

ನವದೆಹಲಿ: ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಮತ್ತು ದಿಗ್ಗಜ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ( MS Dhoni) ಮೈದಾನಕ್ಕೆ ಬಂದರೆ, ಅಲ್ಲಿ ಕೇಳಿಸುವುದು ಕೇವಲ ಅಭಿಮಾನದ ಕೂಗು. ಇಡೀ ತಂಡದೊಂದಿಗೆ ಎಂ.ಎಸ್. ಧೋನಿ ಅಖಾಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂದು ತಿಳಿದ ಕೂಡಲೇ ಕೇಳಿಬರುವುದು ಕೇವಲ ಒಂದೇ ಒಂದೇ ಸದ್ದು ಅದು ಧೋನಿ...ಧೋನಿ. ತಮ್ಮ ಚಾಣಕ್ಷತನದ ವಿಕೆಟ್ ಕೀಪಿಂಗ್, ಬ್ಯಾಟಿಂಗ್ ಮತ್ತು ಅದ್ಭುತ ಕ್ಯಾಪ್ಟನ್ಸಿಯಿಂದಲೇ ಇಂದು ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಶಾಶ್ವತವಾಗಿ ಉಳಿದಿರುವ ಧೋನಿ, ಎಲ್ಲರೊಂದಿಗೂ ಬಹಳ ಶಾಂತ ಹಾಗೂ ಸೌಮ್ಯ ಸ್ವಭಾವದಿಂದಲೇ ನಡೆದುಕೊಳ್ಳುತ್ತಾರೆ. ಎಲ್ಲವನ್ನೂ ಕೂಲ್ ಆಗಿ ನಿಭಾಯಿಸುವ 'ಕ್ಯಾಪ್ಟನ್ ಕೂಲ್', ಆದಷ್ಟು ಜಗಳ, ಮನಸ್ತಾಪಗಳಿಂದ ದೂರವಿರುತ್ತಾರೆ. ಆದರೆ, ಮಾಹಿ ವಿರುದ್ಧ ತಂಡದ ಸಹ ಆಟಗಾರರು ಭಿನ್ನಾಭಿಪ್ರಾಯ ಹೊಂದಿದ್ದರು ಎಂದರೆ ನಂಬ್ತೀರಾ? ನಿಜಕ್ಕೂ ನಂಬಲೇಬೇಕು.
ಪ್ರಸ್ತುತ ಎಲ್ಲಾ ಫಾರ್ಮೆಟ್ಗೂ ವಿದಾಯ ಘೋಷಿಸಿರುವ ಮಹೇಂದ್ರ ಸಿಂಗ್ ಧೋನಿ, ವರ್ಷಕ್ಕೊಮ್ಮೆ ನಡೆಯುವ ಐಪಿಎಲ್ ಲೀಗ್ನಲ್ಲಿ ಮಾತ್ರ ತಂಡದ ಪರ ಕಾಣಿಸಿಕೊಳ್ಳುತ್ತಾರೆ. ಸೋಲಿರಲಿ, ಗೆಲುವಿರಲಿ, ಒಮ್ಮೆ ಮೈದಾನಕ್ಕೆ ಬಂದ ನಂತರ ಬಹಳ ತಾಳ್ಮೆಯಿಂದ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸುವ ಧೋನಿ, ತಂಡ ಸೋಲಿನಂಚಿನಲ್ಲಿದ್ದರು ಬೆವರುವುದಿಲ್ಲ. ಈ ಗುಣಗಳಿಗೆ ಮೆಚ್ಚಿ, ಕೊಂಡಾಡುವ ಕ್ರಿಕೆಟ್ ಪ್ರೇಮಿಗಳು, ಧೋನಿಯನ್ನು ವಿಶ್ವ ಕ್ರಿಕೆಟ್ನ ಮಾಂತ್ರಿಕ ಎಂದೇ ಭಾವಿಸುತ್ತಾರೆ. ಅದ್ರೆ, ಅಸಲಿಗೆ ಎಲ್ಲರಂತೆ ಕ್ಯಾಪ್ಟನ್ ಕೂಲ್ಗೂ ಕೂಡ ಒಂದಷ್ಟು ಕ್ರಿಕೆಟಿಗರೊಂದಿಗೆ ಅಸಮಾಧಾನವಿತ್ತು.
