

Asia Cup 2025: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 2-2ರಲ್ಲಿ ಸಮಬಲಗೊಳಿಸಿದ ಟೀಮ್ ಇಂಡಿಯಾ, ಕೊನೆಯ ಪಂದ್ಯವನ್ನು ಗೆದ್ದು ಬೀಗುವ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿ ಅತೀವ ಸಂತಸ ಮೂಡಿಸಿತು. ಇದೇ ಖುಷಿಯಲ್ಲಿರುವ ಭಾರತ ತಂಡ ಮುಂಬರುವ ಏಷ್ಯಾ ಕಪ್ 2025ರ ಟಿ20 ಸರಣಿಗೆ ಎದುರುನೋಡುತ್ತಿದೆ. ಈ ತಂಡದಲ್ಲಿ ಯಾರೆಲ್ಲಾ ಇರಲಿದ್ದಾರೆ? ಯಾರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸಾಗಲಿದೆ ಎಂಬ ಕೌತುಕ ಹಲವರಲ್ಲಿ ಮೂಡಿದೆ.
ಬಹುನಿರೀಕ್ಷಿತ ಏಷ್ಯಾ ಕಪ್ ಇದೇ ಸೆಪ್ಟೆಂಬರ್ 9ರಿಂದ ಆರಂಭವಾಗಲಿದೆ. ಸೌದಿಯಲ್ಲಿ ನಡೆಯಲಿರುವ ಈ ಮೆಗಾ ಟೂರ್ನಮೆಂಟ್‌ನಲ್ಲಿ 8 ತಂಡಗಳು ಟ್ರೋಫಿಗಾಗಿ ಭಾರೀ ಪೈಪೋಟಿಗಿಳಿಯಲಿವೆ. ಅಂತಿಮ ಪಂದ್ಯ ಸೆಪ್ಟೆಂಬರ್ 28ರಂದು ದುಬೈನಲ್ಲಿ ನಡೆಯಲಿದೆ. ಇನ್ನು ಈ ಟಿ20 ಸರಣಿಯಲ್ಲಿ ಭಾರತದ ವೈರಿ ಪಾಕ್ ವಿರುದ್ಧದ ಪಂದ್ಯ ಸೆಪ್ಟೆಂಬರ್ 14ರಂದು ನಡೆಯಲಿದೆ. ಇದು ಕ್ರಿಕೆಟ್ ಪ್ರೇಮಿಗಳ ರೋಚಕ ಹಾಗೂ ಕುತೂಹಲಕಾರಿ ಪಂದ್ಯ ಎಂಬುದರಲ್ಲಿ ಅನುಮಾನವೇ ಬೇಡ.
ಆಯ್ಕೆಗಾರರು ಆಗಸ್ಟ್ ಮೂರನೇ ವಾರದಲ್ಲಿ ತಂಡವನ್ನು ಘೋಷಿಸುವ ಸಾಧ್ಯತೆಯಿದೆ. ಟಿ20 ಫಾರ್ಮೆಟ್ನಲ್ಲಿ ನಡೆಯಲಿರುವ ಈ ಮೆಗಾ ಟೂರ್ನಮೆಂಟ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಇಬ್ಬರು ಅಥವಾ ಮೂವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಿವೆ ಎಂದು ವರದಿಗಳು ಉಲ್ಲೇಖಿಸಿವೆ. ಹಾಗಿದ್ದರೆ, ಯಾರು ಆ ಮೂವರು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕೆಲವು ಸಮಯದಿಂದ ಟೀಮ್ ಇಂಡಿಯಾದ ಟಿ20 ತಂಡಕ್ಕೆ ಉತ್ತಮ ಆರಂಭಿಕ ಆಟಗಾರರಾಗಿ ಅಭಿಷೇಕ್ ಶರ್ಮ ಗುರುತಿಸಿಕೊಂಡಿದ್ದಾರೆ. ಸಂಜು ಸ್ಯಾಮ್ಸನ್ ಜೊತೆಗೆ ಅವರು ತಂಡಕ್ಕೆ ಗಮನಾರ್ಹ ಆರಂಭವನ್ನು ನೀಡುತ್ತಿದ್ದಾರೆ. ಐಪಿಎಲ್ 2025ರ ಆವೃತ್ತಿಯಲ್ಲಿ ಶತಕಗಳು ಹಾಗೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಾನು ಟಿ20 ಸ್ಪೆಷಲಿಸ್ಟ್ ಎಂಬುದನ್ನು ಅಭಿಷೇಕ್ ಸಾಬೀತುಪಡಿಸಿದ್ದಾರೆ. ಎಡಗೈ ಬ್ಯಾಟರ್ ಆಗಿರುವುದರಿಂದ, ಶರ್ಮಗೆ ಈ ಬಾರಿಯ ಏಷ್ಯಾ ಕಪ್‌ನಲ್ಲಿ ಸ್ಥಾನ ಸಿಗಬಹುದು.
