

ಬೆಂಗಳೂರು: ಸರ್ವಾಂಗೀಣ ನಿರ್ವಹಣೆ ತೋರಿದ ಹುಬ್ಬಳ್ಳಿ ಟೈಗರ್ಸ್ ತಂಡ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಮಂಗಳೂರು ಡ್ರ್ಯಾಗನ್ಸ್ ಎದುರು 63 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಮನೀಷ್ ಪಾಂಡೆ ಬಳಗ ಸತತ ಗೆಲುವಿನ ಓಟವನ್ನು 4ನೇ ಪಂದ್ಯಕ್ಕೆ ವಿಸ್ತರಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ದಿನದ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹುಬ್ಬಳ್ಳಿ ಟೈಗರ್ಸ್ ತಂಡ 5 ವಿಕೆಟ್‌ಗೆ 215 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಆರಂಭಿಕ ಲವನೀತ್ ಸಿಸೋಡಿಯಾ (1) ಬೇಗನೆ ಕಳೆದುಕೊಂಡ ಟೈಗರ್ಸ್‌ಗೆ ಮತ್ತೋರ್ವ ಆರಂಭಿಕ ಮೊಹಮದ್ ತಾಹ (52) ಹಾಗೂ ವನ್ ಡೌನ್ ಬ್ಯಾಟರ್ ಕೆ. ಶ್ರೀಜೀತ್ (52) ಎರಡನೇ ವಿಕೆಟ್‌ಗೆ 90 ರನ್‌ಗಳ ಭರ್ಜರಿ ಜತೆಯಾಟ ನೀಡಿದರು. ಇಬ್ಬರೂ ಬ್ಯಾಟರ್‌ಗಳು ಅರ್ಧಶತಕ ಸಿಡಿಸಿ ಡಗೌಟ್ ಸೇರಿದರು.ಬಳಿಕ ನಾಯಕ ಮನೀಷ್ ಪಾಂಡೆ (69* ರನ್, 34 ಎಸೆತ, 5ಬೌಂಡರಿ, 4 ಸಿಕ್ಸರ್) ಸ್ಫೋಟಕ ಅರ್ಧಶತಕದಿಂದ ತಂಡವನ್ನು 200ರ ಗಡಿ ದಾಟಿಸಿದರು.
ಪ್ರತಿಯಾಗಿ ಬೃಹತ್ ಮೊತ್ತದ ಚೇಸಿಂಗ್ ನಡೆಸಿದ ಮಂಗಳೂರು ಡ್ರ್ಯಾಗನ್ ತಂಡ ಪ್ರಮುಖ ಬ್ಯಾಟರ್‌ಗಳ ವೈಲ್ಯದಿಂದಾಗಿ 8 ವಿಕೆಟ್‌ಗೆ 152 ರನ್‌ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಶಿವಕುಮಾರ್ (32) ಹಾಗೂ ಹಿಂದಿನ ಪಂದ್ಯದ ಶತಕದ ಸಿಡಿಸಿದ ವಿಕೆಟ್ ಕೀಪರ್- ಬ್ಯಾಟರ್ ಬಿಆರ್ ಶರತ್ (32) ಎರಡನೇ ವಿಕೆಟ್‌ಗೆ 60 ರನ್ ಪೇರಿಸಿ ಪ್ರತಿರೋಧ ತೋರಿದರು. ಬಳಿಕ ದಿಢೀರ್ ಕುಸಿತ ಕಂಡ ಡ್ರ್ಯಾಗನ್ಸ್ 93 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಕೆ. ಸಿದ್ದಾರ್ಥ್ (47*) ಏಕಾಂಗಿ ಹೋರಾಟ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತವಾಯಿತು.
ಹುಬ್ಬಳ್ಳಿ ಟೈಗರ್ಸ್: 5 ವಿಕೆಟ್‌ಗೆ 215 (ಲವನೀತ್ 1, ತಾಹ 52, ಶ್ರೀಜೀತ್ 52, ಮನೀಷ್ 69, ನಾಗ ಭರತ್ 15, ಪ್ರವೀಣ್ ದುಬೆ 18*, ಪ್ರತೀಕ್ 6ಕ್ಕೆ1).
ಮಂಗಳೂರು ಡ್ರ್ಯಾಗನ್ಸ್: 8 ವಿಕೆಟ್‌ಗೆ 152 (ಶಿವಕುಮಾರ್ 32, ಬಿಆರ್ ಶರತ್ 38, ಅನೀಶ್ವರ್ 4, ಕೆ. ಸಿದ್ದಾರ್ಥ್ 47, ಕೆ. ಗೌತಮ್ 0, ಧೀರಜ್ 16, ನಥಾನ್ 23ಕ್ಕೆ3, ಪ್ರವೀಣ್ ದುಬೆ 13ಕ್ಕೆ2, ವಿದ್ವತ್ 23ಕ್ಕೆ1).
ಪಂದ್ಯಶ್ರೇಷ್ಠ: ಪ್ರವೀಣ್ ದುಬೆ.
ನಾಳೆಯ ಪಂದ್ಯಗಳು
ಶಿವಮೊಗ್ಗ ಲಯನ್ಸ್- ಮೈಸೂರು ವಾರಿಯರ್ಸ್
ಆರಂಭ: ಮಧ್ಯಾಹ್ನ 1ಕ್ಕೆ
ಮಂಗಳೂರು ಡ್ರ್ಯಾಗನ್ಸ್ - ಬೆಂಗಳೂರು ಬ್ಲಾಸ್ಟರ್ಸ್
ಆರಂಭ: ಸಂಜೆ 5.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ/2.