

ದುಬೈ: ಸತತ ಎರಡು ಗೆಲುವು ದಾಖಲಿಸಿ ಆತ್ಮವಿಶ್ವಾಸದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-13ರ ತನ್ನ 5ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಮವಾರ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಎದುರಿಸಲಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು ಆರ್‌ಸಿಬಿ ಮತ್ತು ಡೆಲ್ಲಿ ತಂಡಗಳು ಪೈಪೋಟಿ ನಡೆಸಲಿವೆ. ಉಭಯ ತಂಡಗಳು ಲೀಗ್‌ನಲ್ಲಿ ಇದುವರೆಗೆ ಆಡಿರುವ ತಲಾ 4 ಪಂದ್ಯಗಳಿಂದ 3ರಲ್ಲಿ ಜಯ ದಾಖಲಿಸಿ, 1ರಲ್ಲಿ ಸೋತಿವೆ. ಹಿಂದಿನ ಪಂದ್ಯದಲ್ಲಿ ಕೆಕೆಆರ್ ಎದುರು ರನ್ ಹೊಳೆಯನ್ನೇ ಹರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪ್ರಬಲ ಪೈಪೋಟಿಗೆ ಸಜ್ಜಾಗಿದೆ.
ಆತ್ಮವಿಶ್ವಾಸದಲ್ಲಿ ಕೊಹ್ಲಿ ಪಡೆ: ಹಿಂದಿನ ಮೂರು ಆವೃತ್ತಿಗಳಲ್ಲಿ ಕನಿಷ್ಠ ಪ್ಲೇಆಫ್ ಹಂತಕ್ಕೇರಲು ವಿಫಲವಾಗಿದ್ದ ಆರ್‌ಸಿಬಿ ಈ ಬಾರಿ ಸೈಮನ್ ಕ್ಯಾಟಿಚ್ ಹಾಗು ಮೈಕ್ ಹೆಸ್ಸನ್ ಮಾರ್ಗದರ್ಶನದಲ್ಲಿ ಉತ್ತಮ ಲಯದಲ್ಲಿ ಸಾಗಿದೆ. ಟೂರ್ನಿಯಲ್ಲಿ ಇದುವರೆಗೆ ತೋರಿರುವ ನಿರ್ವಹಣೆಯೇ ಇದಕ್ಕೆ ಸಾಕ್ಷಿ. ಆರಂಭಿಕ ಮೂರು ಪಂದ್ಯಗಳಲ್ಲಿ ರನ್‌ಗಳಿಸಲು ಪರದಾಡಿದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಅರ್ಧಶತಕ ಸಿಡಿಸುವ ಮೂಲಕ ಲಯ ಕಂಡುಕೊಳ್ಳಲು ಯಶಸ್ವಿಯಾಗಿರುವುದು ಆರ್‌ಸಿಬಿಗೆ ಇನ್ನಷ್ಟು ಬಲ ತುಂಬಿದೆ. ಆಡಿರುವ 4 ಪಂದ್ಯಗಳಲ್ಲಿ 3 ಅರ್ಧಶತಕ ಸಿಡಿಸಿರುವ ದೇವದತ್ ಪಡಿಕಲ್, ನಾಯಕನ ನಂಬಿಕೆ ಉಳಿಸಿಕೊಂಡಿದ್ದು, ಇದುವರೆಗೂ 174 ರನ್ ಗಳಿಸಿದ್ದಾರೆ. ಜತೆಗೆ ಟೂರ್ನಿಯಲ್ಲಿ ಇದುವರೆಗೂ ಹೆಚ್ಚು ರನ್‌ಗಳಿಸಿರುವ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಆರನ್ ಫಿಂಚ್ ಜತೆಗೂಡಿ ಆರಂಭಿಕ ಹಂತದಲ್ಲಿ ತಂಡಕ್ಕೆ ಆಸರೆಯಾಗಿದ್ದಾರೆ. ಎಬಿ ಡಿವಿಲಿಯರ್ಸ್, ಶಿವಂ ದುಬೆ ಜೋಡಿ ಮಧ್ಯಮ ಕ್ರಮಾಂಕದಲ್ಲಿ ಭರವಸೆಯಾಗಿದೆ. ಬೌಲಿಂಗ್ ವಿಭಾಗದಲ್ಲಿ ಇಸುರು ಉದನಾ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದರೂ ಆಡಂ ಜಂಪಾ ಇನ್ನು ಫಾರ್ಮ್‌ಗೆ ಕಂಡುಕೊಳ್ಳಬೇಕಿದೆ. ಯಜುವೇಂದ್ರ ಚಾಹಲ್ ತಂಡದ ಪ್ರಮುಖ ಟ್ರಂಪ್ ಕಾರ್ಡ್ ಎನಿಸಿದ್ದಾರೆ. ಆಲ್ರೌಂಡರ್ ಕ್ರಿಸ್ ಮಾರಿಸ್ ಲಭ್ಯತೆ ಇನ್ನು ಖಚಿತವಾಗಿಲ್ಲ.
