ವಿಶ್ವಕಪ್​ನಲ್ಲಿ ಇಂದು ಆಸ್ಟ್ರೇಲಿಯಾಕ್ಕೆ ಇಂಗ್ಲೆಂಡ್​ ಸವಾಲು; ಕಮ್ಮಿನ್ಸ್​ ಪಡೆಗೆ ಮಹತ್ವದ ಪಂದ್ಯ

aus vs eng web
Published on

ಅಹಮದಾಬಾದ್​: ಆರಂಭಿಕ 2 ಪಂದ್ಯಗಳ ಸೋಲಿನ ಬಳಿಕ ಸತತ 4 ಜಯದೊಂದಿಗೆ ಬೀಗುತ್ತಿರುವ ಆಸ್ಟ್ರೆಲಿಯಾ ಮತ್ತು ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಸೋತು ಚಾಂಪಿಯನ್​ ಪಟ್ಟ ಉಳಿಸಿಕೊಳ್ಳುವ ಆಸೆ ಕೈಚೆಲ್ಲಿರುವ ಇಂಗ್ಲೆಂಡ್​ ತಂಡಗಳು ಏಕದಿನ ವಿಶ್ವಕಪ್​ನಲ್ಲಿ ಶನಿವಾರ ಮುಖಾಮುಖಿ ಆಗಲಿವೆ. ಸಾಂಪ್ರದಾಯಿಕ ಎದುರಾಳಿಗಳ ಸದ್ಯದ ತದ್ವಿರುದ್ಧ ಸ್ಥಿತಿಯಿಂದಾಗಿ ಈ ಪಂದ್ಯ ಹಿಂದಿನಷ್ಟು ಕುತೂಹಲಕಾರಿ ಎನಿಸಿಲ್ಲ. ಆದರೆ ಸೆಮಿಫೈನಲ್​ ಅವಕಾಶ ವೃದ್ಧಿಸಿಕೊಳ್ಳುವ ದೃಷ್ಟಿಯಿಂದ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಪ್ಯಾಟ್​ ಕಮ್ಮಿನ್ಸ್​ ಬಳಗಕ್ಕೆ ಮಹತ್ವದ್ದಾಗಿದೆ. ಈ ಪಂದ್ಯ ಗೆದ್ದರೆ ಆಸೀಸ್​ ಸೆಮೀಸ್​ಗೆ ಬಹುತೇಕ ಸನಿಹವಾಗಲಿದೆ.

ಸತತ 4 ಗೆಲುವಿನ ನಡುವೆ, ಆಂಗ್ಲರೆದುರಿನ ಕಾದಾಟಕ್ಕೆ ಮುನ್ನ ಗಾಯದ ಸಮಸ್ಯೆ ಆಸೀಸ್​ಗೆ ಹಿನ್ನಡೆ ತಂದಿದೆ. ಆಲ್ರೌಂಡರ್​ಗಳಾದ ಗ್ಲೆನ್​ ಮ್ಯಾಕ್ಸ್​ವೆಲ್​ ಮತ್ತು ಮಿಚೆಲ್​ ಮಾರ್ಷ್​ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಮ್ಯಾಕ್ಸ್​ವೆಲ್​ ಗಾಲ್ಫ್​ ಕಾರ್ಟ್​ನಿಂದ ಬಿದ್ದು ಕನ್​ಕಷನ್​ಗೆ ಒಳಗಾಗಿದ್ದರೆ, ಮಾರ್ಷ್​ ವೈಯಕ್ತಿಕ ಕಾರಣದಿಂದ ತುರ್ತಾಗಿ ತವರಿಗೆ ಮರಳಿದ್ದಾರೆ. ಇದರಿಂದಾಗಿ ಈ ಬಾರಿ ಸ್ಟೋಯಿನಿಸ್​, ಕ್ಯಾಮರಾನ್​ ಗ್ರೀನ್​ ಇಬ್ಬರೂ ಕಣಕ್ಕಿಳಿಯಬಹುದು.

