ಇಂದು ಭಾರತ-ಇಂಗ್ಲೆಂಡ್​ 2ನೇ ಟಿ20; ಮುನ್ನಡೆ ವಿಸ್ತರಿಸುವ ಹಂಬಲದಲ್ಲಿ ಸೂರ್ಯಕುಮಾರ್​ ಪಡೆ

web ind vs eng 2 t20
Published on

ಚೆನ್ನೈ: ಮೊದಲ ಪಂದ್ಯದಲ್ಲಿ ಸರ್ವಾಂಗೀಣ ನಿರ್ವಹಣೆ ತೋರಿ ಸುಲಭ ಗೆಲುವು ದಾಖಲಿಸಿರುವ ಟಿ20 ವಿಶ್ವ ಚಾಂಪಿಯನ್​ ಭಾರತ ತಂಡ ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಚುಟುಕು ಕ್ರಿಕೆಟ್​ ಸರಣಿಯ 2ನೇ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ಚೆಪಾಕ್​ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಮತ್ತೆ ಆಂಗ್ಲರ ಮೇಲೆ ಸ್ಪಿನ್​ ಅಸ್ತ್ರ ಪ್ರಯೋಗಿಸಿ ಮುನ್ನಡೆ ವಿಸ್ತರಿಸಿಕೊಳ್ಳುವುದು ಸೂರ್ಯಕುಮಾರ್​ ಬಳಗದ ಗುರಿಯಾಗಿದೆ.

ಗೌತಮ್​ ಗಂಭೀರ್​ ಕೋಚ್​ ಆದ ಬಳಿಕ ಭಾರತ ಟೆಸ್ಟ್​, ಏಕದಿನದಲ್ಲಿ ತೃಪ್ತಿದಾಯಕ ನಿರ್ವಹಣೆ ತೋರಿಲ್ಲ. ಆದರೆ ಟಿ20 ಕ್ರಿಕೆಟ್​ನಲ್ಲಿ ಅವರು ಅಜೇಯ ದಾಖಲೆ ಹೊಂದಿದ್ದಾರೆ. ಸೂರ್ಯಕುಮಾರ್​-ಗಂಭೀರ್​ ಅವರ ಕ್ಯಾಪ್ಟನ್​-ಕೋಚ್​ ಕಾಂಬಿನೇಷನ್​ನಲ್ಲಿ ಇದುವರೆಗೆ ಆಡಿರುವ 7 ಟಿ20 ಪಂದ್ಯಗಳಲ್ಲೂ ಭಾರತ ಗೆಲುವು ಸಾಧಿಸಿದೆ ಎಂಬುದು ಗಮನಾರ್ಹ. ಕಳೆದ ವರ್ಷದ ಟಿ20 ವಿಶ್ವಕಪ್​ ಗೆಲುವಿನ ಬಳಿಕ ಭಾರತದ ಚುಟುಕು ಕ್ರಿಕೆಟ್​ ತಂಡ ಯುವ ಆಟಗಾರರಿಂದ ತುಂಬಿರುವ ನಡುವೆಯೂ ಭರ್ಜರಿ ಯಶಸ್ಸು ಮುಂದುವರಿಸಿದೆ.

ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್​ಗೆ ಟಿ20 ಸರಣಿಯಿಂದ ವಿಶ್ರಾಂತಿ ನೀಡಿದ ಕಾರಣ ಕೊನೇಕ್ಷಣದಲ್ಲಿ ಭಾರತ ತಂಡದಲ್ಲಿ ಸ್ಥಾನ ಸಂಪಾದಿಸಿದ್ದ ಅಭಿಷೇಕ್​ ಶರ್ಮ ಮೊದಲ ಪಂದ್ಯದಲ್ಲಿ ಸ್ಫೋಟಕ ಆಟವಾಡಿ ತನ್ನ ಆಯ್ಕೆಗೆ ಸಮರ್ಥನೆ ಒದಗಿಸಿದರು. ಸಾಧಾರಣ ಸವಾಲನ್ನು ಭಾರತ ಸರಾಗವಾಗಿ ಬೆನ್ನಟ್ಟಿದ್ದರಿಂದ, ಆಲ್ರೌಂಡರ್​ಗಳಿಂದ ತುಂಬಿರುವ ಭಾರತದ ಮಧ್ಯಮ ಕ್ರಮಾಂಕಕ್ಕೆ ಸರಣಿಯಲ್ಲಿ ನಿಜವಾದ ಸತ್ವಪರೀಕ್ಷೆ ಇನ್ನಷ್ಟೇ ಎದುರಾಗಬೇಕಿದೆ. ಮುಂದಿನ ವರ್ಷ ತವರಿನಲ್ಲೇ ನಡೆಯಲಿರುವ ಟಿ20 ವಿಶ್ವಕಪ್​ಗೆ ಮೊದಲ ಆಯ್ಕೆಯ ವಿಕೆಟ್​ ಕೀಪರ್​ ಮತ್ತು ಆರಂಭಿಕನಾಗಿ ತನ್ನ ಸ್ಥಾನ ಭದ್ರಪಡಿಸುವ ನಿಟ್ಟಿನಲ್ಲಿ ಸಂಜು ಸ್ಯಾಮ್ಸನ್​ಗೆ ಈ ಸರಣಿ ಉತ್ತಮ ವೇದಿಕೆ ಎನಿಸಿದೆ.

