ ಬಳಗ ಇದುವರೆಗೆ ಆಡಿದ 6 ಪಂದ್ಯಗಳಲ್ಲಿ 2ರಲ್ಲಷ್ಟೇ ಜಯಿಸಿದ್ದರೆ, ಸನ್​ರೈಸರ್ಸ್​ ಇಷ್ಟೇ ಪಂದ್ಯಗಳಲ್ಲಿ ಒಂದರಲ್ಲಷ್ಟೇ ಗೆದ್ದು ಕೊನೇ ಸ್ಥಾನದಲ್ಲಿದೆ. ಪ್ಲೇಆ್​ ಅವಕಾಶವನ್ನು ಜೀವಂತವಾಗಿರಿಸಿಕೊಳ್ಳಲು ಉಭಯ ತಂಡಗಳಿಗೂ ಈಗ ಗೆಲುವಿನ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ಜಯಕ್ಕೆ ನಿಕಟ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.

ರಾಜಸ್ಥಾನ ಅಸ್ಥಿರ ನಿರ್ವಹಣೆ

ಟೂನಿರ್ಯ ಮೊದಲ ಪಂದ್ಯದಲ್ಲಿ ಕೂದಲೆಳೆಯ ಅಂತರದಲ್ಲಿ ಸೋತರೂ, 2ನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದಿದ್ದ ರಾಜಸ್ಥಾನ ತಂಡ ನಂತರ ಮತ್ತೆರಡು ಪಂದ್ಯಗಳಲ್ಲಿ ಎಡವಿತ್ತು. 5ನೇ ಪಂದ್ಯದಲ್ಲಿ ಮತ್ತೆ ಜಯಿಸಿದರೂ, 6ನೇ ಪಂದ್ಯದಲ್ಲಿ ಲಯ ತಪ್ಪಿತ್ತು. ಈ ಅಸ್ಥಿರ ನಿರ್ವಹಣೆಯೇ ರಾಯಲ್ಸ್​ಗೆ ದೊಡ್ಡ ಹಿನ್ನಡೆಯಾಗಿದೆ. ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಅಗ್ರ ಕ್ರಮಾಂಕ ಉತ್ತಮ ನಿರ್ವಹಣೆ ತೋರಿ 171 ರನ್​ ಪೇರಿಸಲು ನೆರವಾಗಿತ್ತು. ಆದರೆ ಬೌಲಿಂಗ್​ ವಿಭಾಗ ಮೊನಚು ಕಳೆದುಕೊಂಡಿತ್ತು. ಹೀಗಾಗಿ ಮುಂಬೈ ತಂಡ ಈ ಮೊತ್ತವನ್ನು ಸರಾಗವಾಗಿ ಬೆನ್ನಟ್ಟಿ ಜಯಿಸಿತ್ತು. ಜೋ್ರಾ ಆರ್ಚರ್​, ಬೆನ್​ ಸ್ಟೋಕ್ಸ್​ ಸಹಿತ ಪ್ರಮುಖ ವಿದೇಶಿ ಆಟಗಾರರ ಗೈರಿನಲ್ಲಿ ರಾಯಲ್ಸ್​ ತಂಡ ದೊಡ್ಡ ತಲೆನೋವು ಎದುರಿಸುತ್ತಿದೆ. ಪ್ರಮುಖವಾಗಿ ಬ್ಯಾಟಿಂಗ್​ ವಿಭಾಗ ನಾಯಕ ಸಂಜು ಸ್ಯಾಮ್ಸನ್​ ಮತ್ತು ಜೋಸ್​ ಬಟ್ಲರ್​ ಅವರನ್ನೇ ನೆಚ್ಚಿಕೊಂಡಿದೆ. ಡೇವಿಡ್​ ಮಿಲ್ಲರ್​ ಟೂನಿರ್ಯಲ್ಲಿ ಅವಕಾಶ ಸಿಕ್ಕ ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರೂ, ನಂತರ ರನ್​ಬರ ಎದುರಿಸುತ್ತಿದ್ದಾರೆ. ಕಳೆದ ಹರಾಜಿನಲ್ಲಿ ದುಬಾರಿ ಬೆಲೆಗೆ ತಂಡ ಸೇರಿದ್ದ ಆಲ್ರೌಂಡರ್​ ಕ್ರಿಸ್​ ಮಾರಿಸ್​ ಮಾತ್ರ ಸದ್ಯಕ್ಕೆ ನ್ಯಾಯ ಸಲ್ಲಿಸುತ್ತಿದ್ದಾರೆ. ಆದರೆ ಅವರು ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗುತ್ತಿಲ್ಲ. ಯುವ ವೇಗಿ ಚೇತನ್​ ಸಕಾರಿಯಾ 6 ಪಂದ್ಯಗಳಲ್ಲಿ 7 ವಿಕೆಟ್​ ಕಬಳಿಸಿ ಮಿಂಚಿರುವುದು ರಾಯಲ್ಸ್​ಗೆ ಪ್ಲಸ್​ ಪಾಯಿಂಟ್​ ಆಗಿದೆ.

