ಆಫ್​ ಸ್ಪಿನ್ ನಿರೀಕ್ಷೆಯಲ್ಲಿದ್ದವರಿಗೆ ಕ್ಯಾರಂ ಬಾಲ್​ ಎಸೆದಿರಿ! ನಿವೃತ್ತಿಯ ಬೆನ್ನಲ್ಲೇ ಅಶ್ವಿನ್​ಗೆ ಪ್ರಧಾನಿ ಮೋದಿ ಪತ್ರ...

web pm ash
Published on

ನವದೆಹಲಿ: ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ ಭಾರತದ ಆ್​ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್​ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದು, 14 ವರ್ಷಗಳ ಯಶಸ್ವಿ ವೃತ್ತೀಜಿವನಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಅಶ್ವಿನ್​ ಅವರ ಅಚ್ಚರಿಯ ವಿದಾಯವನ್ನು "ಕ್ಯಾರಂ ಬಾಲ್​' ಎಂದು ಬಣ್ಣಿಸಿರುವುದು ವಿಶೇಷವಾಗಿದೆ.

"ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿಮ್ಮ ನಿವೃತ್ತಿಯ ಘೋಷಣೆ ಭಾರತ ಮತ್ತು ವಿಶ್ವದೆಲ್ಲೆಡೆಯ ಅಭಿಮಾನಿಗಳಿಗೆ ಅಚ್ಚರಿ ತಂದಿತು. ಎಲ್ಲರೂ ಇನ್ನಷ್ಟು ಆಫ್​-ಬ್ರೇಕ್​ ಎಸೆತಗಳನ್ನು ನಿರೀಕ್ಷಿಸುತ್ತಿದ್ದಾಗ ನೀವು ಕ್ಯಾರಂ ಬಾಲ್​ ಎಸೆದು ಎಲ್ಲರನ್ನೂ ಬೌಲ್ಡ್​ ಮಾಡಿದಿರಿ. ಆದರೆ ಭಾರತ ಪರ ಅಮೋವಾದ ವೃತ್ತೀಜಿವನವನ್ನು ಕಂಡ ಬಳಿಕ ಇದು ನಿಮಗೂ ಕಠಿಣವಾದ ನಿರ್ಧಾರವೆಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬಲ್ಲರು' ಎಂದು ಮೋದಿ ಪತ್ರದಲ್ಲಿ ಬರೆದಿದ್ದಾರೆ.

765 ಅಂತಾರಾಷ್ಟ್ರೀಯ ವಿಕೆಟ್​, 11 ಸರಣಿಶ್ರೇಷ್ಠ ಪ್ರಶಸ್ತಿ ಜತೆಗೆ 2011ರ ಏಕದಿನ ವಿಶ್ವಕಪ್​ ಮತ್ತು 2013ರ ಚಾಂಪಿಯನ್ಸ್​ ಟ್ರೋಫಿ ಸಹಿತ ಭಾರತದ ಹಲವು ಗೆಲುವುಗಳಿಗೆ ಅಶ್ವಿನ್​ ಕೊಡುಗೆಗಳನ್ನು ನೀಡಿರುವುದನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ. ಅಶ್ವಿನ್​ ಅವರ ಜೆರ್ಸಿ ನಂ. 99 ಅನ್ನೂ ಮಿಸ್​ ಮಾಡಿಕೊಳ್ಳುತ್ತೇವೆ ಎಂದಿರುವ ಮೋದಿ, 2022ರ ಟಿ20 ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧದ ಪಂದ್ಯದ ಕೊನೇ ಓವರ್​ನಲ್ಲಿ ಅಶ್ವಿನ್​ ಸಮಯಪ್ರಜ್ಞೆಯಿಂದ ವೈಡ್​ ಎಸೆತವನ್ನು ಆಡದೆ ಬಿಟ್ಟ ಪ್ರಸಂಗವನ್ನೂ ನೆನಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಯುವ ಆಟಗಾರರಿಗೆ ನಿಮ್ಮ ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ನೆರವಾಗಿ ಎಂದೂ ಪ್ರಧಾನಿ ಪ್ರೇರಣೆ ತುಂಬಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net