ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇಂದು ಶೂಟಿಂಗ್ ಸ್ಪರ್ಧೆಯ ಕೊನೇ ದಿನ; ಭಾರತಕ್ಕೆ ಒಲಿಯುವುದೇ ಇನ್ನೊಂದು ಪದಕ?

web shoot
Published on

ಪ್ಯಾರಿಸ್: ಭಾರತಕ್ಕೆ ಪ್ಯಾರಿಸ್​ನಲ್ಲಿ ಯಶಸ್ವಿ ಕ್ರೀಡೆ ಎನಿಸಿದ ಶೂಟಿಂಗ್​ ಸ್ಪರ್ಧೆ ಸೋಮವಾರ ಮುಕ್ತಾಯಗೊಳ್ಳಲಿದೆ. 12 ವರ್ಷಗಳ ಒಲಿಂಪಿಕ್ಸ್​ ಶೂಟಿಂಗ್​ನಲ್ಲಿ ಪದಕ ಬೇಟೆಯಾಡಿದ ಭಾರತ ಇದುವರೆಗೆ ಒಟ್ಟು 3 ಕಂಚಿನ ಪದಕ ಒಲಿಸಿಕೊಂಡಿದೆ. ಕೊನೇ ದಿನ ಪುರುಷರ 25 ಮೀ. ರ್ಯಾಪಿಡ್​ ಫೈರ್​ ಪಿಸ್ತೂಲ್​ ಮತ್ತು ಮಿಶ್ರ ಸ್ಕೀಟ್​ ಶೂಟಿಂಗ್​ ವಿಭಾಗದ ಪದಕಗಳಿಗೆ ಹೋರಾಟ ನಡೆಯಲಿವೆ. ಭಾರತ ಮತ್ತೊಂದು ಪದಕ ಗೆಲುವಿನೊಂದಿಗೆ ಯಶಸ್ವಿ ಮುಕ್ತಾಯ ಕಾಣುವ ಹಂಬಲದಲ್ಲಿದೆ.

ವಿಜಯ್​ವೀರ್​ ಫೈನಲ್​ಗೇರಲು ವಿಫಲ

ಪ್ಯಾರಿಸ್​: ಭಾರತದ ಶೂಟರ್​ಗಳಾದ ವಿಜಯವೀರ್​ ಸಿಧು ಮತ್ತು ಅನೀಶ್​ ಬಾನ್​ವಾಲಾ ಪ್ಯಾರಿಸ್​ ಒಲಿಂಪಿಕ್ಸ್​ನ ಪುರುಷರ 25 ಮೀ. ರ್ಯಾಪಿಡ್​ ಫೈರ್​ ಪಿಸ್ತೂಲ್​ ಸ್ಪರ್ಧೆಯಲ್ಲಿ ಫೈನಲ್​ಗೇರಲು ವಿಫಲರಾಗಿದ್ದಾರೆ. 2 ಸುತ್ತಿನ ಅರ್ಹತಾ ಸ್ಪರ್ಧೆಯ ಬಳಿಕ ವಿಜಯವೀರ್​ 9 ಮತ್ತು ಅನೀಶ್​ 13ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಗ್ರ 6 ಶೂಟರ್​ಗಳಷ್ಟೇ ಫೈನಲ್​ಗೇರಿದರು.

ಮೊದಲ ಸುತ್ತಿನ ಸ್ಪರ್ಧೆಯ ಬಳಿಕ 5ನೇ ಸ್ಥಾನದಲ್ಲಿದ್ದ ವಿಜಯವೀರ್ ಫೈನಲ್​ಗೇರುವ ನಿರೀಕ್ಷೆ ಮೂಡಿಸಿದ್ದರು. ಆದರೆ ಅಂತಿಮವಾಗಿ 583 ಅಂಕದೊಂದಿಗೆ 9ನೇ ಸ್ಥಾನಕ್ಕೆ ಕುಸಿದರು. ಮೊದಲ ಸುತ್ತಿನ ಬಳಿಕ 9ನೇ ಸ್ಥಾನದಲ್ಲಿದ್ದ ಅನೀಶ್​ ಬಳಿಕ 582 ಅಂಕದೊಂದಿಗೆ 13ನೇ ಸ್ಥಾನಕ್ಕೆ ಕುಸಿದರು.

ಮಹೇಶ್ವರಿ 14, ರೈಜಾ 23ನೇ ಸ್ಥಾನಕ್ಕೆ ತೃಪ್ತಿ: ಭಾರತದ ಶೂಟರ್​ಗಳಾದ ಮಹೇಶ್ವರಿ ಚೌಹಾಣ್​ ಮತ್ತು ರೈಜಾ ದಿಲ್ಲೋನ್​ ಮಹಿಳೆಯರ ಸ್ಕೀಟ್​ ಶೂಟಿಂಗ್​ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 14 ಮತ್ತು 23ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಅಗ್ರ 6 ಶೂಟರ್​ಗಳ ಫೈನಲ್​ಗೇರಲು ಅವರಿಬ್ಬರು ವಿಫಲರಾದರು. ಮಹೇಶ್ವರಿ ಒಟ್ಟು 5 ಸುತ್ತಿನ ಅರ್ಹತಾ ಸ್ಪರ್ಧೆಯಲ್ಲಿ 118 ಅಂಕ (23, 24, 24, 25, 22) ಗಳಿಸಿದರೆ, ರೈಜಾ 113 ಅಂಕ (21, 22, 23, 23, 24) ಕಲೆಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net