ಸಮಸ್ಯೆಯ ಸುಳಿಯಲ್ಲಿ ಸನ್​

ಕಳೆದ ಆವೃತ್ತಿಯಿಂದ ತಂಡದಲ್ಲಿ ಹೆಚ್ಚಿನ ಬದಲಾವಣೆಯನ್ನೇನೂ ಕಾಣದಿದ್ದರೂ, ಈ ಬಾರಿ ಸನ್​ರೈಸರ್ಸ್​ನ ನಿರ್ವಹಣೆ ಅತ್ಯಂತ ಕಳಪೆಯಾಗಿದೆ. ಹ್ಯಾಟ್ರಿಕ್​ ಸೋಲಿನ ಬಳಿಕ ಗೆಲುವಿನ ಖಾತೆ ತೆರೆದರೂ ನಂತರ ಮತ್ತೆರಡು ಸೋಲು ಎದುರಾಗಿದೆ. ಕೇನ್​ ವಿಲಿಯಮ್ಸನ್​ ಫಿಟ್​ ಆಗಿ ತಂಡಕ್ಕೆ ಮರಳಿದರೂ, ಕನ್ನಡಿಗ ಮನೀಷ್​ ಪಾಂಡೆ 2 ಪಂದ್ಯಗಳ ವಿಶ್ರಾಂತಿಯ ಬಳಿಕ ತಂಡಕ್ಕೆ ವಾಪಸ್​ ಆಗಿದ್ದರೂ, ಸನ್​ರೈಸರ್ಸ್​ ನಿರ್ವಹಣೆಯ ಮಟ್ಟ ಸುಧಾರಿಸುತ್ತಿಲ್ಲ. ಬೌಲರ್​ಗಳು ಮಿಂಚಿದಾಗ ಬ್ಯಾಟ್ಸ್​ಮನ್​ಗಳು ಕೈಕೊಡುತ್ತಿದ್ದರೆ, ಬ್ಯಾಟ್ಸ್​ಮನ್​ಗಳು ಮಿಂಚಿದಾಗ ಬೌಲರ್​ಗಳು ವೈಲ್ಯ ಕಾಣುತ್ತಿದ್ದಾರೆ. ಡೇವಿಡ್​ ವಾರ್ನರ್​ ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರೂ, ಅದು ಅತ್ಯಂತ (50 ಎಸೆತ) ನಿಧಾನಗತಿಯದ್ದಾಗಿತ್ತು. ಅದು ತಂಡಕ್ಕೆ ಯಾವುದೇ ಪ್ರಯೋಜನ ತಂದುಕೊಡದ ಕಾರಣ ವಾರ್ನರ್​ ಈಗ ನಾಯಕತ್ವವನ್ನೇ ಕಳೆದುಕೊಂಡಿದ್ದಾರೆ. ಜಾನಿ ಬೇರ್​ಸ್ಟೋ ಕೂಡ ದೊಡ್ಡ ಮೊತ್ತ ಪೇರಿಸಲು ವಿಲರಾಗುತ್ತಿದ್ದಾರೆ.

