

ಪೊಚೆಫ್ಸ್ಟ್ರೋಮ್ 5ನೇ ಬಾರಿ ಪ್ರಶಸ್ತಿ ಗೆಲುವಿನ ಹಂಬಲದಲ್ಲಿರುವ ಭಾರತ ಕಿರಿಯರ ತಂಡ 19 ವಯೋಮಿತಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಸಜ್ಜಾಗಿದೆ.
ಪೃಥ್ವಿ ಷಾ ನಾಯಕತ್ವದಲ್ಲಿ ಭಾರತ ತಂಡ 2018ರಲ್ಲಿ ಚಾಂಪಿಯನ್ ಆಗಿತ್ತು. 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮುತ್ತಿರುವ ಭಾರತ, ಈ ಹಂತದಲ್ಲೇ ಹಲವು ಸ್ಟಾರ್ ಆಟಗಾರರನ್ನು ತಯಾರಿಸಿದೆ. ಎನ್ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಕಿರಿಯರ ಕ್ರಿಕೆಟಿಗೆ ಬಿಸಿಸಿಐ ರೂಪಿಸಿದ ಹಲವು ಯೋಜನೆಗಳ ಫಲವೇ ಭಾರತ ತಂಡ ಸತತ 3ನೇ ಬಾರಿಗೆ ಫೈನಲ್ ಪ್ರವೇಶಿಸಿದೆ.
ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 10 ವಿಕೆಟ್ಗಳಿಂದ ಮಣಿಸಿದ ಭಾರತ, 7ನೇ ಬಾರಿಗೆ ಫೈನಲ್ ಸಾಧನೆ ಮಾಡಿತ್ತು. 2000ದಲ್ಲಿ ಭಾರತ ತಂಡ ಮೊದಲ ಬಾರಿಗೆ 19 ವಯೋಮಿತಿ ವಿಶ್ವಕಪ್ ಜಯಿಸಿತ್ತು.
ಭಾರತ ಬಲಿಷ್ಠ ನಿರ್ವಹಣೆ: ಸೆಮಿಫೈನಲ್ನ ಶತಕ ಸಾಧಕ ಯಶಸ್ವಿ ಜೈಸ್ವಾಲ್, ದಿವ್ಯಾಂಶ್ ಸಕ್ಸೆನಾ, ಪ್ರಿಯಂ ಗಾರ್ಗ್, ಸ್ಪಿನ್ನರ್ ರವಿ ಬಿಷ್ಣೋಯಿ, ವೇಗಿ ಕಾರ್ತಿಕ್ ತ್ಯಾಗಿ, ಧ್ರುವ್ ಜುರೆಲ್ರಂಥ ಪ್ರತಿಭಾನ್ವಿತರನ್ನು ಹೊಂದಿರುವ ಭಾರತ ತಂಡ ಬಾಂಗ್ಲಾ ಎದುರು ಪ್ರಭುತ್ವ ಸಾಧಿಸಲು ಸಜ್ಜಾಗಿದೆ. ವಿಶ್ವಕಪ್ ಆರಂಭಕ್ಕೂ ಒಂದು ತಿಂಗಳು ಮುನ್ನ ದಕ್ಷಿಣ ಆಫ್ರಿಕಾಗೆ ತೆರಳಿದ ಭಾರತ ತಂಡ, ಆತಿಥೇಯ ದಕ್ಷಿಣ ಆಫ್ರಿಕಾ ಎದುರು ದ್ವಿಪಕ್ಷೀಯ ಸರಣಿ ಹಾಗೂ ಚತುಷ್ಕೋನ ಸರಣಿಗಳಲ್ಲಿ ಅಜೇಯ ಸಾಧನೆ ಮಾಡಿತ್ತು.
ಚೊಚ್ಚಲ ಪ್ರಶಸ್ತಿ ಕನಸಿನಲ್ಲಿ ಬಾಂಗ್ಲಾ: ಮೊದಲ ಬಾರಿಗೆ ಫೈನಲ್ಗೇರಿರುವ ಬಾಂಗ್ಲಾದೇಶ ತಂಡ ಸೇಡಿನ ಹಂಬಲದೊಂದಿಗೆ ಕಣಕ್ಕಿಳಿಯಲಿದೆ. 2018ರ ಟೂರ್ನಿಯಲ್ಲಿ ಭಾರತದ ಎದುರು ಕ್ವಾರ್ಟರ್ಫೈನಲ್ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡು ಚೊಚ್ಚಲ ಪ್ರಶಸ್ತಿ ಗೆಲುವಿನ ಕನಸಿನಲ್ಲಿದೆ. ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ಎದುರು ತೋರಿದ ನಿರ್ವಹಣೆಯೇ ಸಾಕ್ಷಿ.
ಮಳೆ ಅಡ್ಡಿ ಸಾಧ್ಯತೆ
ಈ ಪಿಚ್ ವೇಗಿಗಳಿಗೆ ಸಹಕಾರಿಯಾಗಲಿದೆ. ಆದರೆ, ಭಾನುವಾರ ಬೆಳಗ್ಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಭಾರತ ತಂಡ ಇದೇ ಪಿಚ್ನಲ್ಲಿ ಕಳೆದ ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿತ್ತು. ಪಾಕಿಸ್ತಾನ ತಂಡವನ್ನು ಭಾರತ 172 ರನ್ಗೆ ಕಟ್ಟಿಹಾಕಿತ್ತು. ಜತೆಗೆ ವಿಕೆಟ್ ನಷ್ಟವಿಲ್ಲದೆ ಈ ಮೊತ್ತ ಬೆನ್ನಟ್ಟಿತು.