

ಲಖನೌ: ವಿಶ್ವದ ಮಿಲಿಯನ್ ಡಾಲರ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ ಮೂಲಕ ಹಲವು ಯುವ ಪ್ರತಿಭೆಗಳು ದೊಡ್ಡ ಅವಕಾಶಗಳನ್ನು ಪಡೆದುಕೊಂಡಿದ್ದು, ಈ ಟೂರ್ನಿ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಈ ಪೈಕಿ ಮೊದಲು ಕೇಳಿ ಬರುವ ಹೆಸರೆಂದರೆ ಅದು ಸಮೀರ್ ರಿಜ್ವಿ ಅವರದ್ದು. 17ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ಕಿಂಗ್ಸ್ ಪರ ಆಡಿದ್ದ ಸಮೀರ್ ಹರಾಜಿನ ವೇಳೆ 8.4 ಕೋಟಿ ರೂಪಾಯಿಗೆ ಬಿಕರಿಯಾಗುವ ಮೂಲಕ ಸುದ್ದಿಯಾಗಿದ್ದರು. ಇದೀಗ ಮತ್ತೊಮ್ಮೆ ಈ ಆಟಗಾರ ಸುದ್ದಿಯಾಗಿದ್ದು, ಈ ಬಾರಿ ಕ್ರೀಡೆ ವಿಚಾರಕಲ್ಲ ಬದಲಾಗಿ ತಮ್ಮ ಮಾತಿನಿಂದ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಉತ್ತರಪ್ರದೇಶದ ಮೀರತ್ ಮೂಲದ 20 ವರ್ಷದ ಯುವ ಬ್ಯಾಟ್ಸ್ಮನ್ ಸಮೀರ್ ಸದ್ಯ ಯುಪಿ ಟಿ20 ಲೀಗ್‌ನಲ್ಲಿ ಆಡುತ್ತಿದ್ದಾರೆ. ಪ್ರಸ್ತುತ ಯುಪಿ ಲೀಗ್‌ನಲ್ಲಿ ಸ್ಫೋಟಕ ಆಟದೊಂದಿಗೆ ಎಲ್ಲರ ಗಮನ ಸೆಳೆದಿರುವ ಸಮೀರ್ ಇದೀಗ ತಮ್ಮ ಹೇಳಿಕೆಯೊಂದರ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ನಾನೊಬ್ಬ ಧಾರ್ಮಿಕ ವ್ಯಕ್ತಿಯಾಗಿದ್ದು, ಪ್ರತಿದಿನ ತಪ್ಪದೇ ನಮಾಜ್ ಮಾಡುತ್ತೇನೆ. ನಮಾಜ್ ಪಠಣೆ ಮಾಡುವುದರಿಂದ ಸಿಗುವ ಶಾಂತಿ-ನೆಮ್ಮದಿ, ಶತಕ ಸಿಡಿಸಿದಾಗಲೂ ಸಿಗುವುದಿಲ್ಲ. ಎಂತಹ ಒತ್ತಡದ ಪರಿಸ್ಥಿತಿಯಿದ್ದರೂ ಶಾಂತವಾಗಿರಬೇಕು ಎನ್ನುವುದನ್ನು ನನಗೆ ಧೋನಿ ಅವರು ಕಲಿಸಿಕೊಟ್ಟಿದ್ದಾರೆ. ನನಗೆ ಕ್ರಿಕೆಟ್ ಲೆಜೆಂಡ್‌ಗಳಾದ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಎಂದರೆ ಅಚ್ಚುಮೆಚ್ಚು. ಅವರೇ ನನಗೆ ಕ್ರಿಕೆಟ್ ಆಡಲು ಸ್ಫೂರ್ತಿ ಎಂದು ಹೇಳಿದ್ದಾರೆ.
ಏಕೆಂದರೆ ಎಂತಹ ಒತ್ತಡದ ಪರಿಸ್ಥಿತಿಯಿದ್ದರೂ ಧೋನಿ ಅವರು ನನಗೆ ಹೇಗೆ ಶಾಂತವಾಗಿರಬೇಕು ಎಂದು ಕಲಿಸಿಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ದಿಗ್ಗಜ ಕ್ರಿಕೆಟಿಗನಾಗಿದ್ದರೂ, ಯಾವುದೇ ಹಮ್ಮುಬಿಮ್ಮುಗಳಿಲ್ಲದೇ ಎಲ್ಲರ ಜತೆ ಬೆರೆಯುವ ರೀತಿ ಕಂಡರೆ ನನಗಿಷ್ಟವಾಗುತ್ತದೆ. ಹೀಗಾಗಿ ಇವರಿಬ್ಬರು ನನಗೆ ರೋಲ್ ಮಾಡೆಲ್ಗಳು ಎಂದಿದ್ದಾರೆ.
ನಾನು ಐಪಿಎಲ್ನಲ್ಲಿ ಚೆನ್ನೈ ಸೂಪರ್ಕಿಂಗ್ಸ್ಗೆ ಆಯ್ಕೆಯಾದ ಬಳಿಕ ತಂಡವು ನನ್ನನ್ನು ಸ್ವಾಗತಿಸಿದ ರೀತಿ ಅದ್ಭುತವಾಗಿತ್ತು. ಮುಂದೆಯೂ ಅವಕಾಶ ಸಿಕ್ಕಿದರೆ ತಾವು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತೇನೆ. ಆಟಗಾರರ ರೀಟೇನ್ ಮಾಡುವುದರ ಕುರಿತಂತೆ ಫ್ರಾಂಚೈಸಿಯೂ ನನ್ನ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ. ಐಪಿಎಲ್‌ನಿಂದ ಹಣ ಗಳಿಸಬೇಕು ಎನ್ನುವುದು ನನ್ನ ಉದ್ಧೇಶವಾಗಿಲ್ಲ. ಬದಲಾಗಿ ದೊಡ್ಡ ಟೂರ್ನಿಯಲ್ಲಿ ತಮ್ಮ ಕ್ರಿಕೆಟ್ ಪ್ರತಿಭೆ ಅನಾವರಣಗೊಳಿಸಲು ಎದುರು ನೋಡುತ್ತಿದ್ದೇನೆ ಎಂದು ಉತ್ತರಪ್ರದೇಶ ಮೂಲದ ಉವ ಬ್ಯಾಟರ್ ಸಮೀರ್ ರಿಜ್ವಿ ಹೇಳಿದ್ಧಾರೆ.