*ರಾಜಸ್ಥಾನ ರಾಯಲ್ಸ್​: ಆಲ್ರೌಂಡರ್​ ರಾಹುಲ್​ ತೆವಾಟಿಯಾ ಈ ಸಲ ಕಳೆದ ವರ್ಷದಷ್ಟು ಪರಿಣಾಮಕಾರಿ ಎನಿಸಿಲ್ಲ. ಆಡಿದ 6 ಪಂದ್ಯಗಳಲ್ಲಿ 1 ವಿಕೆಟ್​ ಮಾತ್ರ ಗಳಿಸಿದ್ದಾರೆ. ಅವರ ಸ್ಥಾನದಲ್ಲಿ ಮಹಿಪಾಲ್​ ಲೊಮ್ರೊರ್​ಗೆ ಅವಕಾಶ ಸಿಕ್ಕರೆ ಅಚ್ಚರಿ ಇಲ್ಲ. ವಿದೇಶಿ ಆಟಗಾರರ ಬದಲಾವಣೆಗೆ ತಂಡದಲ್ಲಿ ಮೀಸಲು ಬಳಗದ ಕೊರತೆ ಇದೆ.

ಕಳೆದ ಪಂದ್ಯ: ಮುಂಬೈ ಇಂಡಿಯನ್ಸ್​ ವಿರುದ್ಧ 7 ವಿಕೆಟ್​ ಸೋಲು.

*ಸನ್​ರೈಸರ್ಸ್​ ಹೈದರಾಬಾದ್​: ವಾರ್ನರ್​ ನಾಯಕತ್ವ ಕಳೆದುಕೊಂಡ ಬಳಿಕ ಆಡುವ ಬಳಗದಿಂದಲೂ ಹೊರಬೀಳುವ ಸಾಧ್ಯತೆ ಇದ್ದು, ಆಲ್ರೌಂಡರ್​ ಜೇಸನ್​ ಹೋಲ್ಡರ್​ ಮರಳಿ ಅವಕಾಶ ಪಡೆಯಬಹುದು. ವಾರ್ನರ್​ ಸ್ಥಾನದಲ್ಲಿ ವೃದ್ಧಿಮಾನ್​ ಸಾಹ ಆರಂಭಿಕರಾಗಿ ಆಡಬಹುದು. 4 ಪಂದ್ಯಗಳಲ್ಲಿ 3 ವಿಕೆಟ್​ ಕಬಳಿಸಿದ ಬಳಿಕ ಕಳೆದೆರಡು ಪಂದ್ಯಗಳಲ್ಲಿ ಬೆಂಚು ಕಾಯಿಸಿರುವ ಅನುಭವಿ ವೇಗಿ ಭುವನೇಶ್ವರ್​ ಕುಮಾರ್​ ತಂಡಕ್ಕೆ ಮರಳಬಹುದು. ತೊಡೆ ಗಾಯದಿಂದ ಭುವಿ ಚೇತರಿಸಿಕೊಂಡರೆ, ಸಂದೀಪ್​ ಶರ್ಮ ಹೊರಗುಳಿಯಲಿದ್ದಾರೆ.

ಕಳೆದ ಪಂದ್ಯ: ಚೆನ್ನೈ ಸೂಪರ್​ಕಿಂಗ್ಸ್​ ವಿರುದ್ಧ 7 ವಿಕೆಟ್​ ಸೋಲು.

*ಮುಖಾಮುಖಿ: 13

ರಾಜಸ್ಥಾನ: 6

ಸನ್​ರೈಸರ್ಸ್​: 7

ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net