ಸರಣಿ ಗೆದ್ದಾಯ್ತು, ಇನ್ನು ಪ್ರಯೋಗದ ಸಮಯ; ಇಂದು ವೆಲ್ಲಿಂಗ್ಟನ್​ನಲ್ಲಿ ಭಾರತ-ಕಿವೀಸ್ 4ನೇ ಟಿ20 ಕದನ

KOHLI
Published on
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನೆಲದಲ್ಲಿ ಚುಟುಕು ಕ್ರಿಕೆಟ್ ಸಮರ ಜಯಿಸಿದ ಐತಿಹಾಸಿಕ ಸಾಧನೆ ಮೆರೆದಿರುವ ಭಾರತ ತಂಡ ಇದೀಗ 4ನೇ ಪಂದ್ಯಕ್ಕೆ ಸಜ್ಜಾಗಿದೆ.

5 ಪಂದ್ಯಗಳ ಸರಣಿಯನ್ನು 3-0ಯಿಂದ ವಶಪಡಿಸಿಕೊಂಡಿರುವ ಭಾರತ ತಂಡದ ಪಾಲಿಗೆ ಸರಣಿಯ ಉಳಿದ ಪಂದ್ಯಗಳು ಔಪಚಾರಿಕವಾಗಿದ್ದರೂ, ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ತಂಡದ ಸಂಯೋಜನೆ ದೃಷ್ಟಿಯಿಂದ ಪ್ರಯೋಗಗಳಿಗೆ ಉತ್ತಮ ವೇದಿಕೆ ದಕ್ಕಿದೆ. ಬ್ಯಾಟಿಂಗ್ ಸ್ನೇಹಿಯಾಗಿರುವ ವೆಸ್ಟ್​ಪ್ಯಾಕ್ ಸ್ಟೇಡಿಯಂನಲ್ಲಿ ಶುಕ್ರವಾರ ಪಂದ್ಯ ನಡೆಯಲಿದ್ದು, ಸರಣಿಯಲ್ಲಿ ಮುನ್ನಡೆ ಹಿಗ್ಗಿಸಿಕೊಳ್ಳುವ ಅವಕಾಶ ಹೊಂದಿರುವ ಭಾರತ ಕ್ಲೀನ್​ಸ್ವೀಪ್ ಸಾಧಿಸುವ ಆಸೆಯನ್ನೂ ಹೊಂದಿದೆ.

ಬೆಂಚ್ ಸ್ಟ್ರೆಂತ್​ಗೆ ಒತ್ತು: ಟಿ20 ವಿಶ್ವಕಪ್​ಗಾಗಿ ಬೆಂಚ್ ಸ್ಟ್ರೆಂತ್ ಬಲಪಡಿಸುವ ಹಂಬಲದಲ್ಲಿರುವ ಭಾರತ ತಂಡ, ವೆಲ್ಲಿಂಗ್ಟನ್ ಹಾಗೂ ಮೌಂಟ್ ಮೌಂಗಾನಿಯಲ್ಲಿ ನಡೆಯಲಿರುವ ಮುಂದಿನ ಎರಡೂ ಪಂದ್ಯಗಳಿಗೆ ಕೆಲ ಬದಲಾವಣೆ ಮಾಡಿಕೊಳ್ಳುವುದು ಖಚಿತ. ತಂಡದ ಅಗ್ರ ನಾಲ್ವರು ಆಟಗಾರರು ಮುಂದಿನ ಎರಡು ಪಂದ್ಯಗಳಲ್ಲಿ ಆವರ್ತನ ಪದ್ಧತಿಯಂತೆ ಕಣಕ್ಕಿಳಿಯಲಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮ ಇಬ್ಬರೂ ತಲಾ ಒಂದು ಪಂದ್ಯದಿಂದ ವಿಶ್ರಾಂತಿ ಪಡೆಯುವ ಸಾಧ್ಯತೆಗಳಿವೆ. ಅವಕಾಶಕ್ಕಾಗಿ ಕಾದು ಕುಳಿತಿರುವ ಸಂಜು ಸ್ಯಾಮ್ಸನ್ ಹಾಗೂ ರಿಷಭ್ ಪಂತ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಗಳಿವೆ. ಒಂದು ವೇಳೆ ಬ್ಯಾಟ್ಸ್ ಮನ್ ಒಬ್ಬ ಹೊರಗುಳಿದು ರಿಷಭ್ ಪಂತ್​ಗೆ