2011ರ ವಿಶ್ವಕಪ್ನಲ್ಲಿ ಅತ್ಯುತ್ತಮ ಆಲ್ರೌಂಡ್ ಪ್ರದರ್ಶನ ನೀಡಿದ ಯುವರಾಜ್ ಸಿಂಗ್, ಫೈನಲ್ ಪಂದ್ಯದಲ್ಲಿ ಧೋನಿ ಜತೆಗೂಡಿ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟರು. ತದನಂತರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಯುವಿ, ಮಾಹಿ ಜತೆ ಉತ್ತಮ ಸಂಬಂಧ ಹೊಂದುವಲ್ಲಿ ವಿಫಲರಾದರು. ಇದಕ್ಕೆ ಕಾರಣ ಅವರ ನಡೆ. ಅಂದು ಖಾಸಗಿ ಕಾರ್ಯಕ್ರಮಗಳು, ಇತರೆ ವೇದಿಕೆಗಳಲ್ಲಿ ಧೋನಿಯಿಂದ ಅಂತರ ಕಾಯ್ದುಕೊಂಡಿದ್ದರು. ಹೆಚ್ಚಾಗಿ ಎಲ್ಲಿಯೂ ಪರಸ್ಪರ ಮಾತನಾಡುತ್ತಿರಲಿಲ್ಲ. ಇದರ ನಡುವೆ ಯುವರಾಜ್ ತಂದೆಯ ಮಾತುಗಳು ಅವರಿಬ್ಬರ ಮಧ್ಯೆ ಯಾವುದು ಸರಿಯಿಲ್ಲ ಎಂಬುದನ್ನು ನೇರವಾಗಿಯೇ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿವಾದಾತ್ಮಕ ಹೇಳಿಕೆಗಳಿಂದಲೇ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವ ಭಾರತದ ಟರ್ಬನೇಟರ್ ಹರ್ಭಜನ್ ಸಿಂಗ್, 10 ವರ್ಷಗಳಿಂದ ಧೋನಿ ಅವರಿಂದ ಒಳ್ಳೆಯ ಸಂಬಂಧ ಹೊಂದಿಲ್ಲ. ಈ ಬಗ್ಗೆ ಸ್ವತಃ ಬಜ್ಜಿಯೇ ಪ್ರತಿಕ್ರಿಯಿಸಿ, ನನಗೆ ಧೋನಿ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ನಾನು ಕರೆ ಮಾಡಿದಾಗ ಅವರು ನನ್ನ ಫೋನ್ ಸ್ವೀಕರಿಸುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದು ಅವರಿಬ್ಬರ ನಡುವಿನ ಮನಸ್ತಾಪಕ್ಕೆ ಒಂದು ಕಾರಣ ಎನ್ನಲಾಗಿದೆ.
2011ರ ವಿಶ್ವಕಪ್ ಫೈನಲ್ನಲ್ಲಿ ಧೋನಿಯೊಂದಿಗೆ ಉತ್ತಮ ಜತೆಯಾಟ ನೀಡಿದ ಗೌತಮ್ ಗಂಭೀರ್, ಇಡೀ ಭಾರತ ಕೊಂಡಾಡುವಂತ ಅತ್ಯುತ್ತಮ ಪ್ರದರ್ಶನ ನೀಡಿದರು. ವಿಶ್ವಕಪ್ ಗೆಲುವಿಗೆ ಕೇವಲ ಧೋನಿ ಹೊಡದ ಆ ಒಂದು ಕಡೆಯ ಸಿಕ್ಸ್ ಮಾತ್ರವಲ್ಲ ಕಾರಣ. ಯಾರೋ ಒಬ್ಬರಿಂದ ಟ್ರೋಫಿ ಗೆಲ್ಲಲಿಲ್ಲ, ಇಡೀ ತಂಡದವರಿಂದ ನಾವು ಗೆದ್ದೆವು ಎಂದು ಗೌತಿ ಹೇಳಿದ್ದರು. ಈ ಹೇಳಿಕೆ ಮೂಲಕ ಗೌತಮ್ ಪರೋಕ್ಷವಾಗಿ ಧೋನಿಯನ್ನು ಕುಟುಕಿ ಮಾತನಾಡಿದ್ದು, ಅಂದು ಜಾಲತಾಣಗಳಲ್ಲಿ ಈ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿತ್ತು,(ಏಜೆನ್ಸೀಸ್).