ಚೊಚ್ಚಲ ಟಿ20 ಶತಕ ಸಿಡಿಸಿದ ತಿಲಕ್ ವರ್ಮ: ಹರಿಣಗಳ ಗೆಲುವಿಗೆ ಬೃಹತ್ ಗುರಿ

New Project (1)
Published on

ಸೆಂಚುರಿಯನ್: ಎಡಗೈ ಬ್ಯಾಟರ್ ತಿಲಕ್ ವರ್ಮ (107* ರನ್, 56 ಎಸೆತ, 8 ಬೌಂಡರಿ, 7 ಸಿಕ್ಸರ್) ಸಿಡಿಸಿದ ಚೊಚ್ಚಲ ಅಂತಾರಾಷ್ಟ್ರೀಯ ಶತಕ ನೆರವಿನಿಂದ ರನ್‌ಮಳೆ ಹರಿಸಿದ ಭಾರತ ತಂಡ ಮೂರನೇ ಟಿ20 ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಎದುರು ಬೃಹತ್ ಮೊತ್ತ ಕಲೆಹಾಕಿದೆ.

ಸೂಪರ್ ಸ್ಪೋಟ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಆರಂಭಿಕ ಸಂಜು ಸ್ಯಾಮ್ಸನ್ (0) ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಆಗ ಜತೆಯಾದ ಅಭಿಷೇಕ್ ಶರ್ಮ (50 ರನ್, 25 ಎಸೆತ, 3 ಬೌಂಡರಿ, 5 ಸಿಕ್ಸರ್) ಹಾಗೂ 22 ವರ್ಷದ ತಿಲಕ್ ವರ್ಮ ನಡೆಸಿದ ಭರ್ಜರಿ ಜತೆಯಾಟದ ಬಲದಿಂದ ಭಾರತ 6 ವಿಕೆಟ್‌ಗೆ 219 ರನ್‌ಗಳ ಕಠಿಣ ಮೊತ್ತ ಪೇರಿಸಿದೆ. ಗಾಯಾಳು ಆಲ್ರೌಂಡರ್ ಶಿವಂ ದುಬೆ ಬದಲಿಗೆ ತಿಲಕ್ ವರ್ಮ ಹರಿಣ ಪ್ರವಾಸಕ್ಕೆ ಆಯ್ಕೆಯಾಗಿದ್ದರು.

ರಮಣ್‌ದೀಪ್ ಪದಾರ್ಪಣೆ

ಸತತ ಮೂರನೇ ಬಾರಿಗೆ ಟಾಸ್ ಸೋತ ಭಾರತ ತಂಡ ಏಕೈಕ ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಐಪಿಎಲ್ ಹಾಗೂ ಎಮರ್ಜಿಂಗ್ ಏಷ್ಯಾಕಪ್‌ನಲ್ಲಿ ಭಾರತ ಎ ಪರ ಉತ್ತಮ ಪ್ರದರ್ಶನ ನೀಡಿದ್ದ ಪಂಜಾಬ್‌ನ ಆಲ್ರೌಂಡರ್ ರಮಣ್‌ದೀಪ್ ಸಿಂಗ್ ಟಿ20 ಪದಾರ್ಪಣೆ ಮಾಡಿದರು. ಭಾರತ ಪರ ಟಿ20 ಆಡಿದ 118ನೇ ಆಟಗಾರ ಎನಿಸಿದ ರಮಣ್‌ದೀಪ್‌ಗೆ ಹಾರ್ದಿಕ್ ಪಾಂಡ್ಯ ಕ್ಯಾಪ್ ವಿತರಿಸಿದರು. ಇವರಿಗೆ ಆವೇಶ್ ಖಾನ್ ಸ್ಥಾನ ಬಿಟ್ಟುಕೊಟ್ಟರು.

ಇನ್ನು ದಕ್ಷಿಣ ಆಫ್ರಿಕಾ ಸಹ ಸ್ಪಿನ್ನರ್ ಎನ್‌ಕಬಯೋಮ್ಜಿ ಬದಲಿಗೆ ವೇಗಿ ಲುಥಾವೊ ಸಿಪಮ್ಲಾಗೆ ಅವಕಾಶ ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net