

ನವದೆಹಲಿ: ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರು ಟಿ20 ನಾಯಕನಾಗಿ ಮೊದಲ ಸವಾಲನ್ನು ಎದುರಿಸುತ್ತಿದ್ದಾರೆ. ಟಿ20 ವಿಶ್ವಕಪ್ 2024 ಗೆದ್ದ ನಂತರ ರೋಹಿತ್ ಶರ್ಮ ಅಂತಾರಾಷ್ಟ್ರೀಯ ಟಿ20 ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದರಿಂದ ಬಿಸಿಸಿಐ ಅವರ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ನೇಮಿಸಿದೆ. ಸೂರ್ಯಕುಮಾರ್ ಈ ಹಿಂದೆ ಭಾರತ ತಂಡದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ ಆಗ ಅವರು ಕೇವಲ ಆಕ್ಟಿಂಗ್ ಕ್ಯಾಪ್ಟನ್ ಆಗಿದ್ದರು. ಆದರೆ, ಈಗ ಸಂಪೂರ್ಣ ನಾಯಕರಾಗಿ ನೇಮಕಗೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಪೂರ್ಣ ನಾಯಕನಾಗಿ ಮುನ್ನಡೆಸಲಿದ್ದಾರೆ. ಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿ ಇಂದಿನಿಂದ ಆರಂಭವಾಗಿದೆ. ಮೊದಲ ಟಿ20 ಪಂದ್ಯ ಪಲ್ಲೆಕಲೆ ಮೈದಾನದಲ್ಲಿ ಶನಿವಾರ ರಾತ್ರಿ 7.30ಕ್ಕೆ ಆರಂಭವಾಗಿದೆ. ಮೊದಲ ಪಂದ್ಯಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರಿಗಾಗಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಸೂರ್ಯಕುಮಾರ್ ಯಶಸ್ವಿಯಾಗಬೇಕೆಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ ಎಂದು ಕೈಫ್ ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ ಟಿ20 ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಮಾಜಿ ನಾಯಕ ರೋಹಿತ್ ಶರ್ಮ ನಾಯಕತ್ವದಲ್ಲಿ ಸೂರ್ಯ ಸುದೀರ್ಘ ಕಾಲ ಆಡಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಆಡುವುದು ಸೂರ್ಯ ಅವರಿಗೆ ತುಂಬಾ ಇಷ್ಟ. ಆ ಅನುಭವವನ್ನು ಈಗ ಬಳಸಬಹುದು. ಆದರೆ, ನಾಯಕತ್ವದ ಅವಧಿಯಲ್ಲಿ ಟೀಕೆ-ಟಿಪ್ಪಣಿಗಳು ಬರಬಹುದು. ಸೂರ್ಯ ಅವರ ಜೊತೆ ನಾವೆಲ್ಲರು ನಿಲ್ಲಬೇಕು ಎಂದು ಕೈಫ್ ಹೇಳಿದ್ದಾರೆ.
ರೋಹಿತ್ ಶರ್ಮ ಈ ಹಿಂದೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಏಕದಿನ ವಿಶ್ವಕಪ್ ಸೋಲಿನ ಬಳಿಕವೂ ಅನೇಕರು ರೋಹಿತ್ಗೆ ಶಾಪ ಹಾಕಿದರು. ಅಲ್ಲದೆ, ಐಪಿಎಲ್ 2024 ರಲ್ಲಿ ದಯನೀಯವಾಗಿ ವಿಫಲವಾದ ಬಳಿಕ ರೋಹಿತ್ ಶರ್ಮ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಏಕೆ ಎಂಬ ಪ್ರಶ್ನೆಗಳು ಬಂದವು. ಆದರೆ, ಅಷ್ಟೆಲ್ಲ ಟೀಕೆಗಳನ್ನು ಸಮಾಧಾನದಿಂದಲೇ ಎದುರಿಸಿದ ರೋಹಿತ್, ತಮ್ಮ ಅನುಭವದಿಂದ ಭಾರತಕ್ಕೆ ಟಿ20 ವಿಶ್ವಕಪ್ ನೀಡಿದರು. ಅದೇ ರೀತಿ ಸೂರ್ಯ, ಟೀಮ್ ಇಂಡಿಯಾವನ್ನು ಅದ್ಭುತವಾಗಿ ಮುನ್ನಡೆಸಬೇಕು. ನಾಯಕನಾಗಿ ನೀವು ರೋಹಿತ್ ಶರ್ಮ ಅವರ ಕಷ್ಟದ ಸಮಯಗಳನ್ನು ಮತ್ತು ಟೀಕೆಗಳನ್ನು ನೆನಪಿಸಿಕೊಳ್ಳಿ ಎಂದು ಹೇಳುವ ಮೂಲಕ ಕೈಫ್ ಸೂರ್ಯ ಅವರಿಗೆ ಉತ್ತಮ ಸಲಹೆ ನೀಡಿದರು. (ಏಜೆನ್ಸೀಸ್)