

ನವದೆಹಲಿ: ಕ್ರಿಕೆಟ್ ವೃತ್ತಿಗೆ ಇಳಿದ ಮೇಲೆ ಈ ಆಟಕ್ಕೆ ಸಂಪೂರ್ಣ ಮೀಸಲಾಗಿರಬೇಕು. ಶ್ರದ್ಧೆ, ಪರಿಶ್ರಮ, ಗುರಿ, ತುಡಿತ ಎಷ್ಟು ಮುಖ್ಯವೋ ಅದೆಲ್ಲದಕ್ಕಿಂತ ಹೆಚ್ಚಾಗಿ ಹಾಗೂ ಅತೀ ಮುಖ್ಯವಾಗಿ ಇರಬೇಕಾದದ್ದು ಫಿಟ್ನೆಸ್. ಹೌದು, ಈ ಆಟದಲ್ಲಿ ದೇಹದ ಆರೋಗ್ಯ ಮತ್ತು ತೂಕ ಕಾಪಾಡಿಕೊಳ್ಳುವುದು ಉತ್ತಮ. ಇಲ್ಲಿ ಫಿಟ್ನೆಸ್ ಸಮತೋಲನವಾಗಿ ಇಟ್ಟುಕೊಳ್ಳುವುದೇ ದೊಡ್ಡ ಸಾಧನೆ. ಇದನ್ನು ಕಾಪಾಡಿಕೊಂಡರೆ, ಉಳಿದೆಲ್ಲಾ ಕೊಂಚ ಸುಲಭ. ಹಾಗೆ ನೋಡಿದ್ರೆ, ಕ್ರಿಕೆಟಿಗರು ಸೇವಿಸುವ ಆಹಾರ ಕ್ರಮ ಇತರರ ಗಮನಸೆಳೆಯುವುದರಲ್ಲಿ ಅನುಮಾನವೇ ಇಲ್ಲ. ಯಾಕಂದ್ರೆ ನಿಯಮಿತ ಆಹಾರ, ವ್ಯಾಯಾಮ ಹೀಗೆ ನಾನಾ ರೀತಿಯ ಕಠಿಣ ಅಭ್ಯಾಸಗಳು ಅವರ ದಿನಚರಿಯ ಮೂಲವಾಗಿರುತ್ತವೆ.
ಕ್ರಿಕೆಟ್ಗೋಸ್ಕರ ತಮ್ಮ ಒಂದಷ್ಟು ಅಭ್ಯಾಸಗಳನ್ನು ತಡೆಗಟ್ಟುವ ಆಟಗಾರರು, ತಮ್ಮ ತನು-ಮನ ಎಲ್ಲವೂ ಕ್ರಿಕೆಟ್ ಎಂದೇ ಜೀವಿಸುತ್ತಾರೆ. ತಮ್ಮವರಿಗೆ ಸಮಯ ಕೊಡಲು ಸಾಧ್ಯವಾಗದೆ ಇದ್ದರೂ ಕ್ರಿಕೆಟ್ಗಾಗಿ ಹೆಚ್ಚು ಸಮಯ ಮೈದಾನದಲ್ಲೇ ಕಳೆಯುತ್ತಾರೆ. ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಹೆಚ್ಚಾಗಿ ಅನುಸರಿಸುವ ಅಭಿಮಾನಿಗಳು, ಅವರ ಉಡುಗೆ-ತೊಡುಗೆ, ಜೀವನಶೈಲಿ, ಮಾಡುವ ಕೆಲಸಗಳು, ನಡೆದುಕೊಳ್ಳುವ ರೀತಿ ಇದೆಲ್ಲವನ್ನೂ ಬಹಳ ಸೂಕ್ಷ್ಮವಾಗಿ ಗಮನಿಸುತ್ತಾರೆ. ಕೇವಲ ನೋಡಿ ಸುಮ್ಮನಾಗದ ಫ್ಯಾನ್ಸ್, ಅದನ್ನು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಲು ಮುಂದಾಗುತ್ತಾರೆ. ಆ ಮಟ್ಟಿಗೆ ಅವರ ಅಭಿಮಾನ, ಪ್ರೀತಿ ವ್ಯಕ್ತವಾಗುತ್ತದೆ. ಇದೆಲ್ಲದರ ಹೊರತಾಗಿ ಕ್ರಿಕೆಟಿಗರಿಗೂ ತಮ್ಮ ಖಾಸಗಿ ಜೀವನ ಅಂತ ಇರುತ್ತದೆ. ಅಲ್ಲಿ ಅವರು ತಮ್ಮ ಕುಟುಂಬಸ್ಥರು ಅಥವಾ ಸ್ನೇಹಿತರೊಡನೆ ಒಂದಷ್ಟು ಸಮಯ ಕಳೆಯುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪಾರ್ಟಿ, ಸಮಾರಂಭ, ಸಂಭ್ರಮಗಳಲ್ಲಿ ಮದ್ಯ ಸೇವನೆ ತೀರ ಸಾಮಾನ್ಯ. ಆದ್ರೆ, ಈ ಮೂವರು ಕ್ರಿಕೆಟಿಗರು ಮಾತ್ರ ಮದ್ಯ ಸೇವನೆಯಿಂದ ಬಹಳ ದೂರ ಉಳಿದಿದ್ದು, ಆಲ್ಕೋಹಾಲ್ಗೆ ಖಡಕ್ ಗುಡಬೈ ಹೇಳಿದ್ದಾರೆ.
