

ಪುಣೆ: ಆರ್. ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಜತೆಗೆ ಅಕ್ಷರ್ ಪಟೇಲ್ ಮತ್ತೋರ್ವ ಸ್ಪಿನ್ನರ್ ಆಗಿ ಭಾರತ ತಂಡದಲ್ಲಿದ್ದರೂ, ಕೊನೇ 2 ಟೆಸ್ಟ್ಗಳಿಗೆ 16ನೇ ಆಟಗಾರನಾಗಿ ಸ್ಪಿನ್ ಬೌಲಿಂಗ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸೇರ್ಪಡೆ ಕುತೂಹಲ ಕೆರಳಿಸಿದೆ.
ಬೆಂಗಳೂರಿನಲ್ಲಿ ಕಿವೀಸ್ ಎಡಗೈ ಬ್ಯಾಟರ್ಗಳಾದ ಡೆವೊನ್ ಕಾನ್ವೇ ಮತ್ತು ರಚಿನ್ ರವೀಂದ್ರ ಅವರೇ ಭಾರತವನ್ನು ಹೆಚ್ಚಾಗಿ ಕಾಡಿದ್ದರು. ಹೀಗಾಗಿ ಅವರಿಗೆ ನಿಯಂತ್ರಣ ಹೇರಲು ಅಶ್ವಿನ್ ಜತೆಗೆ 2ನೇ ಆಫ್ ಸ್ಪಿನ್ನರ್ ಆಗಿ ವಾಷಿಂಗ್ಟನ್ ಸುಂದರ್ಗೆ ಬುಲಾವ್ ನೀಡಲಾಗಿದೆ ಎನ್ನಲಾಗುತ್ತಿದೆ. ತಂಡದಲ್ಲಿರುವ ಇತರ ಮೂವರು (ಜಡೇಜಾ, ಅಕ್ಷರ್, ಕುಲದೀಪ್) ಎಡಗೈ ಸ್ಪಿನ್ನರ್ಗಳಾಗಿದ್ದಾರೆ.
ಇನ್ನೊಂದು ವರದಿಯ ಪ್ರಕಾರ ವಾಷಿಂಗ್ಟನ್ ಭಾರತ ತಂಡದಲ್ಲಿ ಅಗ್ರ ಸರದಿಯ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ. ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿ ತಮಿಳುನಾಡು ಪರ 152 ರನ್ ಸಿಡಿಸಿರುವ ವಾಷಿಂಗ್ಟನ್ ಸದ್ಯ ಭರ್ಜರಿ ಬ್ಯಾಟಿಂಗ್ ಫಾಮ್ರ್ನಲ್ಲಿದ್ದಾರೆ. ಇದಲ್ಲದೆ ಭಾರತ ತಂಡದ ಇತರ ಪ್ರಮುಖ ಬ್ಯಾಟರ್ಗಳು ಅರೆಕಾಲಿಕ ಬೌಲರ್ಗಳಾಗಿಯೂ ಬೌಲಿಂಗ್ ಮಾಡದಿರುವ ಕಾರಣ ವಾಷಿಂಗ್ಟನ್ರನ್ನು ಅಗತ್ಯಬಿದ್ದರೆ ಬೌಲಿಂಗ್ಗೂ ಬಳಸಿಕೊಳ್ಳಲಾಗುತ್ತದೆ ಎನ್ನಲಾಗಿದೆ.
ಸಿರಾಜ್ ಜಾಗಕ್ಕೆ ಆಕಾಶ್ದೀಪ್?
ಬೆಂಗಳೂರಿನಲ್ಲಿ ಪ್ರವಾಸಿ ಕಿವೀಸ್ ವೇಗಿಗಳ ಅಬ್ಬರದ ನಡುವೆ ಭಾರತದ ವೇಗಿ ಮೊಹಮದ್ ಸಿರಾಜ್ ಕೇವಲ 2 ವಿಕೆಟ್ ಕಿತ್ತು ನಿರಾಸೆ ಮೂಡಿಸಿದ್ದರು. ಇದಲ್ಲದೆ ತವರಿನಲ್ಲಿ ಆಡಿರುವ ಕಳೆದ 13 ಟೆಸ್ಟ್ಗಳಲ್ಲಿ ಸಿರಾಜ್ 19 ವಿಕೆಟ್ ಮಾತ್ರ ಕಬಳಿಸಿದ್ದಾರೆ. ಇದರಿಂದಾಗಿ ಪುಣೆ ಟೆಸ್ಟ್ನಿಂದ ಸಿರಾಜ್ ಹೊರಬೀಳುವ ಸಾಧ್ಯತೆ ಇದೆ. ಸಿರಾಜ್ ಬದಲಿಗೆ ಮತ್ತೋರ್ವ ವೇಗಿ ಆಕಾಶ್ದೀಪ್ರನ್ನು ಆಡಿಸಲು ಭಾರತ ಆಸಕ್ತಿ ತೋರಿದೆ. 30 ವರ್ಷದ ಸಿರಾಜ್ ಇದುವರೆಗೆ ಆಡಿರುವ 30 ಟೆಸ್ಟ್ಗಳಲ್ಲಿ 80 ವಿಕೆಟ್ ಕಬಳಿಸಿದ್ದು, ಈ ಪೈಕಿ 61 ವಿಕೆಟ್ಗಳು ವಿದೇಶದಲ್ಲಿ ಆಡಿದ 17 ಟೆಸ್ಟ್ಗಳಲ್ಲೇ ಲಭಿಸಿವೆ. ಹೆಚ್ಚಿನ ಬೌನ್ಸ್ ಹೊಂದಿರುವ ಆಸ್ಟ್ರೆಲಿಯಾ, ದ. ಆಫ್ರಿಕಾದ ಪಿಚ್ಗಳಲ್ಲಷ್ಟೇ ಸಿರಾಜ್ ಪರಿಣಾಮಕಾರಿ ಎನಿಸಬಲ್ಲರು ಎನ್ನಲಾಗಿದೆ. ಹೀಗಾಗಿ ಹಾಲಿ ಸರಣಿಯಲ್ಲಿ ಹೊರಗುಳಿದರೂ, ಆಸ್ಟ್ರೆಲಿಯಾ ಪ್ರವಾಸಕ್ಕೆ ಅವರ ಆಯ್ಕೆ ನಿಶ್ಚಿತ ಎನ್ನಲಾಗುತ್ತಿದೆ.