ಇದು ತೃತೀಯ ಲಿಂಗಿ ಸಮಸ್ಯೆಯಲ್ಲ! ಒಲಿಂಪಿಕ್ ಬಾಕ್ಸಿಂಗ್​ ವಿವಾದಕ್ಕೆ ಐಒಸಿ ಮಧ್ಯಸ್ಥಿಕೆ

ವಿಜಯವಾಣಿ - 2024-08-02T082823.921
Published on

ಪ್ಯಾರಿಸ್​: ನಿನ್ನೆ (ಆ.01) ಪ್ಯಾರಿಸ್​ ಒಲಿಂಪಿಕ್ಸ್​ 2024ರ ಪದಕದಾಟದಲ್ಲಿ ನಡೆದ ಮಹಿಳೆಯರ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ದೊಡ್ಡ ವಿವಾದವೊಂದು ಭುಗಿಲೆದ್ದಿದ್ದು, ಇದೀಗ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವುಮೆನ್ಸ್​​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಇಟಾಲಿ ಮೂಲದ ಬಾಕ್ಸರ್ ಏಂಜಲೀನಾ ಕ್ಯಾರಿನಿ ತಮ್ಮ ಎದುರಾಳಿ ಅಲ್ಜೀರಿಯಾದ ಇಮಾನೆ ಖೆಲಿಫ್ ವಿರುದ್ಧದ ಕಾಳಗದಲ್ಲಿ 46 ಸೆಕೆಂಡ್​ಗೆ ಮ್ಯಾಚ್​ ತ್ಯಜಿಸಿ, ಹೊರಬಂದರು. ನಾಲ್ಕು ರೌಂಡ್​ವರೆಗೂ ಹೋಗಬೇಕಿದ್ದ ಪಂದ್ಯವನ್ನು ಕೇವಲ 2ನೇ ಸುತ್ತಿಗೆ ಅಂತ್ಯಗೊಳಿಸಿದ ಏಂಜೆಲಾ, ಇಂತಹ ಸೋಲನ್ನು ನನ್ನಿಂದ ಒಪ್ಪಿಕೊಳ್ಳಲು ಅಸಾಧ್ಯ ಎಂದು ಆಟ ಅರ್ಧಕ್ಕೆ ಕೈಬಿಟ್ಟರು. ಇದಕ್ಕೆ ಬಲವಾದ ಕಾರಣವೂ ಇದೆ.

ಖಲಿಫೆ ವಿರುದ್ಧದ ಸೋಲನ್ನು ಸೋಲು ಎಂದು ಒಪ್ಪಿಕೊಳ್ಳಲು ನನ್ನಿಂದ ಅಸಾಧ್ಯ ಎಂದು ಬಾಕ್ಸಿಂಗ್ ಅಖಾಡದಲ್ಲಿಯೇ ಕಣ್ಣೀರಿಟ್ಟ ಏಂಜೆಲಾ, ಕಳೆದ ವರ್ಷ ನಡೆದ ಬಾಕ್ಸಿಂಗ್ ಚಾಂಪಿಯನ್​ಶಿಪ್​ ವೇಳೆ ಲಿಂಗ ಅರ್ಹತಾ ಪರೀಕ್ಷೆಯಲ್ಲಿ ವಿಫಲವಾಗಿದ್ದ ಖೇಲಿಫ್​ರನ್ನು ಹೇಗೆ ಮಹಿಳೆಯರ ಜತೆ ಆಡಲು ಬಿಟ್ಟಿದ್ದೀರಿ ಎಂದು ಪ್ರಶ್ನಿಸಿ, ಭಾವುಕರಾದರು. "ಸ್ಪರ್ಧೆಯಲ್ಲಿ ತನ್ನ ಮೂಗಿಗೆ ಖೆಲಿಫೆ ಹೊಡೆದ ಪಂಚ್​ ಬಹಳ ಬಲವಾಗಿತ್ತು. ಅದು ಮಹಿಳೆಯರು ಹೊಡೆದಂತೆ ಇರಲಿಲ್ಲ. ರಿಂಗ್‌ನಲ್ಲಿ ಇಷ್ಟು ವರ್ಷಗಳ ಅನುಭವ ಹೊಂದಿರುವ ನಾನು, ಇಲ್ಲಿಯವರೆಗೆ ಅಂತಹ ಬಲವಾದ ಪೆಟ್ಟನ್ನು ಅನುಭವಿಸಿಯೇ ಇರಲಿಲ್ಲ. ಹೀಗಾಗಿಯೇ ತಕ್ಷಣವೇ ಸ್ಪರ್ಧೆ ಕೈಬಿಡಲು ನಿರ್ಧರಿಸಿದೆ" ಎಂದರು.

ಲಿಂಗ ಪರೀಕ್ಷೆಯಲ್ಲಿ ವಿಫಲವಾದ ದಾಖಲೆ ಹೊಂದಿರುವ ಖೇಲಿಫ್ ಇದೀಗ ಕ್ರೀಡಾಪಟುಗಳ ಕೆಂಗಣ್ಣಿಗೆ ಗುರಿಯಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಸದ್ಯ ಈ ವಿಷಯಕ್ಕೆ ಸಂಬಂಧಿಸಿದಂತೆ ಏಂಜೆಲಾ ಪರ ಮಹಿಳಾ ಕ್ರೀಡಾಪಟುಗಳು ಬ್ಯಾಟ್ ಬೀಸಿದ್ದಾರೆ. ಮಹಿಳೆಯರ ಮಧ್ಯೆ ಪುರುಷ ಏಕೆ? ಇದನ್ನು ತೀವ್ರ ಖಂಡಿಸುತ್ತೇವೆ. ಇದಕ್ಕೆಲ್ಲಾ ಒಲಿಂಪಿಕ್ಸ್​ನಲ್ಲಿ ಅವಕಾಶ ಕೊಡಬಾರದು ಎಂಬ ಕೂಗುಗಳು ವ್ಯಾಪಕವಾಗಿ ಕೇಳಿಬಂದಿವೆ. ಇನ್ನು ಈ ವಿವಾದ ತೀವ್ರವಾಗುತ್ತಿದ್ದಂತೆ ಮಧ್ಯಸ್ಥಿಕೆ ವಹಿಸಿದ ಐಒಸಿ, ಇದು ತೃತೀಯ ಲಿಂಗಿ ಸಮಸ್ಯೆಯಲ್ಲ ಎಂದು ಒಂದೇ ಮಾತಿನಲ್ಲಿ ಖಡಕ್ ಪ್ರತಿಕ್ರಿಯೆ ನೀಡಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net