ಇಂದು ಸೂಪರ್‌ಜೈಂಟ್ಸ್-ಟೈಟಾನ್ಸ್ ಫೈಟ್: ಶುಭಮಾನ್ ಗಿಲ್ ಪಡೆಗೆ ಅಗ್ರಸ್ಥಾನ ಕಾಯ್ದುಕೊಳ್ಳುವ ಹಂಬಲ

New Project (1)
Published on

ಲಖನೌ: ಸತತ 4 ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಹಾಗೂ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಆತಿಥೇಯ ಲಖನೌ ಸೂಪರ್‌ಜೈಂಟ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಶನಿವಾರ ಮುಖಾಮುಖಿ ಆಗಲಿವೆ. ಏಕನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೂರ್ನಿಯಲ್ಲಿ ಅಸ್ಥಿರ ನಿರ್ವಹಣೆ ಹೊಂದಿರುವ ಶುಭಮಾನ್ ಗಿಲ್ ಹಾಗೂ ರಿಷಭ್ ಪಂತ್ ಪರಸ್ಪರ ಎದುರಾಗಲಿದ್ದಾರೆ.

ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಸಂಘಟಿತ ನಿರ್ವಹಣೆಯಿಂದ ಆಡಿರುವ 5 ಪಂದ್ಯಗಳಲ್ಲಿ 4 ಗೆಲುವು, 1 ಸೋಲಿನೊಂದಿಗೆ 8 ಅಂಕ ಹೊಂದಿದ್ದು, ರನ್‌ರೇಟ್ ಆಧಾರದಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಇಷ್ಟೇ ಪಂದ್ಯಗಳನ್ನಾಡಿರುವ ಲಖನೌ ತಂಡ 3ರಲ್ಲಿ ಗೆದ್ದು, 2ರಲ್ಲಿ ಸೋತಿದೆ. 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಸುಧಾರಿಸುವ ತವಕದಲ್ಲಿದೆ.

ನಿಕೋಲಸ್ ಪೂರನ್ ಭರ್ಜರಿ ಾರ್ಮ್‌ನಲ್ಲಿದ್ದು, ಟೂರ್ನಿಯಲ್ಲಿ ಗರಿಷ್ಠ ರನ್ ಸ್ಕೋರರ್ ಎನಿಸಿದ್ದಾರೆ.

ಮಿಚೆಲ್ ಮಾರ್ಷ್ ಸಹ ಬಿರುಸಿನ ಆರಂಭಿಸಿ ಲಖನೌ ತಂಡದ ಬೃಹತ್ ಮೊತ್ತ ಗಳಿಸಲು ನೆರವಾಗುತ್ತಿದ್ದಾರೆ. ಪೂರನ್ ಒಬ್ಬರೇ ಏಕಾಂಗಿಯಾಗಿ ಸೀಸನ್‌ನಲ್ಲಿ 24 ಸಿಕ್ಸರ್ ಸಿಡಿಸಿದ್ದು, ಲಖನೌ ಹಿಂದಿನ ಎರಡು ಪಂದ್ಯಗಳಲ್ಲಿ 200 ಪ್ಲಸ್ ರನ್‌ಗಳಿಸಿದೆ. ಟೂರ್ನಿಯ ಗರಿಷ್ಠ ವಿಕೆಟ್ ಟೇಕರ್‌ಗೆ ನೀಡಲಾಗುವ ಪರ್ಪಲ್ ಕ್ಯಾಪ್ ರೇಸ್‌ನಲ್ಲಿರುವ ತಲಾ 10 ವಿಕೆಟ್ ಕಬಳಿಸಿರುವ ಗುಜರಾತ್‌ನ ವೇಗಿ ಮೊಹಮದ್ ಸಿರಾಜ್, ಎಡಗೈ ಸ್ಪಿನ್ನರ್ ಸಾಯಿ ಕಿಶೋರ್ ಜತೆಗೆ ಕನ್ನಡಿಗ ಪ್ರಸಿದ್ಧ ಕೃಷ್ಣ ಪರಿಣಾಮಕಾರಿ ಬೌಲಿಂಗ್ ವಿಭಾಗ ಎದುರು ಲಖನೌಗೆ ಸವಾಲು ಎದುರಾಗುವ ಸಾಧ್ಯತೆಗಳಿವೆ.

ಮುಖಾಮುಖಿ: 5

ಲಖನೌ:1

ಗುಜರಾತ್: 4

ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.

ನಾಯಕರ ರನ್‌ಬರ

ಟೂರ್ನಿಯ ದುಬಾರಿ ಆಟಗಾರ ಎನಿಸಿರುವ ರಿಷಭ್ ಪಂತ್ ಇದುವರೆಗೆ ಆವೃತ್ತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಿಲ್ಲ. 4 ಇನಿಂಗ್ಸ್‌ಗಳಲ್ಲಿ ಕೇವಲ 19 ರನ್‌ಗಳಿಸಿದ್ದಾರೆ. 2023ರ ಆವೃತ್ತಿಯಲ್ಲಿ 890 ರನ್‌ಗಳಿಸಿದ್ದ ಶುಭಮಾನ್, ಹಾಲಿ ಋತುವಿನ 5 ಇನಿಂಗ್ಸ್‌ಗಳಲ್ಲಿ 146ರ ಸ್ಟ್ರೈಕ್‌ರೇಟ್‌ನಲ್ಲಿ 148 ರನ್ ಕಲೆಹಾಕಿದ್ದಾರೆ. ಇವರಿಗೆ ನಾಯಕತ್ವದ ಜವಾಬ್ದಾರಿ ಬ್ಯಾಟಿಂಗ್‌ನಲ್ಲಿ ಒತ್ತಡದಲ್ಲಿ ಸಿಲುಕಿಸಿದಂತಿದೆ. ನಾಯಕರಿಬ್ಬರು ಟೂರ್ನಿಯಲ್ಲಿ ರನ್‌ಬರ ಎದುರಿಸುತ್ತಿರುವುದು ತಂಡಕ್ಕೆ ಹಿನ್ನಡೆ ಎನಿಸಿದೆ. ಸಾಯಿ ಸುದರ್ಶನ್ (273 ರನ್) ಹಾಗೂ ಜೋಸ್ ಬಟ್ಲರ್ (203 ರನ್) ಗುಜರಾತ್ ಟೈಟಾನ್ಸ್ ಬ್ಯಾಟಿಂಗ್‌ನ ಆಧಾರ ಸ್ತಂಭಗಳಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಪದೇ ಪದೆ ಬದಲಾವಣೆಗಳ ಜತೆಗೆ ಇಂಪ್ಯಾಕ್ಟ್ ಪ್ಲೇಯರ್ ಸಹ ಗುಜರಾತ್ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವಹಿಸಿದೆ. ಮಿಸ್ಟರಿ ಸ್ಪಿನ್ನರ್ ಎನಿಸಿರುವ ದೆಹಲಿ ಮೂಲದ ದಿಗ್ವೇಶ್ ರಾಥಿ ಲಖನೌ ಬೌಲಿಂಗ್‌ನ ಪ್ರಮುಖ ಬಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net