

ನವದೆಹಲಿ: ವಿರಾಟ್ ಕೊಹ್ಲಿ ಅವರನ್ನು ಆರ್‌ಸಿಬಿ ತಂಡದ ನಾಯಕತ್ವದಿಂದ ತೆಗೆದುಹಾಕಲು ಇದು ಸಕಾಲ ಎಂದು ಮಾಜಿ ಆರಂಭಿಕ ಗೌತಮ್ ಗಂಭೀರ್ ಹೇಳಿದ್ದಾರೆ. ಕೊಹ್ಲಿ ಅವರ ಐಪಿಎಲ್ ನಾಯಕತ್ವದ ಟೀಕಾಕಾರರಲ್ಲಿ ಪ್ರಮುಖರಾಗಿರುವ ದೆಹಲಿಯ ಮಾಜಿ ಸಹ-ಆಟಗಾರ ಗಂಭೀರ್, ಐಪಿಎಲ್ ತಂಡಗಳ ಯಶಸ್ವಿ ನಾಯಕರಾದ ಎಂಎಸ್ ಧೋನಿ ಮತ್ತು ರೋಹಿತ್ ಶರ್ಮ ಅವರ ಸಾಲಿನಲ್ಲಿ ವಿರಾಟ್ ಕೊಹ್ಲಿ ಬರುವವರಲ್ಲ ಎಂದೂ ಹೇಳಿದ್ದಾರೆ.
‘ಐಪಿಎಲ್‌ನಲ್ಲಿ 8 ವರ್ಷಗಳ ಕಾಲ ಆರ್‌ಸಿಬಿ ತಂಡವನ್ನು ಮುನ್ನಡೆಸಿದರೂ ಕೊಹ್ಲಿ ಒಂದೂ ಪ್ರಶಸ್ತಿ ಗೆದ್ದುಕೊಟ್ಟಿಲ್ಲ. ಇದು ಉತ್ತರವಾದಿತ್ವದ ಪ್ರಶ್ನೆ. ಐಪಿಎಲ್‌ನಲ್ಲಿ ಇತರ ಯಾವ ನಾಯಕ ಅಥವಾ ಆಟಗಾರರೂ ಇಷ್ಟೊಂದು ವೈಫಲ್ಯದ ಬಳಿಕ ತಂಡದಲ್ಲಿ ಮುಂದುವರಿದಿಲ್ಲ. ಅವರು ಕೂಡ ಸೋಲಿನ ಹೊಣೆ ಹೊತ್ತು ನಾಯಕತ್ವ ತ್ಯಜಿಸಬೇಕಾದ ಅಗತ್ಯವಿದೆ’ ಎಂದು ಕೆಕೆಆರ್ ನಾಯಕರಾಗಿ 2 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಗಂಭೀರ್ ಹೇಳಿದ್ದಾರೆ.
ಆರ್. ಅಶ್ವಿನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿ 2 ವರ್ಷ ವಿಫಲರಾಗಿದ್ದಕ್ಕೆ ಅವರನ್ನು ತಂಡದಿಂದ ಕೈಬಿಡಲಾಯಿತು. ಹೀಗಾಗಿ 8 ವರ್ಷ ಅತ್ಯಂತ ಸುದೀರ್ಘವಾಗಿದೆ. ಅಷ್ಟು ಸಮಯ ನಿರ್ವಹಣೆ ತೋರದಿದ್ದರೆ ಸಹಜವಾಗಿಯೇ ಕೈಬಿಡಲಾಗುತ್ತದೆ ಎಂದು ಗಂಭೀರ್ ಹೇಳಿದ್ದಾರೆ.