ಆಂಗ್ಲರಿಗೆ ಮತ್ತೆ ಸ್ಪಿನ್​ ಭೀತಿ

ಮೊದಲ ಪಂದ್ಯದಲ್ಲಿ ಭಾರತದ ತ್ರಿವಳಿ ಸ್ಪಿನ್ನರ್​ಗಳ ಎದುರು ಇಂಗ್ಲೆಂಡ್​ ಬ್ಯಾಟರ್​ಗಳು ಪರದಾಡಿದ್ದರು. ಭಾರತದ ಗುಣಮಟ್ಟದ ಸ್ಪಿನ್ನರ್​ಗಳ ಎದುರು ತಂಡದ ಹೆಚ್ಚಿನ ಬ್ಯಾಟರ್​ಗಳು ಇದೇ ಮೊದಲ ಬಾರಿಗೆ ಆಡಿದ್ದರಿಂದ ಹೀಗಾಯಿತು ಎಂದು ನಾಯಕ ಜೋಸ್​ ಬಟ್ಲರ್​ ಪಂದ್ಯದ ಬಳಿಕ ತಿಳಿಸಿದ್ದರು. ಹೀಗಾಗಿ ಚೆಪಾಕ್​ ಪಿಚ್​ನಲ್ಲಿ ಇಂಗ್ಲೆಂಡ್​ ಬ್ಯಾಟರ್​ಗಳಿಗೆ ಇನ್ನಷ್ಟು ಹೆಚ್ಚಿನ ಸವಾಲು ಎದುರಾಗಲಿದೆ. ಗಂಭೀರ್​ ಮಾರ್ಗದರ್ಶನದ ಭಾರತ ಟಿ20 ತಂಡದಲ್ಲಿ ಮಿಸ್ಟರಿ ಸ್ಪಿನ್ನರ್​ ವರುಣ್​ ಚಕ್ರವರ್ತಿ ಪ್ರಮುಖ ಸ್ಪಿನ್​ ಅಸ್ತ್ರವೆನಿಸಿದ್ದಾರೆ. ಉಪನಾಯಕ ಅಕ್ಷರ್​ ಪಟೇಲ್​ ಮತ್ತು ರವಿ ಬಿಷ್ಣೋಯಿ ಮೊದಲ ಪಂದ್ಯದಲ್ಲಿ ಉತ್ತಮ ಸಾಥ್​ ಕೂಡ ನೀಡಿದ್ದರು. ಅತ್ತ ಇಂಗ್ಲೆಂಡ್​ ತಂಡ ತನ್ನ ಸ್ಪಿನ್ನರ್​ಗಳಾದ ಆದಿಲ್​ ರಶೀದ್​ ಮತ್ತು ಲಿವಿಂಗ್​ಸ್ಟೋನ್​ ಅವರಿಂದ ಸುಧಾರಿತ ನಿರ್ವಹಣೆ ಬಯಸಿದೆ.

*ಆರಂಭ: ರಾತ್ರಿ 7.00

*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಡಿಸ್ನಿ+ಹಾಟ್​ಸ್ಟಾರ್​

*2: ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ತಂಡ ಇದುವರೆಗೆ 2 ಟಿ20 ಪಂದ್ಯಗಳನ್ನು ಆಡಿದೆ. ಈ ಪೈಕಿ 2012ರಲ್ಲಿ ನ್ಯೂಜಿಲೆಂಡ್​ ಎದುರು ಗೆದ್ದು, 2018ರಲ್ಲಿ ವೆಸ್ಟ್​ ಇಂಡೀಸ್​ ಎದುರು ಸೋತಿದೆ.

