ಟಿ20 ಕ್ರಿಕೆಟ್ ಆರಂಭಿಕ ಬ್ಯಾಟ್ಸ್‌ಮನ್‌ಗಳ ಮೇಲೆ ಕ್ರಿಸ್ ಗೇಲ್ ಸಿಟ್ಟಾಗಿದ್ದೇಕೆ?

gayle web
Published on

ಅಬುಧಾಬಿ: ಟಿ20 ಕ್ರಿಕೆಟ್ ಪಂದ್ಯಗಳ ಪವರ್‌ಪ್ಲೇಯಲ್ಲಿ ಎಚ್ಚರಿಕೆಯ ಆಟವಾಡುವ ಮೂಲಕ ಆರಂಭಿಕ ಬ್ಯಾಟ್ಸ್‌ಮನ್‌ಗಳು ಮನರಂಜನೆಯನ್ನು ಸಾಯಿಸುತ್ತಿದ್ದಾರೆ ಎಂದು ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ಟೀಕಿಸಿದ್ದಾರೆ. ಜತೆಗೆ ಸ್ಫೋಟಕ ಬ್ಯಾಟಿಂಗ್‌ಗೆ ಟಿ10 ಕ್ರಿಕೆಟ್ ಪ್ರಕಾರ ಹೊಸ ಗುಣಮಟ್ಟವನ್ನು ನಿರ್ಮಿಸಿಕೊಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಅಬುಧಾಬಿ ಟಿ10 ಲೀಗ್‌ನಲ್ಲಿ ಆಡುತ್ತಿರುವ ಗೇಲ್, ‘ಟಿ10ನಂತೆ ಟಿ20 ಕ್ರಿಕೆಟ್‌ನಲ್ಲೂ ಮೊದಲಿಗೆ ಆರಂಭಿಕರು ಬಿರುಸಿನ ಆಟವಾಡುತ್ತಿದ್ದರು. ಬರಬರುತ್ತ ಆರಂಭಿಕರ ಆಟ ನಿಧಾನವಾಗುತ್ತಿದೆ. ಇದೀಗ ಟಿ10 ಕ್ರಿಕೆಟ್ ಪ್ರಕಾರ ಮತ್ತೆ ಆರಂಭಿಕರ ಬಿರುಸಿನ ಆಟದ ವೇಗವನ್ನು ಹೆಚ್ಚಿಸುತ್ತಿದೆ’ ಎಂದು ಹೇಳಿದ್ದಾರೆ.

‘ಟಿ20 ಕ್ರಿಕೆಟ್‌ನಲ್ಲಿ ಆರಂಭಿಕರು ಈಗ ಸ್ಫೋಟಕ ಆಟಕ್ಕಿಳಿಯಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಈ ಮೂಲಕ ಆರಂಭಿಕ 6 ಓವರ್‌ಗಳ ಮನರಂಜನೆಯನ್ನು ಸಾಯಿಸುತ್ತಿದ್ದಾರೆ. ಆದರೆ ಟಿ10 ಕ್ರಿಕೆಟ್ ಮೂಲಕ ಆರಂಭಿಕರು ಮತ್ತೆ ಮೊದಲ ಓವರ್‌ನಿಂದಲೇ ಸ್ಫೋಟಕ ಆಟಕ್ಕಿಳಿಯುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಟಿ10 ಪಂದ್ಯಗಳನ್ನು ನೋಡಬಹುದಾಗಿದೆ’ ಎಂದು ಗೇಲ್ ಹೇಳಿದ್ದಾರೆ. 42 ವರ್ಷದ ಗೇಲ್ ಟಿ10 ಲೀಗ್‌ನಲ್ಲಿ ಟೀಮ್ ಅಬುಧಾಬಿ ಪರ ಆಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net