ವಿಶ್ವಕಪ್​ನಲ್ಲಿ ಭಾರತದ ಸೆಮೀಸ್​ ಎದುರಾಳಿಯಾಗಲು ತ್ರಿಕೋನ ಸ್ಪರ್ಧೆ! ಹೀಗಿದೆ ಲೆಕ್ಕಾಚಾರ...

semi web
Published on

ಬೆಂಗಳೂರು: ಆತಿಥೇಯ ಭಾರತ ತಂಡ ಏಕದಿನ ವಿಶ್ವಕಪ್​ನಲ್ಲಿ ಮೊದಲ ತಂಡವಾಗಿ ಸೆಮಿಫೈನಲ್​ ಪ್ರವೇಶ ಖಾತ್ರಿಪಡಿಸಿಕೊಂಡಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನೂ ಭದ್ರಪಡಿಸಿಕೊಂಡಿದೆ. ಆದರೆ ಭಾರತ ತಂಡಕ್ಕೆ ಸೆಮಿಫೈನಲ್​ ಎದುರಾಳಿ ಯಾರು ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ, ಸೆಮೀಸ್​ನಲ್ಲಿ ಭಾರತವನ್ನು ಎದುರಿಸಲು ಮತ್ತು 4ನೇ ತಂಡವಾಗಿ ಉಪಾಂತ್ಯಕ್ಕೇರಲು ಹಾಲಿ ರನ್ನರ್​ ಅಪ್​ ನ್ಯೂಜಿಲೆಂಡ್​, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮುಂದಿನ 3 ದಿನಗಳಲ್ಲಿ ಅಂದರೆ ಶನಿವಾರದ ವೇಳೆಗೆ ಭಾರತದ ಸೆಮೀಸ್​ ಎದುರಾಳಿ ಯಾರೆಂದು ತೀರ್ಮಾನವಾಗಲಿದೆ.

ಗುರುವಾರ ಬೆಂಗಳೂರಿನಲ್ಲಿ ನಡೆಯುವ ನ್ಯೂಜಿಲೆಂಡ್​-ಶ್ರೀಲಂಕಾ, ಶುಕ್ರವಾರ ಅಹಮದಾಬಾದ್​ನಲ್ಲಿ ನಡೆಯುವ ದಕ್ಷಿಣ ಆಫ್ರಿಕಾ-ಅಫ್ಘಾನಿಸ್ತಾನ ಮತ್ತು ಶನಿವಾರ ಕೋಲ್ಕತದಲ್ಲಿ ನಡೆಯುವ ಇಂಗ್ಲೆಂಡ್​-ಪಾಕಿಸ್ತಾನ ನಡುವಿನ ಪಂದ್ಯಗಳ ಫಲಿತಾಂಶಗಳು 4ನೇ ಸೆಮಿಫೈನಲಿಸ್ಟ್​ ತಂಡವನ್ನು ನಿರ್ಧರಿಸಲಿವೆ. ಸೆಮೀಸ್​ ರೇಸ್​ನಲ್ಲಿ ಮೂರೂ ತಂಡಗಳು 8 ಪಂದ್ಯಗಳಲ್ಲಿ ತಲಾ 4 ಜಯ-ಸೋಲು ಕಂಡಿವೆ.

ಸದ್ಯದ ಲೆಕ್ಕಾಚಾರದ ಪ್ರಕಾರ, ನ್ಯೂಜಿಲೆಂಡ್​ ತಂಡ ಭಾರತಕ್ಕೆ ಸೆಮೀಸ್​ ಎದುರಾಳಿಯಾಗಬಲ್ಲ ನೆಚ್ಚಿನ ತಂಡವಾಗಿದೆ. ಯಾಕೆಂದರೆ ಕೊನೇ ಲೀಗ್​ ಪಂದ್ಯದಲ್ಲಿ ಕಿವೀಸ್​, ಪಾಕ್​, ಆಫ್ಘನ್​ ಮೂರೂ ತಂಡಗಳು ಗೆದ್ದರೆ, ಉತ್ತಮ ರನ್​ರೇಟ್​ ಆಧಾರದಲ್ಲಿ ಕೇನ್​ ವಿಲಿಯಮ್ಸನ್​ ಬಳಗವೇ ಸೆಮಿಫೈನಲ್​ಗೇರುವ ಅವಕಾಶ ಹೊಂದಿದೆ. ಇದೇ ವೇಳೆ ಆಫ್ಘನ್​ ಸೆಮೀಸ್​ಗೇರಲು ಪಾಕ್​, ಕಿವೀಸ್​ ಎರಡೂ ಕೊನೇ ಲೀಗ್​ ಪಂದ್ಯಗಳಲ್ಲಿ ಸೋಲಬೇಕಾಗುತ್ತದೆ. ಯಾಕೆಂದರೆ ಈ 3 ತಂಡಗಳಲ್ಲಿ ಆಫ್ಘನ್​ ರನ್​ರೇಟ್​ ಅತ್ಯಂತ ಕಳಪೆಯಾಗಿದೆ.

