ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸಿ ಆಸೀಸ್ ನಾಯಕತ್ವ ಕಳೆದುಕೊಂಡ ಟಿಮ್ ಪೇನ್

paine web
Published on

ಹೋಬರ್ಟ್: ನಾಲ್ಕು ವರ್ಷಗಳ ಹಿಂದೆ ಮಹಿಳೆಯೊಬ್ಬರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಪ್ರಕರಣ ಮತ್ತೆ ಭುಗಿಲೆದ್ದ ಕಾರಣ ಟಿಮ್ ಪೇನ್ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ. ಇದರಿಂದಾಗಿ ಪ್ರತಿಷ್ಠಿತ ಆಶಸ್ ಸರಣಿಗೆ ಕೇವಲ 3 ವಾರ ಬಾಕಿ ಇರುವಾಗ ಹೊಸ ನಾಯಕನನ್ನು ನೇಮಿಸಬೇಕಾದ ಸವಾಲು ಆಸೀಸ್‌ಗೆ ಎದುರಾಗಿದೆ. 36 ವರ್ಷದ ಪೇನ್ ವಿಕೆಟ್ ಕೀಪರ್-ಬ್ಯಾಟರ್ ಆಗಿ ಆಸೀಸ್ ತಂಡದ ಪರ ಆಡಲು ಈಗಲೂ ಲಭ್ಯರಿದ್ದಾರೆ. ವೇಗಿ ಪ್ಯಾಟ್ ಕಮ್ಮಿನ್ಸ್ ಹೊಸ ನಾಯಕರಾಗಿ ನೇಮಕಗೊಳ್ಳುವ ನಿರೀಕ್ಷೆ ಇದೆ.

ಪೇನ್ 2017ರಲ್ಲಿ ತವರಿನ ‘ಕ್ರಿಕೆಟ್ ಟಾಸ್ಮೇನಿಯಾ’ ಸಂಸ್ಥೆಯ ಮಹಿಳಾ ಉದ್ಯೋಗಿಯೊಬ್ಬರಿಗೆ ಅಶ್ಲೀಲ ಸಂದೇಶ ಮತ್ತು ಚಿತ್ರಗಳನ್ನು ಕಳುಹಿಸಿದ್ದರು. ಆಗಲೇ ಈ ಪ್ರಕರಣದ ತನಿಖೆ ನಡೆಸಿದ್ದ ಕ್ರಿಕೆಟ್ ಆಸ್ಟ್ರೇಲಿಯಾ, ಪೇನ್‌ಗೆ ಮರಳಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಅವಕಾಶವನ್ನೂ ಕಲ್ಪಿಸಿತ್ತು. 2018ರ ಚೆಂಡು ವಿರೂಪ ಪ್ರಕರಣದ ಬಳಿಕ ಅವರು ತಂಡದ ನಾಯಕರಾಗಿ ನೇಮಕಗೊಂಡಿದ್ದರು.

2017ರ ಪ್ರಕರಣದ ಬಗ್ಗೆ ಆಸೀಸ್ ಮಾಧ್ಯಮಗಳಲ್ಲಿ ಮತ್ತೊಮ್ಮೆ ಸುದ್ದಿಯಾದ ಬೆನ್ನಲ್ಲೇ ಪೇನ್ ತಪ್ಪೊಪ್ಪಿಕೊಂಡಿದ್ದು, ಆಸೀಸ್ ತಂಡದ ನಾಯಕನ ಗುಣಮಟ್ಟವನ್ನು ನಾನು ಹೊಂದಿಲ್ಲ ಎಂದಿದ್ದಾರೆ. ಜತೆಗೆ ತಮ್ಮ ಕುಟುಂಬದ ಕ್ಷಮೆಯನ್ನೂ ಯಾಚಿಸಿದ್ದಾರೆ. 2017ರ ವಿವಾದದ ಒಂದು ವರ್ಷ ಬಳಿಕ ಪೇನ್, ಗಾಯಕಿ ಬೋನ್ನಿ ಪೇನ್ ಅವರನ್ನು ವಿವಾಹವಾಗಿದ್ದರು.

ಆಶಸ್ ಸರಣಿ ಡಿ. 8ರಿಂದ ನಡೆಯಲಿದ್ದು, ಆಸೀಸ್ ತಂಡ ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿದೆ. ಸ್ಟೀವನ್ ಸ್ಮಿತ್ ಮತ್ತೆ ನಾಯಕರಾಗುವುದು ಅನುಮಾನವೆನಿಸಿದ್ದು, ಟೆಸ್ಟ್ ತಂಡದ ಹಾಲಿ ಉಪನಾಯಕ ಪ್ಯಾಟ್ ಕಮ್ಮಿನ್ಸ್‌ಗೆ ನಾಯಕತ್ವ ಒಲಿಯುವ ನಿರೀಕ್ಷೆ ಇದೆ. ಪೇನ್ ಆಸೀಸ್ ಪರ ಇದುವರೆಗೆ 35 ಟೆಸ್ಟ್ ಆಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net