ಇಂದು ಭಾರತ-ಆಸೀಸ್ 2ನೇ ಟಿ20: ಜಯದ ಹುಮ್ಮಸ್ಸಿನಲ್ಲಿ ಸೂರ್ಯ ಕುಮಾರ್ ಸಾರಥ್ಯದ ಯುವ ಪಡೆ, ಪಂದ್ಯಕ್ಕೆ ಮಳೆ ಭೀತಿ

Published on

ತಿರುವನಂತಪುರ: ಕೊನೆಯ ಎಸೆತದಲ್ಲಿ ರೋಚಕ ಗೆಲುವಿನೊಂದಿಗೆ ಸರಣಿಯಲ್ಲಿ ಶುಭಾರಂಭ ಕಂಡಿರುವ ಯುವ ಭಾರತ ತಂಡ ಜಯದ ಓಟ ಮುಂದುವರಿಸುವ ಹುಮ್ಮಸ್ಸಿನಲ್ಲಿದೆ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯ ಭಾನುವಾರ ಗ್ರೀನ್ ಫೀಲ್ಡ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸೂರ್ಯಕುಮಾರ ಯಾದವ್ ಸಾರಥ್ಯದ ತಂಡ ಮುನ್ನಡೆ ಕಾಯ್ದುಕೊಳ್ಳುವ ಹಂಬಲದಲ್ಲಿದ್ದು, ಏಕದಿನ ವಿಶ್ವ ಚಾಂಪಿಯನ್ ಆಸೀಸ್ ತಂಡ ಪುಟಿದೇಳುವ ನಿರೀಕ್ಷೆಯಲ್ಲಿದೆ.

ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ವೇಗಿಗಳ ಮೊನಚಿಲ್ಲದ ಬೌಲಿಂಗ್ ನಡುವೆಯೂ ಗೆಲುವು ಒಲಿಸಿಕೊಂಡಿರುವ ಭಾರತದ ಬ್ಯಾಟಿಂಗ್‌ನಲ್ಲಿ ಅಮೋಘ ನಿರ್ವಹಣೆ ತೋರಿದೆ. ಮೊದಲ ಪಂದ್ಯದ ಕೆಲ ಎಡವಟ್ಟುಗಳನ್ನು ತಿದ್ದಿಕೊಂಡು ಕಣಕ್ಕಿಳಿಯುವ ನಿರೀಕ್ಷೆಗಳಿವೆ. ಋತುರಾಜ್ ಗಾಯಕ್ವಾಡ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದರು. ಟಿ20 ತಂಡದ ಬ್ಯಾಟಿಂಗ್ ಆಧಾರಸ್ತಂಭ ಎನಿಸಿರುವ ಇಶಾನ್ ಕಿಶನ್, ಮಿ.360 ಸೂರ್ಯಕುಮಾರ್ ಯಾದವ್ ಭರ್ಜರಿ ಾರ್ಮ್‌ನಲ್ಲಿದ್ದು, ಇವರಿಬ್ಬರ ಅಮೋಘ ಬ್ಯಾಟಿಂಗ್ ಹಾಗೂ ಅಂತಿಮ ಸಮಯದಲ್ಲಿ ರಿಂಕು ಸಿಂಗ್ ನಡೆಸಿದ ಹೋರಾಟದಿಂದ ಬೃಹತ್ ಮೊತ್ತವನ್ನು ಯಶಸ್ವಿ ಚೇಸಿಂಗ್ ನಡೆಸಿತು.ಮುಂದಿನ ವರ್ಷದ ಟಿ20 ವಿಶ್ವಕಪ್ ತಂಡದ ಆಟಗಾರರ ರೇಸ್‌ನಲ್ಲಿರುವ ಋತುರಾಜ್ ಗಾಯಕ್ವಾಡ್ ಹಾಗೂ ತಿಲಕ್ ವರ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಸರಣಿ ಉತ್ತಮ ವೇದಿಕೆಯಾಗಿದೆ. ಗೆಲುವಿನ ಸಮೀಪದಲ್ಲಿ ದಿಢೀರ್ ಕುಸಿತ ಕಂಡ ಮಧ್ಯಕ್ರಮಾಂಕ

ಎಚ್ಚೆತುಕೊಳ್ಳಬೇಕಿದೆ. ರಿಂಕು ಸಿಂಗ್ ಒತ್ತಡ ನಡುವೆಯೂ ತಂಡಕ್ಕೆ ಗೆಲುವು ತಂದುಕೊಡುವ ಮೂಲಕ ನಿರೀಕ್ಷೆ ಹೆಚ್ಚಿಸಿದ್ದಾರೆ.

ಇನ್ನೂ ಜೋಶ್ ಇಂಗ್ಲಿಸ್ ಶತಕದ ರನ್ ಪ್ರವಾಹದ ನಡುವೆಯೂ ಅನನುಭವಿ ಬೌಲಿಂಗ್ ವಿಭಾಗದಿಂದ ಸೋಲು ಕಂಡಿರುವ ಆಸ್ಟ್ರೇಲಿಯಾ ತಂಡ ಆತಿಥೇಯರಿಗೆ ತಿರುಗೇಟು ನೀಡುವ ತವಕದಲ್ಲಿದೆ. ಅನುಭವಿ ಬ್ಯಾಟರ್ ಸ್ಟೀವನ್ ಸ್ಮಿತ್ ನಿಧಾನಗತಿಯ ಬ್ಯಾಟಿಂಗ್ ತಂಡಕ್ಕೆ ಹಿನ್ನಡೆ ಉಂಟು ಮಾಡಿತ್ತು. ವಿಶ್ವಕಪ್‌ನಲ್ಲಿ ಆಡಿದ ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಆಡಂ ಜಂಪಾ 2ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.

*ಆರಂಭ: ರಾತ್ರಿ 7.00

*ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ, ಡಿಡಿ.

ಮಳೆಯ ಮುನ್ಸೂಚನೆ

ತಿರುವನಂತಪುರದಲ್ಲಿ ಶನಿವಾರ ಸಂಜೆ ಮಳೆಯಾಗಿದ್ದು. ಭಾರತ-ಆಸೀಸ್ ನಡುವಿನ 2ನೇ ಟಿ20 ಪಂದ್ಯಕ್ಕೂ ಪಂದ್ಯಕ್ಕೆ ಶೇ.25 ರಷ್ಟು ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net