ಅವಕಾಶ ನೀಡಿದರೂ, ರಾಹುಲ್ ಅವರೇ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ ಎನ್ನಲಾಗಿದೆ. ಶ್ರೇಯಸ್ ಅಯ್ಯರ್ ಉತ್ತಮ ನಿರ್ವಹಣೆ ನೀಡುತ್ತಿದ್ದರೆ, ಮನೀಷ್ ಪಾಂಡೆ ಹಾಗೂ ಶಿವಂ ದುಬೆಗೆ ಮತ್ತಷ್ಟು ಅವಕಾಶ ನೀಡಬೇಕಾಗಿದೆ. ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ, ತವರಿನಲ್ಲಿ ಸರಣಿ ಸೋಲಿನ ಮುಖಭಂಗ ಎದುರಿಸಿರುವ ಕಿವೀಸ್ ಪಡೆ ಅಂತಿಮ ಎರಡು ಪಂದ್ಯಗಳಲ್ಲಾದರೂ ಜಯ ದಾಖಲಿಸಿ ಸರಣಿ ಸೋಲಿನ ಅಂತರ ತಗ್ಗಿಸಿಕೊಳ್ಳುವ ಒತ್ತಡದಲ್ಲಿದೆ. -ಪಿಟಿಐ/ಏಜೆನ್ಸೀಸ್

ಪಿಚ್ ರಿಪೋರ್ಟ್

ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, ಇಲ್ಲಿ ನಡೆದಿರುವ ಕಡೇ 5 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡದ ಸರಾಸರಿ ಮೊತ್ತ 178 ರನ್ ಆಗಿದ್ದು, ಸ್ಪಿನ್ನರ್​ಗಳು ಮಿತವ್ಯಯಿಗಳಾಗಿದ್ದರೂ, ಈ ಪಿಚ್​ನಲ್ಲಿ ವೇಗಿಗಳಿಗೆ ಹೆಚ್ಚು ವಿಕೆಟ್​ಗಳು ಬಿದ್ದಿವೆ.

ಟೀಮ್ ನ್ಯೂಸ್

ಭಾರತ: ಸರಣಿ ಗೆಲುವಿನೊಂದಿಗೆ ಸಂಪೂರ್ಣ ರಿಲ್ಯಾಕ್ಸ್ ಮೂಡ್​ನಲ್ಲಿರುವ ಕೊಹ್ಲಿ, ತಂಡದಲ್ಲಿ ಕೆಲ ಬದಲಾವಣೆ ತರಲಿದ್ದಾರೆ. ಕಳೆದ ಪಂದ್ಯದ ಕಡೇ ಓವರ್ ಹೀರೋ ಮೊಹಮದ್ ಶಮಿ ಬದಲಿಗೆ ನವದೀಪ್ ಶೈನಿ ಅವಕಾಶ ಗಿಟ್ಟಿಸಿಕೊಳ್ಳಬಹುದು. ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್ ಜೋಡಿಗೆ ಸ್ಥಾನ ನೀಡಿದರೆ, ಯಜುವೇಂದ್ರ ಚಾಹಲ್, ರವೀಂದ್ರ ಜಡೇಜಾ ಹೊರಗುಳಿಯಬಹುದು. ಸಂಜು ಸ್ಯಾಮ್ಸನ್, ರಿಷಭ್ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ನ್ಯೂಜಿಲೆಂಡ್: ಮೂರು ಪಂದ್ಯಗಳಲ್ಲೂ ವೈಫಲ್ಯ ಅನುಭವಿಸಿರುವ ಕಾಲಿನ್ ಡಿ ಗ್ರಾಂಡ್​ಹೋಮ್ ಬದಲಿಗೆ ಡೆರಿಲ್ ಮಿಚೆಲ್ ಹನ್ನೊಂದರ ಬಳಗಕ್ಕೆ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ.

99 ರೋಹಿತ್ ಶರ್ಮ 107 ಪಂದ್ಯಗಳಿಂದ 99 ಇನಿಂಗ್ಸ್ ಆಡಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಶೋಯಿಬ್ ಮಲಿಕ್ (105 ಇನಿಂಗ್ಸ್) ಬಳಿಕ 100 ಇನಿಂಗ್ಸ್ ಆಡಿದ 2ನೇ ಬ್ಯಾಟ್ಸ್ ಮನ್ ಎನಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net