ಉತ್ತಮ ಲಯದಲ್ಲಿ ಡೆಲ್ಲಿ : ಹಿಂದಿನ ಪಂದ್ಯದಲ್ಲಿ ಕೆಕೆಆರ್ ಎದುರು ರನ್ ಹೊಳೆಯನ್ನೇ ಹರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ನಾಯಕ ಶ್ರೇಯಸ್ ಅಯ್ಯರ್, ಪೃಥ್ವಿ ಷಾ, ಶಿಖರ್ ಧವನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ ಸ್ಫೋಟಿಸುತ್ತಿದ್ದರೂ ದೊಡ್ಡ ಮೊತ್ತ ಪೇರಿಸಲು ವಿಲರಾಗುತ್ತಿದ್ದಾರೆ. ಕಗಿಸೊ ರಬಾಡ, ಅನ್ರಿಚ್ ನೋರ್ಜೆ, ಆರ್.ಅಶ್ವಿನ್, ಅಮಿತ್ ಮಿಶ್ರಾ ಒಳಗೊಂಡ ಬೌಲಿಂಗ್ ಪಡೆ ಆರ್‌ಸಿಬಿಗೆ ಕಡಿವಾಣ ಹಾಕಲು ಸಜ್ಜಾಗಿದೆ. ಕಳೆದ ಪಂದ್ಯದಲ್ಲಿ ಇಶಾಂತ್ ಶರ್ಮ ಬದಲಿಗೆ ಆಡುವ ಅವಕಾಶ ಪಡೆದ ಹರ್ಷಲ್ ಪಟೇಲ್, 2 ವಿಕೆಟ್ ಕಬಳಿಸುವ ಮೂಲಕ ಮಿಂಚಿದ್ದರು.
ಟೀಮ್ ನ್ಯೂಸ್:
ಆರ್‌ಸಿಬಿ: ಗೆಲುವಿನ ಲಯದಲ್ಲಿರುವ ವಿರಾಟ್ ಬಳಗ ಸತತ ಮೂರನೇ ಪಂದ್ಯಕ್ಕೂ ಇದೇ ತಂಡ ಉಳಿಸಿಕೊಳ್ಳುವ ಸಾಧ್ಯತೆಗಳಿವೆ. ಒಂದು ವೇಳೆ ಆಲ್ರೌಂಡರ್ ಕ್ರಿಸ್ ಮಾರಿಸ್ ಫಿಟ್ ಆದಲ್ಲಿ ಆಡಂ ಜಂಪಾ ಹೊರಗುಳಿಯಬಹುದು.
ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ಎದುರು 8 ವಿಕೆಟ್ ಜಯ
ಸಂಭಾವ್ಯ ತಂಡ: ದೇವದತ್ ಪಡಿಕಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ವಿಕೀ), ಶಿವಂ ದುಬೆ, ಗುರುಕೀರತ್ ಸಿಂಗ್, ವಾಷಿಂಗ್ಟನ್ ಸುಂದರ್, ಇರುಸು ಉದಾನ, ನವದೀಪ್ ಸೈನಿ, ಆಡಂ ಜಂಪಾ, ಯಜುವೇಂದ್ರ ಚಾಹಲ್.
ಡೆಲ್ಲಿ ಕ್ಯಾಪಿಟಲ್ಸ್: ಕಳೆದ ಪಂದ್ಯದಲ್ಲಿ ಎರಡು ಬದಲಾವಣೆ ಮಾಡಿಕೊಂಡಿತ್ತು. ಗೆಲುವಿನ ಹಾದಿಗೆ ಮರಳಿರುವುದರಿಂದ ಹಿಂದಿನ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಬಹುದಾದರೂ, ಗಾಯಗೊಂಡಿರುವ ಸ್ಪಿನ್ನರ್ ಅಮಿತ್ ಮಿಶ್ರಾ ಫಿಟ್ನೆಸ್ ಬಗೆಗಿನ ಗೊಂದಲದಿಂದಾಗಿ ಅವರ ಲಭ್ಯತೆ ಅನುಮಾನದಲ್ಲಿದೆ. ಇಶಾಂತ್ ಶರ್ಮ ಬದಲಿಗೆ ಅವಕಾಶ ಗಿಟ್ಟಿಸಿಕೊಂಡಿದ್ದ ಹರ್ಷಲ್ ಪಟೇಲ್ ಉತ್ತಮ ಲಯದಲ್ಲಿರುವುದರಿಂದ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ.
ಕಳೆದ ಪಂದ್ಯ: ಕೆಕೆಆರ್ ಎದುರು 18 ರನ್ ಜಯ.
ಸಂಭಾವ್ಯ ತಂಡ: ಪೃಥ್ವಿ ಷಾ, ಶಿಖರ್ ಧವನ್, ರಿಷಭ್ ಪಂತ್ (ವಿಕೀ), ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೋಯಿನಿಸ್, ಶಿಮ್ರೋನ್ ಹೆಟ್ಮೆಯೆರ್, ಆರ್.ಅಶ್ವಿನ್, ಕಗಿಸೊ ರಬಾಡ, ಅನ್ರಿಚ್ ನೋರ್ಜೆ, ಅಮಿತ್ ಮಿಶ್ರಾ, ಹರ್ಷಲ್ ಪಟೇಲ್.
ಪಂದ್ಯ ಆರಂಭ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವಕ್ಸ್
ಮುಖಾಮುಖಿ: 23, ಆರ್‌ಸಿಬಿ: 14, ಡೆಲ್ಲಿ : 8, ರದ್ದು: 1.