ರೋಹಿತ್ ಶರ್ಮ ಮುಂಬೈ ಇಂಡಿಯನ್ಸ್ ನಾಯಕರಾಗಿ 5ನೇ ಬಾರಿ ತಂಡವನ್ನು ಫೈನಲ್‌ಗೇರಿಸಿದ್ದಾರೆ. ಧೋನಿ 3 ಮತ್ತು ರೋಹಿತ್ 4 ಬಾರಿ ಪ್ರಶಸ್ತಿ ಜಯಿಸಿದ್ದಾರೆ. ಅದರಿಂದಾಗಿಯೇ ಅವರು ಸುದೀರ್ಘ ಕಾಲ ತಂಡದ ನಾಯಕರಾಗಿ ಮುಂದುವರಿದಿದ್ದಾರೆ. ಆದರೆ ವಿರಾಟ್ ಕೊಹ್ಲಿ ಅವರೇನು ಮಾಡಿದ್ದಾರೆ. ಬೇರೆ ಬೇರೆ ಆಟಗಾರರಿಗೆ ಬೇರೆ ಬೇರೆ ಮಾನದಂಡ ಅನುಸರಿಸಬಾರದು ಎಂದು ಗಂಭೀರ್ ವಿವರಿಸಿದ್ದಾರೆ.
ನಾಯಕತ್ವದ ವೈಫಲ್ಯವನ್ನು ಒಪ್ಪಿಕೊಳ್ಳಲು ಕೊಹ್ಲಿ ಹಿಂಜರಿಯುತ್ತಿರುವುದು ಕೂಡ ದೊಡ್ಡ ಸಮಸ್ಯೆಯಾಗಿದೆ ಎಂದಿರುವ ಗಂಭೀರ್, ತಂಡದ ಯಶಸ್ಸಿನ ವೇಳೆ ನಾಯಕ ಅದರ ಶ್ರೇಯವನ್ನು ಪಡೆದುಕೊಳ್ಳುವಂತೆಯೇ, ತಂಡ ವೈಫಲ್ಯ ಕಂಡಾಗ ಅದರ ಹೊಣೆಯೂ ನಾಯಕನದ್ದೇ ಆಗಿರುತ್ತದೆ ಎಂದಿದ್ದಾರೆ. ಜತೆಗೆ ಲೀಗ್ ಹಂತದ ಕೊನೆಯಲ್ಲಿ ಸತತ 4 ಸೋಲು ಕಂಡ ಆರ್‌ಸಿಬಿ ತಂಡ ಪ್ಲೇಆಫ್ ಹಂತಕ್ಕೇರಲು ಅರ್ಹ ತಂಡವೂ ಆಗಿರಲಿಲ್ಲ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಆರ್‌ಸಿಬಿ ತಂಡ ಕೇವಲ ಇಬ್ಬರು ಆಟಗಾರರ (ಕೊಹ್ಲಿ, ಎಬಿಡಿ) ತಂಡವಾಗಿದೆ. ಕೊಹ್ಲಿ ಆರಂಭಿಕರಾಗಿ ಆಡಲು ಬಯಸುವುದಾದರೆ ತಂಡದ ಮಧ್ಯಮ ಕ್ರಮಾಂಕಕ್ಕೆ ಉತ್ತಮ ಬ್ಯಾಟ್ಸ್‌ಮನ್‌ಗಳನ್ನು ಖರೀದಿಸಬೇಕಾಗಿತ್ತು. ಎಬಿ ಡಿವಿಲಿಯರ್ಸ್ ಕೆಲವೊಂದು ಮ್ಯಾಚ್ ವಿನ್ನಿಂಗ್ ನಿರ್ವಹಣೆ ತೋರದೆ ಇರುತ್ತಿದ್ದರೆ ಆರ್‌ಸಿಬಿ ತಂಡ ಈ ಬಾರಿಯೂ ಟೂರ್ನಿಯ ಕೊನೆಯ ಸ್ಥಾನ ಪಡೆಯಬೇಕಾಗುತ್ತಿತ್ತು. ಒಬ್ಬ ಆಟಗಾರನ ಬಲಿಷ್ಠ ನಿರ್ವಹಣೆಯಿಂದ ಪ್ಲೇಆಫ್ಗೆ ಏರಿದ ತಕ್ಷಣ ಆ ತಂಡ ಪ್ರಶಸ್ತಿ ಗೆಲುವಿನ ನೆಚ್ಚಿನ ತಂಡವಾಗುವುದಿಲ್ಲ ಎಂದು ಗಂಭೀರ್ ಹೇಳಿದ್ದಾರೆ.