

ನವದೆಹಲಿ: ನವೆಂಬರ್ 24 ಹಾಗೂ 25ರಂದು ನಡೆಯಲಿರುವ ಐಪಿಎಲ್ ಹರಾಜಿನತ್ತ ಎಲ್ಲರ ಚಿತ್ತ ಮೂಡಿದ್ದು, ಯಾವ ಸ್ಟಾರ್ ಆಟಗಾರರನ್ನು ಆಯಾ ಫ್ರಾಂಚೈಸಿ ಖರೀದಿ ಮಾಡಲಿದೆ? ಎಷ್ಟು ಕೋಟಿ ಹಣಕ್ಕಾಗಿ ಬಿಡ್ ಮಾಡಲಿದೆ ಎಂಬ ಲೆಕ್ಕಾಚಾರಗಳು ಸದ್ಯ ಬಿರುಸಿನಿಂದ ಸಾಗಿದೆ. ಒಂದೆಡೆ ಲೆಕ್ಕಾಚಾರಗಳೆನೋ ಜೋರಾಗಿದ್ದರೂ, ಟಾರ್ಗೆಟ್ ಮಾಡಿಕೊಂಡಿರುವ ಆಟಗಾರರನ್ನು ಖರೀದಿ ( IPL Auction) ಮಾಡೋದು ತಂಡಗಳಿಗೆ ದೊಡ್ಡ ಸವಾಲಾಗಿದೆ. ಇನ್ನು ಈ ಮಧ್ಯೆ ಭಾರತೀಯ ಆಟಗಾರರಿಗೂ ಬೇಡಿಕೆ ಹೆಚ್ಚಿದ್ದು, ಕ್ರಿಕೆಟ್ ಪ್ರಿಯರ ಮೆಚ್ಚುಗೆ ಗಳಿಸಿದವರನ್ನೇ ತಂಡಕ್ಕೆ ಖರೀದಿ ಮಾಡಲು ಫ್ರಾಂಚೈಸಿಗಳು ಚಿಂತನೆ ನಡೆಸಿವೆ.
ಸ್ಟಾರ್ ವೇಗಿಗಳು, ಸ್ಪಿನ್ನರ್ ಮತ್ತು ಬ್ಯಾಟರ್ಗಳ ಖರೀದಿಗೆ ಎದುರುನೋಡುತ್ತಿರುವ ಫ್ರಾಂಚೈಸಿಗಳು, ರಿಟೇನ್ ಆಗದ ಆಟಗಾರರು ಮತ್ತು ಹರಾಜಿಗೆ ಬಂದಿರುವ ಆಲ್ರೌಂಡ್ ಪ್ಲೇಯರ್ಗಳನ್ನು ಆಯ್ಕೆ ಮಾಡಿಕೊಳ್ಳುವುದರ ಬಗ್ಗೆ ಮ್ಯಾನೇಜ್ಮೆಂಟ್ ಜತೆಗೆ ಚರ್ಚಿಸುತ್ತಿದೆ. ಎರಡು ದಿನಗಳ ಕಾಲ ನಡೆಯಲಿರುವ ಆಕ್ಷನ್ನಲ್ಲಿ ದುಬಾರಿ ಮೊತ್ತಕ್ಕೆ ಬಲಿಷ್ಠ ತಂಡಗಳನ್ನು ಸೇರುವ ಪಟ್ಟಿಗೆ ಒಂದಷ್ಟು ವಿದೇಶಿ ಆಟಗಾರರು ಸೇರಿಕೊಂಡಿದ್ದರೆ, 15 ಕೋಟಿ ರೂ. ಪಡೆಯುವ ಸಾಲಿಗೆ ಭಾರತೀಯ ಸ್ಟಾರ್ ಕ್ರಿಕೆಟಿಗರು ಸೇರಿದ್ದಾರೆ. ಇದು ಹಲವರ ಕುತೂಹಲ ಹೆಚ್ಚಿಸಿದೆ. ಯಾರು ಆ ನಾಲ್ವರು ಆಟಗಾರರು? ಎಂಬುದರ ವಿವರ ಹೀಗಿದೆ.
ಹರಾಜಿಗೂ ಮುನ್ನ ನಡೆದ ರಿಟೆನ್ಶನ್ ಪ್ರಕ್ರಿಯೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನಿಂದ ರಿಷಭ್ ಪಂತ್, ಲಖನೌ ಸೂಪರ್ ಜೈಂಟ್ಸ್ನಿಂದ ಕೆ.ಎಲ್. ರಾಹುಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ಕೋಲ್ಕತ ನೈಟ್ ರೈಡರ್ಸ್ನಿಂದ ಶ್ರೇಯಸ್ ಅಯ್ಯರ್, ಮಿಚೆಲ್ ಸ್ಟಾರ್ಕ್ ಸೇರಿದಂತೆ ಮುಂತಾದವರು ತಮ್ಮ ತಂಡದಲ್ಲಿ ಉಳಿಯದೆ, ಇದೀಗ ಹರಾಜಿನತ್ತ ಮುಖ ಮಾಡಿದ್ದಾರೆ. ಈ ಸ್ಟಾರ್ ಆಟಗಾರರ ಪೈಕಿ ರಿಷಭ್, ಅರ್ಷದೀಪ್ ಸಿಂಗ್, ಶ್ರೇಯಸ್ ಮತ್ತು ಕೆ.ಎಲ್. ರಾಹುಲ್ಗೆ ಆಯಾ ಫ್ರಾಂಚೈಸಿಗಳು 15 ಕೋಟಿ ರೂ. ಮೊತ್ತಕ್ಕೆ ಖರೀದಿ ಮಾಡಲು ಮುಂದಾಗಲಿದೆ ಎಂದು ವರದಿಯೊಂದು ಉಲ್ಲೇಖಿಸಿದೆ. ಇದು ನಿಜವೇ? ಅಸಲಿಗೆ ಯಾರಿಗೆ ಎಷ್ಟು ಕೋಟಿ ರೂ. ಸಿಗಬಹದು ಎಂಬುದನ್ನು ನಾಳೆ ನಡೆಯಲಿರುವ ಹರಾಜಿನಲ್ಲಿ ಕಾದುನೋಡಬೇಕಿದೆ,(ಏಜೆನ್ಸೀಸ್).