*3: ಅರ್ಷದೀಪ್​ ಸಿಂಗ್​ (97) ಇನ್ನು 3 ವಿಕೆಟ್​ ಕಬಳಿಸಿದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ವಿಕೆಟ್​ ಕಬಳಿಸಿದ ಮೊದಲ ಭಾರತೀಯ ಎನಿಸಲಿದ್ದಾರೆ.

ಟೀಮ್​ ನ್ಯೂಸ್​:

ಭಾರತ: ಚೆಪಾಕ್​ ಪಿಚ್​ ಈಡನ್​ಗಿಂತಲೂ ಹೆಚ್ಚಾಗಿ ಸ್ಪಿನ್​ಗೆ ನೆರವು ನೀಡುವ ನಿರೀಕ್ಷೆ ಇರುವುದರಿಂದ ಭಾರತ ಮೂವರು ಸ್ಪಿನ್ನರ್​ಗಳ ಕಾರ್ಯತಂತ್ರವನ್ನೇ ಮುಂದುವರಿಸುವ ನಿರೀಕ್ಷೆ ಇದೆ. ಹೀಗಾಗಿ ವೇಗಿ ಮೊಹಮದ್​ ಶಮಿ ಗುರುವಾರ ನೆಟ್ಸ್​ನಲ್ಲಿ ಬೌಲಿಂಗ್​ ಅಭ್ಯಾಸ ನಡೆಸಿದ್ದರೂ, 2ನೇ ಪಂದ್ಯದಲ್ಲೂ ಕಣಕ್ಕಿಳಿಯುವ ಬಗ್ಗೆ ಅನುಮಾನವಿದೆ. ಈ ಬಾರಿ ನಿತೀಶ್​ ಕುಮಾರ್​ ರೆಡ್ಡಿ ಅಥವಾ ರವಿ ಬಿಷ್ಣೋಯಿ ಬದಲಿಗೆ ಶಮಿ ಕಣಕ್ಕಿಳಿದರೂ ಅಚ್ಚರಿ ಇಲ್ಲ. ಅಭ್ಯಾಸದ ವೇಳೆ ಕಾಲು ಟ್ವಿಸ್ಟ್​ ಆಗಿರುವುದರಿಂದ ಆರಂಭಿಕ ಅಭಿಷೇಕ್​ ಶರ್ಮ ಪಂದ್ಯಕ್ಕೆ ಫಿಟ್​ ಆಗುವುದು ಅನುಮಾನವೆನಿಸಿದೆ.

ಇಂಗ್ಲೆಂಡ್​: ಮೊದಲ ಪಂದ್ಯದ ಸೋಲಿನ ಬಳಿಕ ಇಂಗ್ಲೆಂಡ್​ ಆಡುವ 11ರ ಬಳಗದಲ್ಲಿ ಬದಲಾವಣೆ ಖಚಿತವೆನಿಸಿದೆ. ಪಂದ್ಯಕ್ಕೆ ಮುನ್ನಾದಿನವೇ 12ರ ಬಳಗವನ್ನು ಪ್ರಕಟಿಸಿರುವ ಇಂಗ್ಲೆಂಡ್​, ವೇಗಿ ಗಸ್​ ಅಟ್ಕಿನ್​ಸನ್​ ಬದಲಿಗೆ ಬೆಡನ್​ ಕರ್ಸ್​ರನ್ನು ಸೇರಿಸಿಕೊಂಡಿದೆ. ಯುವ ಬ್ಯಾಟರ್​ ಜೇಮಿ ಸ್ಮಿತ್​ 12ರ ಬಳಗಕ್ಕೆ ಮತ್ತೋರ್ವ ಹೊಸ ಸೇರ್ಪಡೆಯಾಗಿದ್ದಾರೆ. ಜೇಕಬ್​ ಬೆಥೆಲ್​ ಅನಾರೋಗ್ಯದಿಂದ ಬಳಲುತ್ತಿದ್ದು, ಅವರು ಫಿಟ್​ ಆಗದಿದ್ದರೆ ಸ್ಮಿತ್​ ಕಣಕ್ಕಿಳಿಯಬಹುದು. ಚೆಪಾಕ್​ ಪಿಚ್​ ಗಮನಿಸಿದಾಗ ಇಂಗ್ಲೆಂಡ್​ ಹೆಚ್ಚುವರಿ ಸ್ಪಿನ್ನರ್​ ಆಗಿ ರೆಹನ್​ ಅಹ್ಮದ್​ ಸೇರ್ಪಡೆಗೆ ಒಲವು ತೋರಿದರೂ ಅಚ್ಚರಿ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net