

ಕೋಲ್ಕತ: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಜಾಗತಿಕ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿಯಿವೆ. ಟೀಮ್ ಇಂಡಿಯಾ ಐಸಿಸಿ ಟೂರ್ನಿ ಜಯಿಸುವಲ್ಲಿ ಸತತ ವಿಲವಾಗುತ್ತಿದ್ದು, ತವರಿನಲ್ಲಿ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿದೆ. ಆದರೆ ಮಧ್ಯಮ ಕ್ರಮಾಂಕದ ಗೊಂದಲ ಮುಂದುವರಿದಿದ್ದು ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೋಲಿ ತನ್ನ ಆಯ್ಕೆಯ ಆಟಗಾರನ ಹೆಸರನ್ನು ಸೂಚಿಸಿದ್ದಾರೆ.
ಶ್ರೇಯಸ್ ಅಯ್ಯರ್ ಅವರಂಥ ಮುಂಚೂಣಿ ಆಟಗಾರ 2023 ರ ಐಸಿಸಿ ವಿಶ್ವಕಪ್‌ಗೆ ಅಲಭ್ಯವಾದರೆ, ನಿರ್ಣಾಯಕ 4ನೇ ಸ್ಥಾನಕ್ಕಾಗಿ ಭಾರತಕ್ಕೆ ಹಲವಾರು ಆಯ್ಕೆಗಳಿವೆ. ಆದರೆ ಈ ಕ್ರಮಾಂಕಕ್ಕೆ ಭರವಸೆಯ ಎಡಗೈ ಬ್ಯಾಟರ್ ತಿಲಕ್ ವರ್ಮ ಸೂಕ್ತ ಆಯ್ಕೆ ಎಂದಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ತಿಲಕ್ ವರ್ಮ ಅವರನ್ನು ಆಯ್ಕೆಯಾಗಿ ನೋಡುತ್ತೇನೆ. ತಿಲಕ್ ಎಡಗೈ ಆಟಗಾರನಾಗಿದ್ದು, ಉತ್ತಮ ಹೊಂದಾಣಿಕೆ ಮತ್ತು ನಿರ್ಭೀತವಾಗಿ ಬ್ಯಾಟ್ ಬೀಸಲಿದ್ದಾರೆ. ಯಶಸ್ವಿ ಜೈಸ್ವಾಲ್ (ಮೀಸಲು ಆರಂಭಿಕ , ಇಶಾನ್ ಕಿಶನ್‌ಗೆ (ವಿಕೆಟ್ ಕೀಪರ್-ಬ್ಯಾಟರ್) ಭಾರತದ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಬೇಕು. ತಿಲಕ್ ತುಂಬಾ ಉತ್ತಮ ಆಟಗಾರ, ಹೆಚ್ಚು ಅನುಭವ ಹೊಂದಿಲ್ಲ, ಆದರೂ ಪರವಾಗಿಲ್ಲ. ತಂಡದ ಅಗ್ರ ಕ್ರಮಾಂಕದಲ್ಲಿ ಯುವ ಎಡಗೈ ಆಟಗಾರ ಜೈಸ್ವಾಲ್ನನ್ನು ನೋಡಲು ಬಯಸುತ್ತೇನೆ. ಆತ ಅಗಾಧ ಸಾಮರ್ಥ್ಯವನ್ನು ಹೊಂದಿದ್ದಾನೆ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಹೊಂದಿದ್ದಾನೆ. ಭಾರತ ತಂಡ ಅನುಭವಿ ಮತ್ತು ತಾಜಾ ಮುಖಗಳ ಮಿಶ್ರಣವಾಗಿರಬೇಕು ಎಂದು ಗಂಗೂಲಿ ಉಲ್ಲೇಖಿಸಿದ್ದಾರೆ.