ಮತ್ತೊಂದೆಡೆ ಇಂಗ್ಲೆಂಡ್​ ಸೆಮೀಸ್​ ರೇಸ್​ನಿಂದ ಈಗಾಗಲೆ ಹೊರಬಿದ್ದಿರುವುದರಿಂದ ಇದೊಂದು ಪ್ರತಿಷ್ಠೆಯ ಕಾದಾಟವಷ್ಟೇ ಆಗಿದೆ. ಆದರೆ, ಆಂಗ್ಲರು ಸಮಾಧಾನಕರ ಗೆಲುವು ಕಾಣಬೇಕಾದರೆ, ಆಡುವ 11ರ ಬಳಗದ ಈ ಸಲವಾದರೂ ಕ್ಲಿಕ್​ ಆಗಬೇಕಿದೆ. ಯುವ ಬ್ಯಾಟರ್​ ಹ್ಯಾರಿ ಬ್ರೂಕ್​ ಮತ್ತು ವೇಗಿ ಬೆಡನ್​ ಕರ್ಸ್​ ಕಣಕ್ಕಿಳಿಯುವ ನಿರೀಕ್ಷೆ ಇದೆ. 2025ರ ಚಾಂಪಿಯನ್ಸ್​ ಟ್ರೋಫಿಗೆ ವಿಶ್ವಕಪ್​ ಅಂಕಪಟ್ಟಿಯ ಅಗ್ರ 8 ತಂಡಗಳಷ್ಟೇ ಅರ್ಹತೆ ಪಡೆಯಲಿರುವುದರಿಂದ ಇಂಗ್ಲೆಂಡ್​, ಕೊನೇ ಸ್ಥಾನದಿಂದ ಮೇಲೆದ್ದು ಬರುವುದು ಅನಿವಾರ್ಯವೆನಿಸಿದೆ.

ಆಸೀಸ್​ ಸೆಮೀಸ್​ ಲೆಕ್ಕಾಚಾರ

ಉಳಿದ ಮೂರೂ ಪಂದ್ಯಗಳಲ್ಲಿ ಗೆದ್ದರೆ ಆಸೀಸ್​ ಸರಾಗವಾಗಿ ಉಪಾಂತ್ಯಕ್ಕೇರಲಿದೆ. ಉಳಿದ 3ರಲ್ಲಿ 2ರಲ್ಲಿ ಗೆದ್ದರೂ ಸೆಮೀಸ್​ ಅವಕಾಶ ಕಡಿಮೆಯಾಗುವುದಿಲ್ಲ. ರನ್​ರೇಟ್​ ಉತ್ತಮವಾಗಿರುವುದು ಇದಕ್ಕೆ ಕಾರಣ. ಒಂದು ವೇಳೆ ಉಳಿದ 3ರಲ್ಲಿ 1ರಲ್ಲಷ್ಟೇ ಗೆದ್ದರೆ ಆಸೀಸ್​ಗೆ ಆಗ ರನ್​ರೇಟ್​ ಮಾನದಂಡವೇ ನಿರ್ಣಾಯಕವೆನಿಸಲಿದೆ. ಆಸೀಸ್​ ಕೊನೇ 2 ಪಂದ್ಯಗಳಲ್ಲಿ ಆಫ್ಘನ್​​ (ನ.7) ಮತ್ತು ಬಾಂಗ್ಲಾದೇಶ (ನ.11) ವಿರುದ್ಧ ಆಡಲಿದೆ. ಹೀಗಾಗಿ ಸೆಮೀಸ್​ ಹಾದಿ ಜಟಿಲವಾಗಿ ಕಾಣಿಸುತ್ತಿಲ್ಲ.

ಏಕದಿನ ಮುಖಾಮುಖಿ: 155

ಆಸೀಸ್​: 87, ಇಂಗ್ಲೆಂಡ್​: 63, ಟೈ: 2, ರದ್ದು: 3

ವಿಶ್ವಕಪ್​ ಮುಖಾಮುಖಿ: 9

ಆಸೀಸ್​: 6, ಇಂಗ್ಲೆಂಡ್​: 3

ಆರಂಭ: ಮಧ್ಯಾಹ್ನ 2.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net