ಇದನ್ನೂ ಓದಿ: ಕಸಾಪಕ್ಕೆ ಪ್ರೊ.ಜಿ.ವಿಯವರ ಕೊಡುಗೆ
ಟೀಮ್ ಇಂಡಿಯಾದ 'ವಾಲ್' ರಾಹುಲ್ ದ್ರಾವಿಡ್:
ತಮ್ಮ ಜೀವನದಲ್ಲಿ ಮದ್ಯ ಸೇವಿಸದೆ ಶಿಸ್ತನ್ನು ಪಾಲಿಸುತ್ತಿರುವ ರಾಹುಲ್ ದ್ರಾವಿಡ್, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 'ದಿ ವಾಲ್ ಆಫ್ ಇಂಡಿಯನ್ ಕ್ರಿಕೆಟ್' ಎಂಬ ಬಿರುದನ್ನು ಸಂಪಾದಿಸಿದ್ದಾರೆ. ಇಂದಿಗೂ ಅವರ ಕೊಡುಗೆ ಅವಿಸ್ಮರಣಿಯ. ಇತ್ತೀಚೆಗಷ್ಟೇ ಅಂತ್ಯಗೊಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಚಾಂಪಿಯನ್ಸ್ ಪಟ್ಟಕೇರಿಸುವ ಮೂಲಕ ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಗೆ ನಿವೃತ್ತಿ ಘೋಷಿಸಿ ಸದ್ಯ ವಿಶ್ರಾಂತಿಯಲ್ಲಿದ್ದಾರೆ.
'ದಿ ಫೈರ್ಬ್ರಾಂಡ್' ಗೌತಮ್ ಗಂಭೀರ್:
ಪ್ರಸ್ತುತ ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಆಗಿರುವ ಮಾಜಿ ಸ್ಟಾರ್ ಬ್ಯಾಟರ್ ಗೌತಮ್ ಗಂಭೀರ್, 2011ರ ವಿಶ್ವಕಪ್ನ ಅನ್ಸಂಗ್ ಹೀರೋ ಎಂದೇ ಹೆಸರುವಾಸಿ. ಮೈದಾನದಲ್ಲಿ ಮಾಡಿಕೊಂಡ ಜಗಳಗಳಿಂದಲೇ ವಿವಾದಗಳಿಗೆ ಸಾಕ್ಷಿಯಾಗಿದ್ದ ಗೌತಮ್, ತಮ್ಮ ಜೀವನದಲ್ಲಿ ಮದ್ಯಕ್ಕೆ ಅವಕಾಶವಿಲ್ಲ. ಅದರ ಸೇವನೆ ಮಾಡುವುದು ಬೇಡ ಎಂದು ಶಿಸ್ತಿನ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಫಿಟ್ನೆಸ್, ಚುರುಕುತನ, ಆಟದ ಪ್ರದರ್ಶನ ಇವೇ ತನಗೆ ಅತೀ ಮುಖ್ಯ ಎಂದು ಗೌತಮ್ ನಂಬಿದ್ದಾರೆ.
'ದಿ ಕಿಂಗ್' ವಿರಾಟ್ ಕೊಹ್ಲಿ:
ಪಸ್ತುತ ಫಿಟ್ನೆಸ್ ಐಕಾನ್ ಎಂದೇ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ತಮ್ಮ 36ನೇ ವಯಸ್ಸಿನಲ್ಲಿಯೂ ಯುವಕರು ನಾಚುವಂತ ಫಿಟ್ನೆಸ್ ಕಾಪಾಡಿಕೊಂಡು ಬಂದಿದ್ದಾರೆ. ಇಂದಿಗೂ ಮೈದಾನದಲ್ಲಿ ರನ್ಗಳ ಸುರಿಮಳೆಯನ್ನೇ ಹರಿಸುವ ವಿರಾಟ್, ಮದ್ಯಕ್ಕೆ ಆಸ್ಪದ ಕೊಡದೆ, ಫಿಟ್ನೆಸ್ ಬಗ್ಗೆ ಹೆಚ್ಚು ಒಲುವು ತೋರಿದ್ದಾರೆ. ದಿನಚರಿಯಲ್ಲಿ ಬಹುತೇಕ ಸಮಯವನ್ನು ವ್ಯಾಯಾಮ ಮಾಡುವುದರಲ್ಲೇ ಕಳೆಯುವ ಕೊಹ್ಲಿ, ಇಂದು ಅನೇಕರಿಗೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು,(ಏಜೆನ್ಸೀಸ್).