ಹಾರ್ದಿಕ್ ಪಾಂಡ್ಯ ಬಳಿಕ ಭಾರತ ತಂಡದ ನಿಯಮಿತ ಆಲ್‌ರೌಂಡರ್ ಆಗಿರುವ ಆಂಧ್ರ ಹುಡುಗ ನಿತೀಶ್ ಕುಮಾರ್ ರೆಡ್ಡಿ, ಯುಎಇ ಪಿಚ್‌ಗೆ ಸೂಕ್ತ ಎನ್ನಬಹುದು. ಕಾರಣ, ಈ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕರ. ಹಾರ್ದಿಕ್ ಈಗಾಗಲೇ ಪೇಸ್ ಆಲ್‌ರೌಂಡರ್ ಆಗಿರುವುದರಿಂದ, ನಿತೀಶ್ ಕುಮಾರ್ ರೆಡ್ಡಿಗೆ ಸ್ಥಾನ ಸಿಗುವುದು ಕಷ್ಟಕರವೇ.
ಆಯ್ಕೆಗಾರರು ತಂಡದಲ್ಲಿ ಇಬ್ಬರು ಪೇಸ್ ಆಲ್‌ರೌಂಡರ್‌ಗಳಿಗೆ ಸ್ಥಾನ ನೀಡಲು ಯೋಚಿಸಿದರೂ, ಅಲ್ಲಿ ನಿತೀಶ್, ಶಿವಂ ದುಬೆಯೊಂದಿಗೆ ಪೈಪೋಟಿ ನಡೆಸಬೇಕು. ಇದರ ಹೊರತಾಗಿ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿತೀಶ್ ಕುಮಾರ್ ರೆಡ್ಡಿ ಗಾಯಗೊಂಡಿರುವ ಹಿನ್ನೆಲೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳು ಕಡಿಮೆಯಿದೆ. ಆದರೆ, ನಿತೀಶ್ ಹೆಸರು ಆಯ್ಕೆಗಾರರ ಗಮನದಲ್ಲಿದೆ.
ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕ ಆಟಗಾರರಾದರೆ, ಇಶಾನ್ ಕಿಶನ್‌ಗೆ ಓಪನಿಂಗ್ ಸ್ಥಾನ ಸಿಗುವುದು ಬಹುತೇಕ ಅನುಮಾನ. ಸ್ಯಾಮ್ಸನ್ ವಿಕೆಟ್ ಕೀಪರ್-ಬ್ಯಾಟರ್ ಆಗಿರುವುದರಿಂದ ಅವರಿಗೆ ಸ್ಥಾನ ಸಿಗುವುದು ಅಷ್ಟು ಸುಲಭವಿಲ್ಲ. ಈ ಪೈಕಿ ತಂಡದಲ್ಲಿ ಮತ್ತೊಬ್ಬ ವಿಕೆಟ್ ಕೀಪರ್ ಜಾಗದಲ್ಲಿರುವ ಧ್ರುವ್ ಜುರೆಲ್ ಜತೆ ಕಿಶನ್ ಸ್ಪರ್ಧಿಸಬೇಕಾಗುತ್ತದೆ. ಈ ಮೂವರಲ್ಲಿ ಯಾರಿಗೆ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಸಿಗಲಿದೆ ಎಂಬುದು ಸದ್ಯ ಕುತೂಹಲಕಾರಿ,(ಏಜೆನ್ಸೀಸ್).