ಅಂದು ಟ್ಯಾಕ್ಸಿ ಡ್ರೖೆವರ್, ಇಂದು ಗ್ರಾಂಡ್ ಸ್ಲಾಂ ವಿಜೇತ ಕೋಚ್!

TAXI
Published on

ಮೆಲ್ಬೋರ್ನ್: ನ್ಯೂಯಾರ್ಕ್ ನಗರದಲ್ಲಿ ಟ್ಯಾಕ್ಸಿ ಡ್ರೖೆವರ್ ಆಗಿದ್ದ ಅಲೆಕ್ಸ್ ಕೆನಿನ್ ಅವರೀಗ ಗ್ರಾಂಡ್ ಸ್ಲಾಂ ಪ್ರಶಸ್ತಿ ವಿಜೇತೆಗೆ ತರಬೇತಿ ನೀಡಿದ ಕೋಚ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರೇ, ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ವಿಜೇತೆ ಸೋಫಿಯಾ ಕೆನಿನ್ ಅವರ ತಂದೆ! ರಷ್ಯಾ ಮೂಲದ ಅಲೆಕ್ಸ್ ಅವರೇ ಮಗಳನ್ನು ಟೆನಿಸ್ ಆಟಗಾರ್ತಿಯಾಗಿ ಬೆಳೆಸಿದ್ದರು.

ಟೆನಿಸ್ ಬಗ್ಗೆ ಹೆಚ್ಚಿನ ಜ್ಞಾನ ಇಲ್ಲದಿದ್ದರೂ, ಅವರೇ ಮಗಳಿಗೆ ಮೊದಲ ಕೋಚ್ ಆಗಿದ್ದರು. ‘ಇತರ ಕೋಚ್​ಗಳು ತಮ್ಮ ಆಟಗಾರರಿಗೆ ಯಾವ ರೀತಿ ತರಬೇತಿ ನೀಡುತ್ತಾರೆ ಎಂಬುದನ್ನು ಗಮನಿಸಿ ತಂದೆ ನನಗೆ ತರಬೇತಿ ನೀಡುತ್ತಿದ್ದರು. ಆದರೆ ಅವರು ಸರಿಯಾದ ಯೋಜನೆ ಮತ್ತು ಕಾರ್ಯತಂತ್ರಗಳೊಂದಿಗೆ ಬರುತ್ತಿದ್ದರು’ ಎಂದು 21 ವರ್ಷದ ಸೋಫಿಯಾ ಮೆಲುಕು ಹಾಕಿದ್ದಾರೆ.

ಟೆನಿಸ್ ಕೋಚ್​ಗಳಾಗಿ ಗ್ರಾಂಡ್ ಸ್ಲಾಂ ವಿಜೇತರನ್ನು ರೂಪಿಸಿದ ತಂದೆಯಂದಿರಾದ ರಿಚರ್ಡ್ ವಿಲಿಯಮ್್ಸ (ಸೆರೇನಾ-ವೀನಸ್), ಮೈಕ್ ಅಗಾಸಿ (ಆಂಡ್ರೆ ಅಗಾಸಿ) ಮತ್ತು ಯುರಿ ಶರಪೋವಾ (ಮರಿಯಾ ಶರಪೋವಾ) ಅವರ ಸಾಲಿಗೆ ಈಗ ಅಲೆಕ್ಸ್ ಕೂಡ ಸೇರ್ಪಡೆಗೊಂಡಿದ್ದಾರೆ. 1987ರಲ್ಲಿ ಪತ್ನಿ ಲೆನಾ ಮತ್ತು ಕೆಲವೇ ತಿಂಗಳು ವಯಸ್ಸಿನ ಪುತ್ರಿ ಸೋಫಿಯಾ ಜತೆಗೆ ರಷ್ಯಾದಿಂದ ಅಮೆರಿಕಕ್ಕೆ ವಲಸೆ ಹೋದಾಗ ಅಲೆಕ್ಸ್ ಕೈಯಲ್ಲಿ ಕೆಲವೇ ಡಾಲರ್​ಗಳಿದ್ದವು. ಅರೆಬರೆ ಇಂಗ್ಲಿಷ್ ತಿಳಿದಿದ್ದ ಅವರು ಟ್ಯಾಕ್ಸಿ ಓಡಿಸಿ ಕುಟುಂಬ ನಡೆಸಿದ್ದರು.

ನರ್ಸ್ ಆಗಿರುವ ಸೋಫಿಯಾ ತಾಯಿ ಲೆನಾ, ಟಿವಿಯಲ್ಲಿ ಪಂದ್ಯ ನೋಡಿದರೆ ಮಗಳಿಗೆ ದುರದೃಷ್ಟವಾಗುತ್ತದೆ ಎಂಬ ಮೂಢನಂಬಿಕೆಯಿಂದಾಗಿ ಶನಿವಾರದ ಫೈನಲ್ ಪಂದ್ಯ ವೀಕ್ಷಿಸಿರಲಿಲ್ಲ. ಬಳಿಕ ಸೋಫಿಯಾ ಮೊಬೈಲ್ ಕರೆ ಮಾಡಿ ಗೆಲುವನ್ನು ತಾಯಿಗೆ ತಿಳಿಸಿದ್ದರು. (ಪಿಟಿಐ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net