

ಸೆಂಚುರಿಯನ್: ಇಲ್ಲಿನ ಸೂಪರ್ಸ್ಫೋರ್ಟ್ ಪಾರ್ಕ್ನಲ್ಲಿ ನಡೆದ ಭಾರತ (Team India) ಹಾಗೂ ದಕ್ಷಿಣ ಆಫ್ರಿಕಾ (South Africe) ನಡುವಿನ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಪ್ರವಾಸಿ ತಂಡವು 11 ರನ್ಗಳ ಜಯ ಸಾಧಿಸಿದ್ದು, ಈ ಮೂಲಕ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಸರಣಿಯ ಅಂತಿಮ ಪಂದ್ಯ ನವೆಂಬರ್ 15ರಂದು ಜೊಹಾನ್ಸ್ಬರ್ಗ್ನಲ್ಲಿ ನಡೆಯಲಿದ್ದು, ಉಭಯ ತಂಡಗಳು ಸಮಬಲ ಸಾಧಿಸುತ್ತವಾ ಅಥವಾ ಸೀರೀಸ್ ಯಾರ ಕೈವಶ ಆಗಲಿದೆ ಎಂದು ಕಾದು ನೋಡಬೇಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ತಂಡವು ತಿಲಕ್ ವರ್ಮಾ (Tilak Varma) (107 ರನ್, 56 ಎಸೆತ, 8 ಬೌಂಡರಿ, 7 ಸಿಕ್ಸರ್) ಶತಕದ ಫಲವಾಗಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು. ಬೃಹತ್ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡವನ್ನು 208 ರನ್ಗಳಿಗೆ ಕಟ್ಟಿ ಹಾಕಿದ ಭಾರತದ ಬೌಲರ್ಗಳು ತಂಡಕ್ಕೆ 11 ರನ್ ಗೆಲುವನ್ನು ತಂದುಕೊಡುವಲ್ಲಿ ಯಶಸ್ವಿಯಾದರು. ಇನ್ನೂ ಪಂದ್ಯಶ್ರೇಷ್ಠ ಪಶ್ರಸ್ತಿಗೆ ಭಾಜನರಾದ ತಿಲಕ್ ವರ್ಮಾ ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿದ್ದು, ವಿಶೇಷವಾಗಿ ನಾಯಕ ಸೂರ್ಯಕುಮಾರ್ ಯಾದವ್ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪಂದ್ಯಕ್ಕೂ ಮುನ್ನ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡುವಂತೆ ನಾಯಕ ಸೂರ್ಯ ಅವರನ್ನು ಕೋರಿದ್ದೆ. ನನ್ನ ಮೇಲೆ ನಾಯಕ ಇಟ್ಟಿರುವ ನಂಬಿಕೆಯನ್ನು ಈಗ ಹಿಂದಿರುಗಿಸಬೇಕಿದೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ನಾನು ಇಷ್ಟಪಡುತ್ತೇನೆ. ಮೊದಲೆರಡು ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದೆ. ಹೀಗಾಗಿ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಗುವ ನಿರೀಕ್ಷೆ ಇತ್ತು.
ಪಂದ್ಯದ ಹಿಂದಿನ ದಿನ ನಾಯಕ ಸೂರ್ಯ ನನ್ನ ಕೊಠಡಿಗೆ ಬಂದು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಂತೆ ಸೂಚಿಸಿದರು. ಈ ಉತ್ತಮ ಅವಕಾಶವನ್ನು ಸದುಪಯೋಗಪಡಿಸುವಂತೆ ಸಲಹೆ ನೀಡಿದರು. ನೀವು ನನಗೆ ಅವಕಾಶ ನೀಡಿದ್ದೀರಿ. ನಾನು ಮೈದಾನದಲ್ಲಿ ಉತ್ತಮ ಪ್ರದರ್ಶನದ ಮೂಲಕ ಉತ್ತರಿಸುವೆ ಎಂದು ನಾಯಕ ಸೂರ್ಯಕುಮಾರ್ಗೆ ಹೇಳಿದೆ ಎಂದು ಯುವ ಬ್ಯಾಟರ್ ತಿಲಕ್ ವರ್ಮಾ (Tilak Varma) ಹೇಳಿದ್ದಾರೆ.