IPL 2024: ಇದೇ ಧೋನಿಯ ಲಾಸ್ಟ್​ ಸೀಸನ್​? ಮಾಹಿ ಬಾಲ್ಯ ಸ್ನೇಹಿತ ಕೊಟ್ರು ಬಿಗ್ ಅಪ್ಡೇಟ್​!

WhatsApp Image 2024-03-03 at 4.31.53 PM
Published on

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ 2024ರ ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಮಾರ್ಚ್​ 22ರಂದು ಚೆನ್ನೈನಲ್ಲಿ ಅದ್ದೂರಿ ಓಪನಿಂಗ್ ಮಾಡುವ ಮೂಲಕ ಪಂದ್ಯಗಳನ್ನು ಪ್ರಾರಂಭಿಸಲು ಈಗಾಗಲೇ ಬಿಸಿಸಿಐ ಮೊದಲ ಹಂತದ 21 ದಿನಗಳ ಪಟ್ಟಿ ಪ್ರಕಟಿಸಿದೆ. ಈ ಪೈಕಿ ವಿರಾಟ್​ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ಮತ್ತು ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ (CSK) ಕ್ಯಾಪ್ಟನ್ಸಿಯ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಕಿಕ್​ಸ್ಟಾರ್ಟ್​ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

ಸದ್ಯ ಮಾರ್ಚ್​ 22ರಂದು ನಡೆಯಲಿರುವ ಆರ್​ಸಿಬಿ ಮತ್ತು ಸಿಎಸ್​ಕೆ ಶುಭಾರಂಭ ಪಂದ್ಯಕ್ಕಾಗಿ ಬಹಳ ಕಾತರದಿಂದ ಕಾಯುತ್ತಿರುವ ಕ್ರಿಕೆಟ್ ಅಭಿಮಾನಿಗಳಿಗೆ ಒಂದೆಡೆ ಭಾರೀ ಖುಷಿಯಿದ್ದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಧೋನಿ ಅವರ ಕುರಿತಂತೆ ಹರಿದಾಡುತ್ತಿರುವ ಸುದ್ದಿಯೊಂದು ಭಾರೀ ಬೇಸರ ಹಾಗೂ ಗೊಂದಲ ಹುಟ್ಟುಹಾಕುತ್ತಿದೆ. ಅಸಲಿಗೆ ವೈರಲ್ ಆಗುತ್ತಿರುವ ವದಂತಿ ಹೀಗಿದೆ.

ಸಿಎಸ್​ಕೆ ಹಾಗೂ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಆಡಲಿರುವ ಕಡೆಯ ಸೀಸನ್​ ಇದಾಗಿರಲಿದೆ ಎಂಬ ಸುದ್ದಿಗಳು ವ್ಯಾಪಕವಾಗಿ ವೈರಲ್ ಆಗ್ತಿದೆ. ಇದು ಫ್ಯಾನ್ಸ್​ಗಳಲ್ಲಿ ತೀವ್ರ ಗೊಂದಲ ಸೃಷ್ಟಿಸಿದೆ. ಕಳೆದ ವರ್ಷವೂ ಇದೇ ರೀತಿಯ ಸುದ್ದಿಗಳು ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಅದ್ಯಾವುದು ನಿಜವಾಗಲಿಲ್ಲ! ಬದಲಿಗೆ ಧೋನಿ 2024ರ ಆವೃತ್ತಿಗೆ ತಮ್ಮ ತಂಡದಲ್ಲಿ ಆಡುವುದಾಗಿ ತಿಳಿಸಿದರು. ಅದೂ ಸಿಎಸ್​ಕೆ ನಾಯಕನಾಗಿ ಹಿಂತಿರುಗಿದ್ದು, ಅಭಿಮಾನಿಗಳಿಗೆ ಅತೀವ ಸಂತಸ ಉಂಟು ಮಾಡಿತು. ಆದ್ರೆ, ಅದೇ ವಿಚಾರ ಮತ್ತೆ ಮುನ್ನೆಲೆಗೆ ಬಂದಿರುವುದು ಕೊಂಚ ಬೇಸರ ತಂದಿದೆ.

2024ರ ಸೀಸನ್​ ಖಂಡಿತ ದೋನಿ ಅವರಿಗೆ ಅಂತಿಮ ಘಟ್ಟವಾಗಲಿದೆ ಎಂಬ ಭವಿಷ್ಯವಾಣಿಗಳ ಬೆನ್ನಲ್ಲೇ ಇದೀಗ ಮಾಹಿ ಅವರ ಬಾಲ ಸ್ನೇಹಿತರಾದ ಪರಮ್‌ಜಿತ್ ಸಿಂಗ್ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಬಿಗ್​ ಅಪ್ಡೇಟ್​ವೊಂದನ್ನು ಕೊಟ್ಟಿದ್ದಾರೆ. "ಇದು ಧೋನಿಯ ಕೊನೆಯ ಸೀಸನ್ ಆಗಿರುತ್ತದೆ ಎಂದು ನಾನು ಭಾವಿಸುವುದಿಲ್ಲ. ಯಾಕಂದ್ರೆ ಮಾಹಿ ಇನ್ನೂ ಫಿಟ್ ಆಗಿದ್ದಾರೆ. ಇನ್ನೂ ಒಂದು ಅಥವಾ ಎರಡು ಸೀಸನ್‌ಗಳನ್ನು ಆಡುತ್ತಾರೆ. ಖಂಡಿತವಾಗಿಯೂ ಇನ್ನೂ ಒಂದು ಸೀಸನ್ ಆಡಲಿದ್ದಾರೆ. ಕಾರಣ ಅವರು ಫಿಟ್ ಅಂಡ್ ಫೈನ್ ಆಗಿದ್ದಾರೆ" ಎಂದು ಹೇಳಿದ್ದಾರೆ.

"ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಎಂಎಸ್ ಯಾವಾಗಲೂ ನಮ್ಮೊಂದಿಗೆ ಇದ್ದಾರೆ, ಅದು ನಮ್ಮ ಸ್ನೇಹ. ನನಗೆ ಕ್ಯಾಪ್ಟನ್ ಕೂಲ್ ತಾವು ಸಹಿ ಮಾಡಿದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ" ಎಂದು ಪರಮ್‌ಜಿತ್ ಅತೀವ ಸಂತಸದಿಂದ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net