

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಸೀಸನ್ ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈಗಾಗಲೇ ಬಿಸಿಸಿಐ ಮೊದಲ 21 ದಿನಗಳ ಪಂದ್ಯಗಳ ವೇಳಾಪಟ್ಟಿಯನ್ನು ಸಹ ಬಿಡುಗಡೆಗೊಳಿಸಿದೆ. ಶೆಡ್ಯೂಲ್ ಪ್ರಕಾರ, ಆರಂಭಿಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ಸಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿ ಭರ್ಜರಿ ಪೈಪೋಟಿ ಕೊಡಲು ಸಜ್ಜಾಗಿವೆ.
ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ವೈರತ್ವ ಹಾಗೂ ಅಭಿಮಾನಿಗಳನ್ನು ಹೊಂದಿರುವ ತಂಡಗಳೆಂದರೆ ಅದು ಆರ್ಸಿಬಿ ಮತ್ತು ಸಿಎಸ್ಕೆ ಮಾತ್ರ. ಈ ಎರಡು ತಂಡಗಳಿಗಿರುವ ಅಭಿಮಾನಿ ಬಳಗ ದೊಡ್ಡದು. ಇವೆರೆಡು ಟೀಮ್ಗಳೇ 2024ರ ಆವೃತ್ತಿಯ ಕಿಕ್ಸ್ಟಾರ್ಟ್ ಪಂದ್ಯದಲ್ಲಿ ಎದುರು-ಬದುರು ಆಡುತ್ತಿರುವುದು ಕ್ರಿಕೆಟ್ ಫ್ಯಾನ್ಸ್ಗಳಲ್ಲಿ ಮತ್ತಷ್ಟು ಕಿಚ್ಚು ಹೆಚ್ಚಿಸಿದೆ. ಅಪಾರ ಸಂಖ್ಯೆಯ ಫ್ಯಾನ್ಸ್ಗಳನ್ನು ಸಂಪಾದಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಷ್ಟು ಬಾರಿ ಸೋತರೂ, ಗೆದ್ದರೂ ಅಥವಾ ಟೂರ್ನಿಯಿಂದ ಬಹುಬೇಗ ಹೊರಗುಳಿದರೂ ಕೂಡ ಫ್ಯಾನ್ಸ್ಗಳು ಮಾತ್ರ ಸೀಸನ್ ಮುಗಿಯವರೆಗೂ ಅದೇ ಪ್ರೀತಿ, ಅಭಿಮಾನಿವನ್ನು ಹಂಚುವುದು ಈ ತಂದ ವಿಶೇಷ ಎಂದೇ ಹೇಳಬಹುದು.
ಸದ್ಯ ಆರ್ಸಿಬಿ ಮತ್ತು ಸಿಎಸ್ಕೆ ಮೊದಲ ಪಂದ್ಯಕ್ಕೆ ಎದುರುನೋಡುತ್ತಿರುವ ಕ್ರಿಕೆಟ್ ಅಭಿಮಾನಿಗಳು ಇದೀಗ ಸ್ಯಾಂಡಲ್ವುಡ್ ನಟನ ಬ್ಯಾಟಿಂಗ್ ವೈಖರಿ ನೋಡಿ ಇವರು ಸಹ ಐಪಿಎಲ್ನಲ್ಲಿ ಈ ಬಾರಿ ಬೆಂಗಳೂರು ತಂಡಕ್ಕೆ ಆಡಲೇಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದುಬೈನಲ್ಲಿ ಆರಂಭಗೊಂಡ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಪಂದ್ಯಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರ ನಟ ಡಾರ್ಲಿಂಗ್ ಕೃಷ್ಣ ಆಡಿದ ವೈಖರಿ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೃಷ್ಣ ಅವರ ಆಟ ನೋಡಿದ ಕ್ರಿಕೆಟ್ ಅಭಿಮಾನಿಗಳು, ಎಂತಹ ಅದ್ಬುತ ಬ್ಯಾಟಿಂಗ್ ವೈಖರಿ! ಖಂಡಿತವಾಗಿ ಇವರು ಈ ಬಾರಿ ಆರ್ಸಿಬಿ ತಂಡದ ಪರ ಆಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.