ಭಾರತ-ಪಾಕ್​ ಸೆಮೀಸ್​ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಈಗಲೂ ಇದೆ. ಇದಕ್ಕಾಗಿ ಪಾಕ್​ ಕೊನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಎದುರು ಗೆಲ್ಲಬೇಕು. ಜತೆಗೆ ಲಂಕಾ ಎದುರು ಕಿವೀಸ್​ ಸೋತರೆ ಉತ್ತಮ. ಒಂದು ವೇಳೆ ಕಿವೀಸ್​ 1 ರನ್​ನಿಂದ ಗೆದ್ದರೂ, ಪಾಕ್​ ಕನಿಷ್ಠ 130 ರನ್​ಗಳಿಂದ ಗೆದ್ದರಷ್ಟೇ ರನ್​ರೇಟ್​ನಲ್ಲಿ ಅದನ್ನು ಹಿಂದಿಕ್ಕಲು ಸಾಧ್ಯವಿದೆ. ಕಿವೀಸ್​ 50 ರನ್​ಗಳಿಂದ ಗೆದ್ದರೆ, ಪಾಕ್​ 180 ರನ್​ಗಳಿಂದ ಗೆಲ್ಲಬೇಕಾಗುತ್ತದೆ. ಕಿವೀಸ್​ ಪಂದ್ಯದ ನಂತರ ಪಾಕ್​ ಪಂದ್ಯ ನಡೆಯಲಿರುವುದರಿಂದ ರನ್​ರೇಟ್​ ಲೆಕ್ಕಾಚಾರ ನೋಡಿಕೊಂಡು ಆಡುವ ಅನುಕೂಲವೂ ಇದೆ.

ಸೆಮೀಸ್​ ಎದುರಾಳಿ ಲೆಕ್ಕಾಚಾರ

ಭಾರತ-ನ್ಯೂಜಿಲೆಂಡ್​

*ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್​ ಗೆಲ್ಲಬೇಕು

*ಇಂಗ್ಲೆಂಡ್​ ಎದುರು ಪಾಕ್​ 130ಕ್ಕಿಂ ಹೆಚ್ಚು ರನ್​ಗಳಿಂದ ಗೆಲ್ಲಬಾರದು.

ಭಾರತ-ಪಾಕಿಸ್ತಾನ

*ಇಂಗ್ಲೆಂಡ್​ ಎದುರು ಪಾಕಿಸ್ತಾನ ಗೆಲ್ಲಬೇಕು.

*ಲಂಕಾ ಎದುರು ಕಿವೀಸ್​ ಸೋಲಬೇಕು ಅಥವಾ ಪಂದ್ಯ ಮಳೆಗೆ ರದ್ದಾಗಬೇಕು ಅಥವಾ ಇಂಗ್ಲೆಂಡ್​ ಎದುರು ಪಾಕ್​ 130ಕ್ಕಿಂತ ಹೆಚ್ಚು ರನ್​ಗಳಿಂದ ಗೆಲ್ಲಬೇಕು.

ಭಾರತ-ಅಫ್ಘಾನಿಸ್ತಾನ

*ದಕ್ಷಿಣ ಆಫ್ರಿಕಾ ಎದುರು ಅಫ್ಘಾನಿಸ್ತಾನ ಗೆಲ್ಲಬೇಕು.

*ಶ್ರೀಲಂಕಾ ಎದುರು ನ್ಯೂಜಿಲೆಂಡ್​ ಸೋಲಬೇಕು.

*ಇಂಗ್ಲೆಂಡ್​ ಎದುರು ಪಾಕಿಸ್ತಾನ ಸೋಲಬೇಕು.

*ಆಸೀಸ್​-ಆಫ್ರಿಕಾ ಸೆಮೀಸ್​ ಖಚಿತ

ಕೊನೇ ಪಂದ್ಯದ ಫಲಿತಾಂಶ ಏನೇ ಬಂದರೂ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೆಲಿಯಾ ತಂಡಗಳು ಲೀಗ್​ ಹಂತದ ಅಂಕಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನ ಅಲಂಕರಿಸುವುದು ಖಚಿತಗೊಂಡಿದೆ. ಇದರಿಂದಾಗಿ ಸೆಮಿಫೈನಲ್​ನಲ್ಲಿ ಇವೆರಡು ತಂಡಗಳ ಮುಖಾಮುಖಿಯೂ ಖಚಿತಗೊಂಡಿದೆ. ಆದರೆ ಈ ಪಂದ್ಯ ಎಲ್ಲಿ ನಡೆಯಲಿದೆ ಎಂಬುದು ಸ್ಪಷ್ಟವಾಗಿಲ್ಲ. ಯಾಕೆಂದರೆ ಸೆಮೀಸ್​ನಲ್ಲಿ ಭಾರತ-ಪಾಕ್​ ಮುಖಾಮುಖಿ ಏರ್ಪಟ್ಟರೆ ಆಗ ಈ ಪಂದ್ಯ ಕೋಲ್ಕತದಲ್ಲಿ ನಡೆಯಲಿದೆ ಮತ್ತು ಆಫ್ರಿಕಾ-ಆಸೀಸ್​ ಸೆಮೀಸ್​ ನವೆಂಬರ್​ 15ರಂದು ಮುಂಬೈನಲ್ಲಿ ನಡೆಯಲಿದೆ. ಒಂದು ವೇಳೆ ಪಾಕ್​ ಸೆಮೀಸ್​ಗೆ ಅರ್ಹತೆ ಪಡೆಯದಿದ್ದರೆ, ಆಸೀಸ್-ಆಫ್ರಿಕಾ ಸೆಮೀಸ್​ ನವೆಂಬರ್​ 16ರಂದು ಕೋಲ್ಕತದಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net