

ಬಾಸ್ಸೆಟೆರ್ (ಸೇಂಟ್ ಕಿಟ್ಸ್): ಟಿಮ್ ಡೇವಿಡ್ (102*ರನ್, 37 ಎಸೆತ, 6 ಬೌಂಡರಿ, 11 ಸಿಕ್ಸರ್) ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಸ್ಟ್ರೆಲಿಯಾದ ಅತಿವೇಗದ ಶತಕ ಸಾಧಕರೆನಿಸಿದ್ದಾರೆ. ಈ ಮೂಲಕ ಮಿಚೆಲ್ ಮಾರ್ಷ್ ಬಳಗ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಕಾದಾಟದಲ್ಲಿ 6 ವಿಕೆಟ್ಗಳಿಂದ ಗೆದ್ದು ಬೀಗಿದ್ದು, ಇನ್ನೆರಡು ಪಂದ್ಯಗಳು ಬಾಕಿ ಇರುವಂತೆಯೇ 5 ಪಂದ್ಯಗಳ ಸರಣಿಯನ್ನು 3&0ಯಿಂದ ವಶಪಡಿಸಿಕೊಂಡಿದೆ.
ವಾರ್ನರ್ ಪಾರ್ಕ್ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ವಿಂಡೀಸ್, ಆರಂಭಿಕರಾದ ಶೈ ಹೋಪ್ (102) ಮತ್ತು ಬ್ರೆಂಡನ್ ಕಿಂಗ್ (62) ಮೊದಲ ವಿಕೆಟ್ಗೆ 125 ರನ್ ಸೇರಿಸಿ ಹಾಕಿಕೊಟ್ಟ ಭದ್ರ ಬುನಾದಿಯಿಂದ 4 ವಿಕೆಟ್ಗೆ 214 ರನ್ ಕಲೆಹಾಕಿತು. ಪ್ರತಿಯಾಗಿ ಆಸೀಸ್, ಆರಂಭಿಕ ಆಘಾತದ ನಡುವೆಯೂ ಟಿಮ್ ಡೇವಿಡ್ ಆರ್ಭಟದಿಂದ 16.1 ಓವರ್ಗಳಲ್ಲೇ 4 ವಿಕೆಟ್ಗೆ 215 ರನ್ ಗಳಿಸಿ ಜಯ ಸಾಧಿಸಿತು.
ವೆಸ್ಟ್ ಇಂಡೀಸ್: 4 ವಿಕೆಟ್ಗೆ 214 (ಬ್ರೆಂಡನ್ ಕಿಂಗ್ 62, ಶೈ ಹೋಪ್ 102, ಹೆಟ್ಮೆಯರ್ 9, ಎಲ್ಲಿಸ್ 37ಕ್ಕೆ 1), ಆಸ್ಟ್ರೆಲಿಯಾ: 16.1 ಓವರ್ಗಳಲ್ಲಿ 4 ವಿಕೆಟ್ಗೆ 215 (ಮಾರ್ಷ್ 22, ಮ್ಯಾಕ್ಸ್ವೆಲ್ 20, ಇಂಗ್ಲಿಸ್ 15, ಗ್ರೀನ್ 11, ಡೇವಿಡ್ 102*, ಓವನ್ 36*, ಶೆರ್ಡ್ 39ಕ್ಕೆ 2). ಪಂದ್ಯಶ್ರೇಷ್ಠ: ಟಿಮ್ ಡೇವಿಡ್.
37: ಟಿಮ್ ಡೇವಿಡ್ ಟಿ20ಯಲ್ಲಿ ಆಸೀಸ್ನ ಅತಿವೇಗದ ಶತಕ ಸಾಧಕ ಎನಿಸಿದರು. ಕಳೆದ ವರ್ಷ ಸ್ಕಾಟ್ಲೆಂಡ್ ಎದುರು ಜೋಶ್ ಇಂಗ್ಲಿಸ್ 43 ಎಸೆತಗಳಲ್ಲಿ ಶತಕ ಸಿಡಿಸಿದ್ದು ಹಿಂದಿನ ದಾಖಲೆ.
6: ಆಸೀಸ್ ಟಿ20ಯಲ್ಲಿ ಗರಿಷ್ಠ 6ನೇ ಬಾರಿ 200 ಪ್ಲಸ್ ಮೊತ್ತ ಚೇಸಿಂಗ್ ಮಾಡಿದ ಸಾಧನೆ ಮಾಡಿತು. ಭಾರತ, ದಣ ಆಫ್ರಿಕಾ ತಲಾ 5 ಬಾರಿ ಈ ಸಾಧನೆ ಮಾಡಿವೆ.
16: ಟಿಮ್ ಡೇವಿಡ್ 16 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ್ದು ಕೂಡ ಆಸೀಸ್ ಪರ ಅತಿವೇಗದ ಸಾಧನೆ. 2022ರಲ್ಲಿ ಮಾರ್ಕಸ್ ಸ್ಟೋಯಿನಿಸ್ ಮತ್ತು 2024ರಲ್ಲಿ ಟ್ರಾವಿಸ್ ಹೆಡ್ ತಲಾ 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು ಹಿಂದಿನ ದಾಖಲೆ.
2: ಶೈ ಹೋಪ್ ಎಲ್ಲ 3 ಮಾದರಿಯಲ್ಲಿ ಶತಕ ಸಿಡಿಸಿದ ವಿಂಡೀಸ್ನ 2ನೇ ಬ್ಯಾಟರ್ ಎನಿಸಿದರು. ಕ್ರಿಸ್ ಗೇಲ್ ಮೊದಲಿಗ.